ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ ಹೊಸ ಸ್ಪರ್ಶ ನೀಡುವುದರ ಜತೆಗೆ ಗಡಿಭಾಗದ ಸಮಸ್ಯೆಗಳಿಗೂ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ನನ್ನನ್ನು ಗೆಲ್ಲಿಸುವಂತೆ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಮನವಿ ಮಾಡಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್‌ಗೆ ಮೇ 9ರಂದು ನಡೆಯಲಿರುವ ಚುನಾವಣೆಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. 105 ವರ್ಷಗಳ ಇತಿಹಾಸ ಹೊಂದಿರುವ ಕಸಾಪಕ್ಕೆ 85ಕ್ಕೂ ಅ ಧಿಕ ಬಾರಿ ದಕ್ಷಿಣಕರ್ನಾಟಕ ಭಾಗದವರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ ಜಿಲ್ಲೆಯವನಾದ ನಾನು; ಈ ಭಾಗದ ನಾಡು-ನುಡಿ ಬಗ್ಗೆ ಅರಿತಿದ್ದೇನೆ. ಈ ಭಾಗಕ್ಕೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನನ್ನನ್ನು ಆಯ್ಕೆ ಮಾಡುವಂತೆ ಕೋರಿದರು.
ಕನ್ನಡ ಸಾಹಿತ್ಯ ಪರಿಷತ್ ಗಂಜಿ ಕೇಂದ್ರವಾಗಿದೆ. ಅಧೋಗತಿಗೆ ತಲುಪಿದೆ ಎಂದು ಕೆಲ ಹಿರಿಯ ಸಾಹಿತಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈಗಾಗಲೇ ಪರಿಷತ್‌ನಲ್ಲಿ ನಡೆದ ಅವ್ಯವಹಾರದ ಕುರಿತು ಕೆಲ ಠಾಣೆಗಳಲ್ಲಿ ದೂರುಗಳು ದಾಖಲಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯನ್ನು ಪಾರದರ್ಶಕವಾಗಿ ಕಟ್ಟುವುದು ನಮ್ಮ ಮೊದಲ ಧ್ಯೇಯವಾಗಿದೆ. ಸಾಹಿತ್ಯ ಸಮ್ಮೇಳನಗಳಿಗೆ ನೀಡುವ ಅನುದಾನ ಜಿಲ್ಲಾಡಳಿತದ ಜಂಟಿ ಖಾತೆಗೆ ಬರುವ ವ್ಯವಸ್ಥೆ ಮಾಡಿದಲ್ಲಿ ಇಲ್ಲಿಯೂ ಅಕ್ರಮಗಳು ತಡೆಯಬಹುದು ಎಂದು ವಿಶ್ಲೇಷಿಸಿದರು.
ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಪರಿಷತ್ ನಿರ್ಮಾಣ, ಮಹಿಳಾ ಘಟಕ ರಚನೆ, ಆನ್‌ಲೈನ್ ನಲ್ಲೇ ಸದಸ್ಯತ್ವ ನೋಂದಣಿಗೆ ಅವಕಾಶ, ಸದಸ್ಯರಿಗೆ ಸ್ಮಾರ್ಟ್‌ಕಾರ್ಡ್ ವಿತರಣೆ, ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣ, ಗಡಿಭಾಗದ ಶಾಲೆಗಳ ಬಲವರ್ಧನೆ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ನಾನು ಈ ಹಿಂದೆ ಪರಿಷತ್‌ನ ಯಾವುದೇ ಚುನಾವಣೆಗಳಿಗೂ ಸ್ಪ ರ್ಧಿಸಿಲ್ಲ. ಮೊದಲ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿದ್ದೇನೆ.
ಈಗಾಗಲೇ 20 ಜಿಲ್ಲೆಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದ್ದೇನೆ. ಹಲವು ಹೋರಾಟಗಳ ಮೂಲಕ ಸೇವೆ ಸಮಾಜ ಸೇವೆಯಲ್ಲಿ ತೊಡಗಿದ್ದು, ಇನ್ನೂ ಹೆಚ್ಚಿನ ಸೇವೆ ಮಾಡಲು ನನ್ನನ್ನು ಆಯ್ಕೆ ಮಾಡುವಂತೆ ಕೋರಿದರು. ಕಸಾಪ ಹಿರಿಯ ಸದಸ್ಯ ಷಣ್ಮುಖಪ್ಪ ವೆಂಕಟಾಪುರ, ಕನ್ನಡಪರ ಹೋರಾಟಗಾರರಾದ ವೆಂಕಟಗಿರಿ, ವೆಂಕಟೇಶ, ಹನುಮೇಶ ಮಂಜುನಾಥ ಗೋಷ್ಠಿಯಲ್ಲಿದ್ದರು.