ಕಾಠ್ಮಂಡು : ಕಳೆದ ನವೆಂಬರ್‌ನಲ್ಲಿ 150 ಜನರನ್ನು ಬಲಿತೆಗೆದುಕೊಂಡಿದ್ದ ಕಾನ್ಪುರ ರೈಲು ಹಳಿ ತಪ್ಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈಯಿಂದ ಗಡೀಪಾರು ಮಾಡಲ್ಪಟ್ಟ ಓರ್ವ ಪ್ರಮುಖ ಆರೋಪಿಯನ್ನು ಇಲ್ಲಿನ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ನೇಪಾಲ ಪೊಲೀಸ್‌ನ ವಿಶೇಷ ತಂಡದವರು ಆರೋಪಿ ಶಂಶೂಲ್ ಹುದಾ ಮತ್ತು ಇತರ ಮೂವರನ್ನು ಬಂಧಿಸಿದ್ದಾರೆ.
ಹೂಡಾನನ್ನು ನಿನ್ನೆ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತೆದು ಡಿಐಜಿ ಪಶುಪತಿ ಉಪಾಧ್ಯಾಯ ತಿಳಿಸಿದ್ದಾರೆ.
ನೂರೈವತ್ತು ಮಂದಿಯನ್ನು ಬಲಿತೆಗೆದುಕೊಂಡಿದ್ದ ಕಳೆದ ನವೆಂಬರ್‌ನ ಕಾನ್ಪುರ ರೈಲು ಹಳಿ ತಪ್ಪಿಸಲಾದ ಘಟನೆಗೆ ಸಂಬಂಧಿಸಿ ಆರೋಪಿ ಶಂಶೂಲ್ ಹುದಾ ಭಾರತದ ಪೊಲೀಸರಿಗೆ ಬೇಕಾದವನಾಗಿದ್ದ ಎಂಬುದನ್ನು ನಾವು ಕೇಳಿದ್ದೆವು; ಭಾರತದಲ್ಲಿನ ಹಲವು ವಿಧ್ವಂಸಕ ಕ್ರಿಮಿನಲ್ ಚಟುವಟಿಕೆಗಳಲ್ಲಿ ಹೂಡಾ ಶಾಮೀಲಾಗಿರುವ ಸಾಧ್ಯತೆಗಳನ್ನು ಬಯಲಿಗೆಳೆಯುವ ತನಿಖೆಯಲ್ಲಿ ನೇಪಾಲ ಪೊಲೀಸರು ಭಾರತೀಯ ಪೊಲೀಸರೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದಾರೆ ಎಂದು ಉಪಾಧ್ಯಾಯ ಹೇಳಿದರು.
Related Articles
ಶಂಶೂಲ್ ಹುದಾ ಜತೆಗೆ ಸೆರೆಯಾಗಿರುವ ಇತರ ಮೂವರೆಂದರೆ ಬೃಜ್ ಕಿಶೋರ್ ಗಿರಿ, ಆಶಿಷ್ ಸಿಂಗ್ ಮತ್ತು ಉಮೇಶ್ ಕುಮಾರ್ ಕೂರ್ಮಿ. ಇವರೆಲ್ಲರೂ ದಕ್ಷಿಣ ನೇಪಾಲದ ಕಲಯ್ಯ ಜಿಲ್ಲೆಯವರರು.
ಶಂಶೂಲ್ ಹುದಾ ಸೇರಿದಂತೆ ಒಟ್ಟು ನಾಲ್ವರು ಪ್ರಮುಖ ಆರೋಪಿಗಳನ್ನು ಇಂಟರ್‌ಪೋಲ್ ನೆರವಿನೊಂದಿಗೆ ದುಬೈನಿಂದ ನೇಪಾಲಕ್ಕೆ ಪೊಲೀಸರು ಕರೆತಂದಿದ್ದರು.
ಶಂಶೂಲ್ ಹುದಾ ನೇಪಾಲದ ಬಾರಾ ಜಿಲ್ಲೆಯಲ್ಲಿ ನಡೆದಿದ್ದ ಅವಳಿ ಕೊಲೆ ಕೇಸಿನ mastermind ಅಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೂಡಾಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ಗ್ಯಾಂಗ್‌ಗಳೊಂದಿಗೆ ನಂಟು ಇದೆ; ಈತ ನೇಪಾಲ ಮತ್ತು ಭಾರತದಲ್ಲಿ ಹಲವಾರು ಕ್ರಿಮಿನಲ್ ಕೃತ್ಯಗಳಲ್ಲಿ ಶಾಮೀಲಾಗಿದ್ದಾನೆ ಎಂದು ಡಿಐಜಿ ಉಪಾಧ್ಯಾಯ ತಿಳಿಸಿದರು.
ಕಾನ್ಪುರ ರೈಲು ಹಳಿ ತಪ್ಪಿಸಲಾದ ವಿಧ್ವಂಸಕ ಕೃತ್ಯದಲ್ಲಿ ಪಾಕಿಸ್ಥಾನದ ಐಎಸ್‌ಐ ಕೈವಾಡ ಇರುವುದನ್ನು ಶಂಕಿಸಲಾಗಿದೆ. ಈ ಸಂಬಂಧ ಬಿಹಾರ ಪೊಲೀಸರು ಜನವರಿಯಲ್ಲಿ ಮೂವರು ಶಂಕಿತರನ್ನು ಬಂಧಿಸಿದ್ದರು. ಈ ಬಂಧಿತರು ತಾವು ಪಾಕ್ ಐಎಸ್‌ಐ ಗುಪ್ತಚರ ಸಂಸ್ಥೆಯ ಆಣತಿಯ ಮೇರೆಗೆ ಭಾರತೀಯ ರೈಲ್ವೇಯನ್ನು ಗುರಿ ಇರಿಸಿ ರೈಲು ವಿಧ್ವಂಸಕ ಕೃತ್ಯಗಳನ್ನು ನಡೆಸಿರುವುದಾಗಿ ತನಿಖೆಯಲ್ಲಿ ಬಾಯಿಬಿಟ್ಟಿದ್ದರು.
ಬಿಹಾರ ಪೊಲೀಸರ ಪ್ರಕಾರ ಪಾಕ್ ಐಎಸ್‌ಐ ನಂಟು ಹೊಂದಿರುವ ಮೂವರು ಬಂಧಿತರಿಗೆ ನೇಪಾಲೀ ವ್ಯಕ್ತಿಯೋರ್ವ ತಲಾ ಮೂರು ಲಕ್ಷ ರೂ. ಕೊಟ್ಟಿದ್ದಾನೆ. ಈ ನೇಪಾಲಿ ವ್ಯಕ್ತಿಗೆ ಬಂಧಿತ ಆರೋಪಿ ಶಂಶೂಲ್ ಹುದಾ ಜತೆಗೆ ನಂಟಿದೆ ಎಂದು ಬಿಹಾರ ಪೊಲೀಸರು ಹೇಳಿದ್ದಾರೆ.