Advertisement

ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ

04:50 PM Jun 19, 2020 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ರೈತರಿಂದ ಜಮೀನು ಪಡೆದ ಕಾರ್ಖಾನೆಗಳು ಭೂಮಿ ಕೊಟ್ಟ ರೈತನ ಕುಟುಂಬದ ಸದಸ್ಯನಿಗೆ ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಉದ್ಯೋಗ ಒದಗಿಸಬೇಕು ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಕೈಗಾರಿಕೋದ್ಯಮಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಕೈಗಾರಿಕೋದ್ಯಮಿಗಳ ಜೊತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಕೌಶಲ್ಯಾಧಾರಿತ ಮತ್ತು ಕೌಶಲ್ಯ ರಹಿತ ಉದ್ಯೋಗಗಳಲ್ಲಿ ಸ್ಥಳೀಯರ ನಂತರ ಬೇರೆ ರಾಜ್ಯ, ಜಿಲ್ಲೆಯವರಿಗೆ ಉದ್ಯೋಗ ನೀಡಬೇಕು. ಬಹುತೇಕ ಕಾರ್ಖಾನೆಗಳಲ್ಲಿ ಖಾಯಂಗಿಂತ ಗುತ್ತಿಗೆ ಆಧಾರದಲ್ಲಿ ಹೆಚ್ಚಿನ ಉದ್ಯೋಗ ನೀಡಲಾಗುತ್ತಿದೆ. ಈ ಪದ್ಧತಿಯನ್ನು ಬಿಟ್ಟು ಸಾಧ್ಯವಾದಷ್ಟು ಖಾಯಂ ಉದ್ಯೋಗ ನೀಡಲು ಕ್ರಮವಹಿಸಿ. ಜಿಲ್ಲೆಯ ಎಲ್ಲಾ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ನೀಡಿರುವ ಉದ್ಯೋಗವಕಾಶಗಳ ಬಗ್ಗೆ ಡಿಸಿ ಪರಿಶೀಲಿಸಿ ವರದಿ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಪ್ರಸ್ತುತ 559 ಕೈಗಾರಿಕಾ ಘಟಕಗಳು ನೋಂದಣಿಯಾಗಿದ್ದು, ಇದುವರೆಗೂ ಒಟ್ಟು 8,529 ಕೈಗಾರಿಕೆಗಳು ನೋಂದಣಿಯಾಗಿವೆ. ಅದರಲ್ಲಿ 19 ಭಾರೀ ಕೈಗಾರಿಕೆಗಳು, 08 ಮಧ್ಯಮ ಕೈಗಾರಿಕೆಗಳು ಸ್ಥಾಪಿತವಾಗಿವೆ. ಇಲ್ಲಿಯವರಗೆ ಒಟ್ಟು 10 ಮಧ್ಯಮ ಮತ್ತು ಭಾರೀ ಕೈಗಾರಿಕೆಗಳು ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ. ಸ್ಥಗಿತಗೊಂಡ ಕಾರ್ಖಾನೆಗಳು ಚಟುವಟಿಕೆ ನಿಲ್ಲಿಸಲು ಕಾರಣಗಳು, ಬಳಸಿಕೊಂಡ ಸ್ಥಳ, ಬಳಕೆಯಾಗದೆ ಬಾಕಿ ಉಳಿದ ಸ್ಥಳ ಮತ್ತು ಪ್ರಸ್ತುತ ಆ ಕಾರ್ಖಾನೆಗಳ ವಸ್ತುಸ್ಥಿತಿಯನ್ನು ಕುರಿತು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಡಿಸಿ ಪಿ.ಸುನೀಲ್‌ ಕುಮಾರ್‌, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ, ಕೆಎಸ್‌ಎಸ್‌ಐಡಿಸಿ ಮುಖ್ಯ ಇಂಜಿನಿಯರ್‌ ಜಗದೀಶ ಸೇರಿದಂತೆ ಜಿಲ್ಲೆಯ ಉದ್ದಿಮೆದಾರರು ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next