ಚಿಕ್ಕೋಡಿ: ತಾಲೂಕಿನ ಮುಗಳಿ, ಕರೋಶಿ ಹಾಗೂ ಕುಂಗಟೋಳ್ಳಿ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ 3 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಶನಿವಾರ ತಾಲೂಕಿನ ಮುಗಳಿ ಗ್ರಾಮದಿಂದ ಅಮ್ಮಣಗಿ ಕೂಡು ರಸ್ತೆ 1 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿ, ಮುಗಳಿ ಗ್ರಾಮದ ಈ ರಸ್ತೆ ದುರಸ್ತಿ ಮಾಡಬೇಕೆಂದು ಅನೇಕ ವರ್ಷಗಳಿಂದ ಬೇಡಿಕೆ ಇತ್ತು. ಆದರೆ ಈಗ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.
ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಇದರಿಂದ ರೈತರಿಗೆ ತುಂಬ ತೊಂದರೆಯಾಗುತ್ತಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ ದಿನಮಾನದಲ್ಲಿ ಕರೋಶಿ, ನಾಗರಮುನ್ನೋಲಿ ಜಿ.ಪಂ ವ್ಯಾಪ್ತಿಯಲ್ಲಿ ಬರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಶೀಘ್ರ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯ ಮಹೇಶ ಭಾತೆ ಮಾತನಾಡಿ, ಮುಗಳಿ ಗ್ರಾಮದ ಜನರಿಗೆ ತಮ್ಮ ಹೊಲ-ಗದ್ದೆಗಳಿಗೆ ಬರಲು ಬಹಳ ವರ್ಷಗಳಿಂದ ತೊಂದರೆಯಾಗುತ್ತಿದ್ದನ್ನು ಮನಗಂಡು ರಾಜು ಪಾಟೀಲ ಅವರ ನಿರ್ದೇಶನದ ಮೇರೆಗೆ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಈ ವೇಳೆ ಜಿಪಂ ಸದಸ್ಯೆ ಲಕ್ಷ್ಮೀ ಕುರಬರ, ಗ್ರಾಪಂ ಅಧ್ಯಕ್ಷ ಈರಗೌಡಾ ಪಾಟೀಲ, ನಿಂಗಪ್ಪ ಕುರುಬರ, ಪ್ರಕಾಶ ಪಾಟೀಲ, ಶಂಕರಗೌಡ ಪಾಟೀಲ, ಬಾಬುಗೌಡ ಪಾಟೀಲ, ಪ್ರಭಾಕರ ಕಳಸನ್ನವರ, ವಿಜಯ ಕೋಠಿವಾಲೆ, ಈರಪ್ಪಾ ಕೊಟಬಾಗಿ, ರಾಜು ಹರಗಾಪೂರೆ, ದಾನಲಿಂಗ ಪೋತದಾರ, ಇಂಜಿನಿಯರ್ ಎ.ಐ. ಕಾಕೋಳೆ ಇದ್ದರು.