Advertisement

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

08:21 PM Oct 22, 2021 | Team Udayavani |

ಮಹಾನಗರ: ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಯ ನಿಟ್ಟಿನಲ್ಲಿ ಮಂಗಳೂರು ಪೊಲೀಸರು ಮಹತ್ವದ ಹೆಜ್ಜೆ ಇಟ್ಟಿದ್ದು, ಮಂಗಳೂರು ಸ್ಮಾರ್ಟ್‌ ಸಿಟಿಯ “ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌’ ಅನ್ನು ಇದೀಗ ಖುದ್ದು ಪೊಲೀಸರೇ ನಿರ್ವಹಿಸಲು ಆರಂಭಿಸಿದ್ದಾರೆ.

Advertisement

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಂಚಾರ ನಿಯಂತ್ರಣ, ಅಪರಾಧ ಪತ್ತೆ ಮೊದಲಾದ ಉದ್ದೇಶದಿಂದ “ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌’ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಸ್ಮಾರ್ಟ್‌ ಸಿಟಿ ಸಿಬಂದಿಯೇ ನಿಭಾಯಿಸುತ್ತಿದ್ದರು. ಪೊಲೀಸರೊಂದಿಗೆ ನೇರ ಸಂಪರ್ಕವಿರಲಿಲ್ಲ. ಅಗತ್ಯ ಬಿದ್ದಾಗ ಮಾತ್ರ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದರು.

ಪಿಟಿಝಡ್‌ ಕೆಮರಾ ಬಳಕೆ
ಸ್ಮಾರ್ಟ್‌ ಸಿಟಿಯಿಂದ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ 60ಕ್ಕೂ ಅಧಿಕ ಫಿಕ್ಸ್‌ಡ್‌ ಕೆಮರಾಗಳನ್ನು ಅಳವಡಿಸಲಾಗಿದ್ದು, ಇದರ ಜತೆಗೆ 15ಕ್ಕೂ ಅಧಿಕ ಅತ್ಯಾಧುನಿಕ ಪಿಟಿಝಡ್‌ ಕೆಮರಾಗಳನ್ನು ಅಳವಡಿಸಲಾಗಿದೆ. ಇವು ಎಲ್ಲ ದಿಕ್ಕುಗಳಿಂದಲೂ ಹೆಚ್ಚು ಸ್ಪಷ್ಟವಾದ ಚಿತ್ರಗಳನ್ನು ರವಾನಿಸುತ್ತವೆ. ಗರಿಷ್ಠ ಝೂಮ್‌ ಮಾಡುವುದು ಕೂಡ ಸಾಧ್ಯವಾಗುತ್ತದೆ. ಇದಕ್ಕೆ ಪೂರಕವಾಗಿ ಬ್ರ್ಯಾಂಡ್‌ ಸಂಪರ್ಕವನ್ನು ಮೇಲ್ದರ್ಜೆಗೇರಿಸಲಾಗಿದೆ. ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ಗೆ ಬರುವ ಎಲ್ಲ ಮಾಹಿತಿಗಳು ಸಂಚಾರಿ ಪೊಲೀಸ್‌ನ ಆಟೋಮೇಷನ್‌ ಸೆಂಟರ್‌ಗೆ ರವಾನೆಯಾಗುತ್ತಿದ್ದು, ಅಲ್ಲಿ ಪೊಲೀಸರು ದೃಶ್ಯಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ.

150ರಿಂದ 200 ಪ್ರಕರಣ
ಈಗ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ ಮತ್ತು ಅಟೋಮೇಷನ್‌ ಸೆಂಟರ್‌ಗಳ ಮೂಲಕ ಸಂಚಾರಿ ಪೊಲೀಸರು ದಿನಕ್ಕೆ 150ರಿಂದ 200 ವಾಹನ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ಸಂಬಂಧಿಸಿದವರಿಗೆ ನೋಟಿಸ್‌ ಕಳುಹಿಸುತ್ತಿದ್ದಾರೆ. ಸದ್ಯ 15 ಕಡೆಗಳಲ್ಲಿ ಕೆಮರಾ ಪೋಲ್‌ಗ‌ಳನ್ನು ಅಳವಡಿಸಲಾಗಿದ್ದು, 2ನೇ ಹಂತದಲ್ಲಿ 15 ಪೋಲ್‌ಗ‌ಳಲ್ಲಿ ಮತ್ತೆ ಸುಮಾರು 60 ಕೆಮರಾಗಳನ್ನು ಅಳವಡಿಸಲಾಗುವುದು. ಸುರತ್ಕಲ್‌ವರೆಗೂ ಕೆಮರಾ ನಿಗಾ ಇರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

Advertisement

ಪೊಲೀಸರ ನಿಯುಕ್ತಿ
ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ಗೆ ನಾಲ್ವರು ಪೊಲೀಸ್‌ ಸಿಬಂದಿಯನ್ನು ಈಗಾಗಲೇ ನಿಯೋ ಜಿಸಲಾಗಿದ್ದು, ಮೇಲು ಸ್ತುವಾರಿಯ ಜವಾಬ್ದಾರಿಯನ್ನು ಎಸ್‌ಐ, ಎಎಸ್‌ಐಗೆ ನೀಡಲಾಗಿದೆ. ಕಂಟ್ರೋಲ್‌ ಸೆಂಟರ್‌ನಿಂದ ಆಟೋಮೇಷನ್‌ ಸೆಂಟರ್‌ಗೆ ಆನ್‌ಲೈನ್‌ ಮೂಲಕ ಅಥವಾ ಪೆನ್‌ಡ್ರೈವ್‌ ಮೂಲಕ ದತ್ತಾಂಶಗಳನ್ನು ರವಾನಿಸಲಾಗುತ್ತಿದೆ. ಮುಂದೆ ಆಟೋಮೇಷನ್‌ ಸೆಂಟರ್‌ ಅನ್ನು ಕಂಟ್ರೋಲ್‌ ಸೆಂಟರ್‌ಗೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಪರಾಧ ಪ್ರಕರಣ ಪತ್ತೆಗೂ ಅನುಕೂಲ
ಸ್ಮಾರ್ಟ್‌ಸಿಟಿಯ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ ಅನ್ನು ಪೂರ್ಣವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಪೊಲೀಸರೇ ಇದನ್ನು ನಿಭಾಯಿಸಲು ಆರಂಭಿಸಿದ್ದಾರೆ. ಸಂಚಾರ ನಿಯಂತ್ರಣದ ಜತೆಗೆ ಸರ ಕಳ್ಳತನ ಮತ್ತಿತರ ಅಪರಾಧ ಪ್ರಕರಣಗಳನ್ನು ಕೂಡ ಪತ್ತೆ ಹಚ್ಚಲು ಕೂಡ ಇದು ನೆರವಾಗಲಿದೆ.
-ನಟರಾಜ ಎಂ.ಎ., ಎಸಿಪಿ, ಸಂಚಾರ ವಿಭಾಗ ಮಂಗಳೂರು

 -ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next