Advertisement
ಹೆಚ್ಚುವರಿ ನೀರನ್ನು ಕೃಷಿ ಮತ್ತಿತರ ಕಾರ್ಯಗಳಿಗೆ ಬಳಕೆ ಮಾಡಿ ಬೆಳೆಗಳಿಗೆ ಬಳಕೆ ಮಾಡುವ ಪದ್ಧತಿ ಅನುಸರಿಸಲಾಗುತ್ತಿತ್ತು. ತಾಲೂಕಿನಲ್ಲಿ 30ಕ್ಕೂ ಅಧಿಕ ಕೆರೆ-ಕಟ್ಟೆಗಳಿದ್ದು ತುಂಗಭದ್ರಾ ನದಿಗೂ ಅಣೆಕಟ್ಟು ನಿರ್ಮಿಸಿ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೆರೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುವ ಜತೆಗೆ ಪವಿತ್ರಭಾವನೆ ಮೂಡುವಂತೆ ಮಾಡಲು ಕೆರೆ ಅಕ್ಕಪಕ್ಕದಲ್ಲಿ ದೇಗುಲ, ಶಿಲಾಶಾಸನ ನಿರ್ಮಿಸುವ ಮೂಲಕ ಪವಿತ್ರಭಾವನೆ ಮೂಡುವಂತೆ ಯೋಜನೆ ರೂಪಿಸಲಾಗುತ್ತಿತ್ತು.
Related Articles
Advertisement
ಬಹುತೇಕ ಕೆರೆಗಳು ಒತ್ತುವರಿ : ಹಿಂದೆ ರಾಜ ಮಹಾರಾಜರು ಪ್ರತಿ ಊರಿಗೂ ಕೆರೆ ನಿರ್ಮಿಸಿದ್ದರು. ಇದೀಗ ಸ್ವಾರ್ಥಕ್ಕಾಗಿ ಕೆರೆಗಳ ಒತ್ತುವರಿ ಮಾಡಲಾಗಿದೆ. ವಸತಿ ಸಮುತ್ಛಯ ನಿರ್ಮಿಸಲಾಗಿದೆ. ಅಕ್ರಮ ಚಟುವಟಿಕೆಯಿಂದ ಕೆರೆಗಳ ಅಸ್ತಿತ್ವವನ್ನೇ ನಾಶ ಮಾಡಲಾಗಿದೆ. ರಾಮಲಿಂಗೇಶ್ವರ ಕೆರೆ, ಮುಕ್ಕುಂಪಿ ಕೆರೆ, ಸಂಗಾಪೂರದ ಲಕ್ಷ್ಮೀ ನಾರಾಯಣ ಕೆರೆ, ವೆಂಕಟಗಿರಿ ಕೆರೆ, ಆಗೋಲಿ ಕೆರೆ, ವಿಠಲಾಪೂರ ಕೆರೆ ಹೀಗೆ ಸುಮಾರು 13 ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಸಣ್ಣ ನೀರಾವರಿ ಇಲಾಖೆಯ ದಾಖಲೆಗಳಲ್ಲಿ ಮಾತ್ರ ಕೆರೆಗಳಿದ್ದು, ನೋಡಲು ಸಿಗುವುದಿಲ್ಲ. ಸರಕಾರ ಜಾಗೃತಿ ಮೂಡಿಸುವ ಮೂಲಕ ಕೆರೆಗಳ ಒತ್ತುವರಿ ಮತ್ತು ಕೆರೆಗಳ ಮೇಲಿನ ದೌರ್ಜನ್ಯ ತೆಡೆಯಲು ಮುಂದಾಗಬೇಕಿದೆ. ಪ್ರತಿಯೊಂದನ್ನು ಸ್ವಾರ್ಥ ಮನೋಭಾವದಿಂದ ನೋಡುವ ಮನುಷ್ಯನ ಗುಣ ಬದಲಿಸದ ಹೊರತು ಪ್ರಕೃತಿ, ಪರಿಸರ ಸೌಂದರ್ಯ ಸಂರಕ್ಷಣೆ ಅಸಾಧ್ಯವಾಗಿದೆ.
ಕೆರೆ ತುಂಬಿಸಿ : ತಾಲೂಕಿನ ರಾಮಲಿಂಗೇಶ್ವರ ಕೆರೆ, ಮುಕ್ಕುಂಪಿ ಕೆರೆ, ಸಂಗಾಪೂರದ ಲಕ್ಷ್ಮೀ ನಾರಾಯಣ ಕೆರೆ, ವೆಂಕಟಗಿರಿ ಕೆರೆ, ಆಗೋಲಿ ಕೆರೆ, ವಿಠಲಾಪೂರ ಕೆರೆ ಹೀಗೆ ಸುಮಾರು 13 ಕೆರೆಗಳನ್ನು ತುಂಗಭದ್ರಾ ನದಿಯಿಂದ ಮಳೆಗಾಲದಲ್ಲಿ ಕೆರೆ ತುಂಬಿಸುವ ಯೋಜನೆಯನ್ನು ಸಮಿಶ್ರ ಸರಕಾರದ ಅವಧಿಯಲ್ಲಿ ಆರಂಭಿಕ 90 ಕೋಟಿ ವೆಚ್ಚದಲ್ಲಿ ರೂಪಿಸಲಾಗಿದೆ. ಇದರಿಂದ ತಾಲೂಕಿನ ಬಹುತೇಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇದರಿಂದ ಅಂತರ್ಜಲ ವೃದ್ಧಿಯಾಗಲಿದೆ.
ಕೆರೆಗಳ ಮೂಲಕ ಮನುಷ್ಯನ ಜೀವನ ರೂಪಿಸಿಕೊಂಡು ಇದೀಗ ಕೆರೆಗಳ ಮೇಲೆ ನಿರಂತರ ದೌರ್ಜನ್ಯವೆಸಗುತ್ತಿದ್ದಾನೆ. ಸರಕಾರ ಕೆರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಒತ್ತುವರಿ ತೆರವು ಸೇರಿ ಅಗತ್ಯ ಕ್ರಮ ಕೈಗೊಂಡರೆ ಮಾತ್ರ ಭವಿಷ್ಯದಲ್ಲಿ ಕೆರೆಗಳು ಉಳಿಯಲು ಸಾಧ್ಯ. ಮಳೆಗಾಲದಲ್ಲಿ ತುಂಗಭದ್ರಾ ನದಿ ಮೂಲಕ ಹರಿದು ಸಮುದ್ರ ಸೇರುವ ನೀರನ್ನು ಕೆರೆ ತುಂಬಿಸಿದರೆ ಉಪಯುಕ್ತವಾಗುತ್ತದೆ. ವೆಂಕಟಗಿರಿ ಜಿಪಂ ವ್ಯಾಪ್ತಿಯ ಕೆರೆ ತುಂಬಿಸಲು ಯೋಜನೆ ರೂಪಿಸಿ 90 ಕೋಟಿ ಹಣ ಮೀಸಲಿರಿಸಲಾಗಿದೆ. ಹಿಂದಿನ ಸಮಿಶ್ರ ಮತ್ತು ಪ್ರಸ್ತುತ ಬಿಜೆಪಿ ಸರಕಾರ ಅಗತ್ಯ ಹಣ ನೀಡಿದ್ದು, ಈ ಭಾಗದ ಜನರಿಗೆ ಉಪಯೋಗವಾಗಲಿದೆ. –ಲಕ್ಷ್ಮವ್ವ ನಿರಲೂಟಿ, ಜಿಪಂ ಸದಸ್ಯೆ
ಕೆರೆಗಳು ನಾಗರಿಕತೆಯ ತೊಟ್ಟಿಲುಗಳು. ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಯ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದೆ. ಇದರ ಅನುಷ್ಠಾನಕ್ಕೆ ಪಕ್ಷ ಬೇಧ ಮರೆತು ಕಾರ್ಯ ಮಾಡಲಾಗುತ್ತದೆ. 90 ಕೋಟಿ ವೆಚ್ಚದ ಕೆರೆ ತುಂಬಿಸುವ ಯೋಜನೆ ಶೀಘ್ರ ಅನುಷ್ಠಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಲಾಗಿದೆ. ಕೆರೆಗಳ ಕುರಿತು “ಉದಯವಾಣಿ’ ಪತ್ರಿಕೆ ಸರಣಿ ವರದಿಗೆ ಅಭಿನಂದನೆಗಳು. – ಪರಣ್ಣ ಮುನವಳ್ಳಿ, ಶಾಸಕ
-ಕೆ. ನಿಂಗಜ್ಜ