ಚಿತ್ರದುರ್ಗ: ಗ್ರಾಮೀಣ ಪ್ರದೇಶದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಮೊದಲ ಆದ್ಯತೆ ನೀಡಬೇಕು ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಗ್ರಾಪಂ ಪಿಡಿಒ, ಕಾರ್ಯದರ್ಶಿ ಹಾಗೂ ಗ್ರಾಮಲೆಕ್ಕಾ ಧಿಕಾರಿಗಳಿಗೆ ಸೂಚಿಸಿದರು.
ತುರುವನೂರು ಹೋಬಳಿಗೆ ಸಂಬಂಧಿಸಿದಂತೆ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕುಡಿಯುವ ನೀರು, ಸ್ವತ್ಛತೆ, ಪಡಿತರ ವಿತರಣೆ, ಸಾಮಾಜಿಕ ಭದ್ರತೆಯಡಿ ನೀಡುವ ಪಿಂಚಣಿ, ತೋಟಗಾರಿಕೆ, ಕೃಷಿ, ಬೆಸ್ಕಾಂ ಇಲಾಖೆಗಳಿಗೆ ಸಂಬಂಧಪಟ್ಟ ಕುಂದುಕೊರತೆ ಆಲಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದರು.
ಸುಸ್ಥಿತಿಯಲ್ಲಿಲ್ಲದ ನೀರು ಶುದ್ಧೀಕರಣ ಘಟಕಗಳನ್ನು ತ್ವರಿತವಾಗಿ ರಿಪೇರಿ ಮಾಡಿಸಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಹೊಣೆಗಾರಿಕೆ ಗ್ರಾಮ ಪಂಚಾಯತ್‌ಗಳ ಮೇಲಿದೆ. ಹಾಗಾಗಿ ಜವಾಬ್ದಾರಿ ಅರಿತು ಕೆಲಸ ಮಾಡಿ. ಮೈಗಳ್ಳತನ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸದ್ಯಕ್ಕೆ ಎರಡು ರೂ. ಗಳನ್ನಷ್ಟೆ ಪಡೆಯಬೇಕು. ಕೋವಿಡ್ ಲಾಕ್‌ಡೌನ್ ಇರುವುದರಿಂದ ಐದು ರೂ. ಕೇಳುವುದು ಸರಿಯಲ್ಲ ಎಂದರು. ಕೋವಿಡ್ ವೈರಸ್ ಹಾವಳಿಯಿಂದ ಹಳ್ಳಿಗಳಲ್ಲಿ ಜನ ಭಯಭೀತರಾಗಿದ್ದಾರೆ. ಹೊರ ರಾಜ್ಯಗಳಿಂದ ಬರುವವರನ್ನು ಸಾಧ್ಯವಾದಷ್ಟು ಗ್ರಾಮೀಣ ಪ್ರದೇಶಗಳಿಂದ ದೂರ ಕ್ವಾರಂಟೈನ್‌ನಲ್ಲಿಡಲು ಅ ಧಿಕಾರಿಗಳು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಬೇರೆ ರಾಜ್ಯದಿಂದ ಬರುವವರನ್ನು ಕ್ವಾರಂಟೈನ್ ಗಳಲ್ಲಿ ಇಡಬೇಕಾದ ಪರಿಸ್ಥಿತಿ ಬಂದಾಗ ಮೊದಲು ಕೇಂದ್ರಗಳನ್ನು ಗುರುತಿಸಿ ಜನ ಎಲ್ಲಿಯೂ ಗಲಾಟೆ ಮಾಡದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ಧಾನ್ಯಗಳನ್ನು ಪೂರೈಸಿ. ಸಾಮಾಜಿಕ ಅಂತರ ಕಾಪಾಡಿಕೊಂಡು ವೈಯಕ್ತಿಕ ಸ್ವಚ್ಛತೆ ಕಾಪಾಡುವಂತೆ ಹಳ್ಳಿಗಾಡಿನ ಜನತೆಯಲ್ಲಿ ಅರಿವು ಮೂಡಿಸಿ ಎಂದು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ತಾಕೀತುಮಾಡಿದರು.
ಕೆಲವು ಗ್ರಾಮಗಳಲ್ಲಿ ಟ್ರಾನ್ಸ್‌ಫಾರ್ಮರ್ ಗಳ ಸುತ್ತ ಬೆಳೆದಿರುವ ಬಳ್ಳಾರಿ ಜಾಲಿ ಗಿಡಗಳನ್ನು ತೆರವುಗೊಳಿಸಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಡವರಿಗೆ ಕೆಲಸ ನೀಡಿ. ಯಾರೂ ಹೊರ ಊರುಗಳಿಗೆ ಕೆಲಸ ಹುಡುಕಿಕೊಂಡು ಗುಳೆ ಹೋಗದಂತೆ ಎಚ್ಚರ ವಹಿಸಬೇಕಾಗಿದೆ. ಹಗಲು ವೇಳೆ ಕೆಲವು ಗ್ರಾಮಗಳಲ್ಲಿ ಬೀದಿದೀಪಗಳು ಉರಿಯುತ್ತಿರುವುದು ನಿಲ್ಲಬೇಕು. ಅದರ ಕಡೆಗೂ ಗಮನ ಕೊಡಿ ಎಂದು ತುರುವನೂರು ಹೋಬಳಿಯ ಆರು ಪಂಚಾಯಿತಿಗಳ ಪಿಡಿಒಗಳು, ಕಾರ್ಯದರ್ಶಿಗಳು, ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದರು. ಚಿತ್ರದುರ್ಗ ತಾಪಂ ಅಧ್ಯಕ್ಷ ಡಿ.ಎಂ. ಲಿಂಗರಾಜು, ತಾಪಂ ಇಒ ಕೃಷ್ಣ ನಾಯ್ಕ ಇದ್ದರು.