Advertisement

ಶಿಮಂತೂರು ಕೆರೆ ಅಭಿವೃದ್ಧಿಗೆ ಆದ್ಯತೆ ನೀಡಿ

06:59 PM Aug 14, 2021 | Team Udayavani |

ಶಿಮಂತೂರು ಅಭಿವೃದ್ಧಿ ಹೊಂದುತ್ತಿರುವ ಗ್ರಾಮ. ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಇಲ್ಲಿ ಅವಕಾಶವಿದೆ. ಇದಕ್ಕೆ ಸರಕಾರ ಯೋಜನೆ ರೂಪಿಸುವುದು ಅಗತ್ಯ. ಸಾರ್ವಜನಿಕ ಶ್ಮಶಾನ, ತ್ಯಾಜ್ಯ ಸಂಗ್ರಹ ಘಟಕ ನಿರ್ಮಾಣ ಮಾಡುವುದು ಅಗತ್ಯ. ಈ ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲು ಉದಯವಾಣಿ ಸುದಿನದ “ಒಂದು ಊರು-ಹಲವು ದೂರು’ ಮೂಲಕ ಪ್ರಯತ್ನಿಸಲಾಗಿದೆ.

Advertisement

ಮೂಲ್ಕಿ: ಶಿಮಂತೂರು ಗ್ರಾಮವು ಕೃಷಿ ಪ್ರಧಾನ ಪ್ರದೇಶ. ಇಲ್ಲಿ ನೀರಿನ ಒರತೆ ಪ್ರಮಾಣ ಉತ್ತಮವಾಗಿದೆ. ನೀರಿನ ಮೂಲಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವುದರಿಂದ ಈ ಗ್ರಾಮಕ್ಕೆ ಸರ್ವಕಾಲಕ್ಕೂ ನೀರು ಒದಗಿಸುವುದರ ಜತೆಗೆ ನೆರೆಯ ಗ್ರಾಮಗಳ ನೀರಿನ ಸಮಸ್ಯೆಯನ್ನೂ ಹೋಗಲಾಡಿಸಬಹುದು.

ಇಲ್ಲಿನ ಕೆಲವು ಸಣ್ಣಪುಟ್ಟ ಅಣೆಕಟ್ಟುಗಳು ಗ್ರಾಮಸ್ಥರ ನಿರ್ವಹಣೆಯಲ್ಲಿದೆ. ಬಹುಮುಖ್ಯವಾಗಿ ಒಂದೆರೆಡು ಕಿಂಡಿ ಅಣೆಕಟ್ಟುಗಳನ್ನು  ನಿರ್ಮಿಸಿ ನೀರನ್ನು ತಡೆದು ಸಂಗ್ರಹಿಸ ಬೇಕಾದ ಅನಿವಾರ್ಯವಿದೆ. ಮಾತ್ರವಲ್ಲ ಸರಕಾರದ ಅಧೀನದಲ್ಲಿರುವ ಸುಮಾರು ಮೂರೂವರೆ ಎಕರೆ ಪ್ರದೇಶ ವ್ಯಾಪ್ತಿಯ ಮಾಡ್ರದ ಗುತ್ತು ಕೆರೆಯನ್ನು ಕ್ರಮಬದ್ಧವಾಗಿ ನಿರ್ವಹಣೆ ಮಾಡಬೇಕಿದೆ. ಈ ಕೆರೆಯಲ್ಲಿ ನೀರಿನ ಒರತೆ ಅತೀ ಹೆಚ್ಚು ಇದ್ದು, ಸಮರ್ಪಕ ಯೋಜನೆಗಳ ಮೂಲಕ ಅದನ್ನು ಸಂಗ್ರಹಿಸಿ ಇಲ್ಲಿನ ಕೃಷಿ ಭೂಮಿಗಳಿಗೆ ಒದಗಿಸಬೇಕಿದೆ. ಸರಕಾರದ ಆಧೀನದಲ್ಲಿರುವ ಮಾಡ್ರದ ಗುತ್ತು ಕೆರೆಯ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಈ ಸಮಸ್ಯೆಯನ್ನು ಪರಿಹರಿಸಿ ಸರಕಾರ ನೀರು ಸಂಗ್ರಹಕ್ಕೆ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು, ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಕೊಡಿಸುವ ಯೋಜನೆಯಲ್ಲಿ ತೊಡಗಿ ಸಿಕೊಳ್ಳುವುದು ಅತೀ ಅಗತ್ಯ.

ಊರಿನ ಹಿತಕ್ಕಾಗಿ ದುಡಿಯುವ ಉತ್ತಮ ಸೇವಾ ಮನೋಭಾವನೆ ಯುವಕರ ತಂಡಗಳು ಊರಿನಲ್ಲಿ ಇವೆ. ಅವರಿಗೆ ಸ್ವೋದ್ಯೋಗ ಕಲ್ಪಿಸುವ ಯೋಜನೆಗಳನ್ನು ದೊರೆಕಿಸಿಕೊಡಬೇಕಿದೆ.ಸ್ವೋದ್ಯೋಗ ತರಬೇತಿ ಕೇಂದ್ರ, ವಿವಿಧ ಯೋಜ ನೆಗಳ ಬಗ್ಗೆ ಮಾಹಿತಿ ನೀಡುವ ಕೇಂದ್ರಗಳು ಇಲ್ಲಿ ಆರಂಭವಾದರೆ ಗ್ರಾಮ ಮತ್ತಷ್ಟು ಅಭಿವೃದ್ಧಿ ಹೊಂದಬಹುದು.

ಇತರ ಸಮಸ್ಯೆಗಳೇನು? :

  • ಆರೋಗ್ಯ ಉಪಕೇಂದ್ರ, ಸಾರ್ವಜನಿಕ ಶ್ಮಶಾನ ಮತ್ತು ತ್ಯಾಜ್ಯ ನಿರ್ವಹಣ ಘಟಕಗಳ ಬೇಡಿಕೆ ಹಲವಾರು ವರ್ಷಗಳಿಂದ ಇದ್ದು ಶೀಘ್ರ ಆರಂಭವಾಗಬೇಕಿದೆ.
  • ಆಡು, ಹಂದಿ, ಕೋಳಿ, ಜಾನುವಾರು ಸಾಕಣೆ, ಹೈನುಗಾರಿಕೆಗೆ ಬೇಕಾದ ಎಲ್ಲ ಸೌಕರ್ಯಗಳು ಇಲ್ಲರುವುದರಿಂದ ಸರಕಾರದಿಂದ ಪ್ರೋತ್ಸಾಹ ದೊರಕಬೇಕಿದೆ. ಅಲ್ಲದೇ ಪಶುಆಸ್ಪತ್ರೆ ಆರಂಭವಾಗಬೇಕಿದೆ.
  • ಇಲ್ಲಿನ ಅತೀ ಪುರಾತನ ಆದಿಜನಾರ್ದನ ದೇವಸ್ಥಾನ ಇದೆ. ಮೂಲ್ಕಿ ಸಾವಂತರು ಅರಮನೆಯನ್ನು ಹೊಂದಿದ್ದರು. ಮಾಗಣೆಯ ಕಾರಣಿಕ ಪುರುಷರಾದ ಕಾಂತಾಬಾರೆ- ಬೂದಾ ಬಾರೆಯರು ಕೂಡ ಇದೇ ಗ್ರಾಮದವರು ಎಂಬುದಕ್ಕೆ ದಾಖಲೆಗಳಿವೆ. ಪ್ರವಾಸಿ ತಾಣವಾಗಿ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಅವಕಾಶ ಇದ್ದು, ಇದಕ್ಕೆ ಯೋಜನೆ ರೂಪಿಸಬೇಕಿದೆ.
  • ಸರಕಾರದ ಯೋಜನೆಯ ಮೂಲಕ ಕೆಂಚನಕೆರೆ ಬಳಿಯ ಅಂಗರಗುದ್ದೆ ಮತ್ತು ಕುಚ್ಚಿ ಗುಡ್ಡೆಯಲ್ಲಿ ಇಲ್ಲಿ ನೂರಾರು ಮನೆಗಳನ್ನು ನಿರ್ಮಿಸಲಾಗಿದ್ದು, ಇವರ ಮೂಲಸೌಕರ್ಯಗಳ ಬೇಡಿಕೆಯನ್ನು ಈಡೇರಿಸಬೇಕಿದೆ.
Advertisement

 

-ಎಂ. ಸರ್ವೋತ್ತಮ ಅಂಚನ್‌ ಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next