Advertisement

ಪ್ರಧಾನಿ ಹುದ್ದೆ ರೇಸ್‌: ಭಾರತೀಯ ಮೂಲದ ರಿಷಿ ಸುನಕ್‌ಗೆ ಒಲಿಯುತ್ತಾ ಪಟ್ಟ?

12:42 AM Oct 22, 2022 | Team Udayavani |

ಬ್ರಿಟನ್‌ ರಾಜಕೀಯ ತಳಮಳಕ್ಕೀಡಾಗಿದ್ದು, ಅಧಿಕಾರಕ್ಕೇರಿದ 45 ದಿನಗಳಲ್ಲೇ ಲಿಜ್‌ ಟ್ರಸ್‌ ರಾಜೀನಾಮೆ ನೀಡಿದ್ದಾರೆ. ಇವರ ಸ್ಥಾನಕ್ಕೆ ಭಾರತೀಯ ಮೂಲದ ರಿಷಿ ಸುನಕ್‌ ಅವರ ಹೆಸರು ಕೇಳಿಬರುತ್ತಿದೆ. ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರೂ ರೇಸ್‌ನಲ್ಲಿದ್ದಾರೆ.

Advertisement

ರಿಷಿ ಸುನಕ್‌
ಇತ್ತೀಚೆಗಷ್ಟೇ ನಡೆದಿದ್ದ ಪ್ರಧಾನಿ ಹುದ್ದೆ ರೇಸಿನಲ್ಲಿ ಲಿಜ್‌ ಟ್ರಸ್‌ ಅವರಿಗೆ ಭಾರೀ ಸ್ಪರ್ಧೆ ನೀಡಿದ್ದ ಮಾಜಿ ವಿತ್ತ ಸಚಿವ ರಿಷಿ ಸುನಕ್‌, ಸದ್ಯದ ಮಟ್ಟಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅಲ್ಲದೆ, ಕನ್ಸರ್ವೇಟಿವ್‌ ಪಕ್ಷದ ಬಹಳಷ್ಟು ಸಂಸದರು ರಿಷಿ ಸುನಕ್‌ ಅವರ ಬಗ್ಗೆಯೇ ಒಲವು ತೋರಿದ್ದಾರೆ. ಲಿಜ್‌ ಟ್ರಸ್‌ ಅವರು ಆರ್ಥಿಕ ಸುಧಾರಣೆಗಳನ್ನು ಘೋಷಣೆ ಮಾಡಿದಾಗ, ರಿಷಿ ಸುನಕ್‌ ಈ ಬಗ್ಗೆ ಟೀಕೆ ವ್ಯಕ್ತಪಡಿಸಿ, ಆರ್ಥಿಕತೆ ಹಾಳಾಗಲಿದೆ, ಹಣದುಬ್ಬರ ಹೆಚ್ಚಾಗಲಿದೆ ಎಂದಿದ್ದರು. ಇದು ನಿಜವಾದ ಕಾರಣದಿಂದಲೇ ಲಿಜ್‌ ಟ್ರಸ್‌ ರಾಜೀನಾಮೆ ನೀಡಿದ್ದಾರೆ. ಸದ್ಯಕ್ಕೆ ಸುನಕ್‌ಗೆ ಇರುವ ಅಡ್ಡಿ, ಬೋರಿಸ್‌ ಜಾನ್ಸನ್‌ ಅವರ ಬೆಂಬಲಿಗರು.

ಮಾಜಿ ರಕ್ಷಣ ಸಚಿವೆ ಪೆನ್ನಿ
ಮಾಜಿ ರಕ್ಷಣ ಸಚಿವೆಯಾಗಿರುವ ಪೆನ್ನಿ , ಪ್ರಧಾನಿ ಹುದ್ದೆ ರೇಸಿನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಪಕ್ಷದ ಒಳಗೇ ನಡೆದಿದ್ದ ಆಂತರಿಕ ಚುನಾವಣೆಯಲ್ಲಿ ಪೆನ್ನಿ, ಮೂರನೇ ಸ್ಥಾನಿಯಾಗಿದ್ದರು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮಟ್ಟದಲ್ಲೂ ಇವರಿಗೆ ಉತ್ತಮ ಹೆಸರಿದೆ.

ಬೋರಿಸ್‌ ಜಾನ್ಸನ್‌
ಲಿಜ್‌ ಟ್ರಸ್‌ ರಾಜೀನಾಮೆ ನೀಡಿದ ಮೇಲೆ ಮತ್ತೆ ಇವರ ಹೆಸರು ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವೂ ಇದೆ. ಜಾನ್ಸನ್‌ ಅವರನ್ನು ರಿಷಿ ಸುನಕ್‌ ಮತ್ತಿತರರು ಸೇರಿ ಕೆಳಗಿಳಿಸಿದರು ಎಂಬ ಸಿಟ್ಟು ಅವರ ಬೆಂಬಲಿಗರಲ್ಲಿ ಇದೆ. ಅಷ್ಟೇ ಅಲ್ಲ, ಕಾರ್ಯಕರ್ತರ ಮಟ್ಟದಲ್ಲೂ ಜಾನ್ಸನ್‌ಗೆ ಒಳ್ಳೆಯ ಹೆಸರಿದೆ. ಇವರೇ ಮತ್ತೂಮ್ಮೆ ಪ್ರಧಾನಿಯಾದರೆ, ರಾಜಕೀಯ ಅಸ್ಥಿರತೆಯನ್ನು ವಾಪಸ್‌ ಸ್ಥಿರ ಮಟ್ಟಕ್ಕೆ ತರಬಲ್ಲರು ಎಂಬ ಆಶಾಭಾವವೂ ಇದೆ.

ಜೆರೆಮಿ ಹಂಟ್‌
ಮಾಜಿ ಆರೋಗ್ಯ ಮತ್ತು ವಿದೇಶಾಂಗ ಸಚಿವರಾಗಿರುವ ಜೆರೆಮಿ ಹಂಟ್‌ ಕೂಡ ಕನ್ಸರ್ವೇಟಿವ್‌ ಪಕ್ಷದೊಳಗೆ ಉತ್ತಮ ಹೆಸರು ಹೊಂದಿದ್ದಾರೆ. ಆದರೂ ಜೆರೆಮಿ ಹಂಟ್‌ ಮಾತ್ರ ತಾವು ಪ್ರಧಾನಿ ಹುದ್ದೆ ರೇಸ್‌ನಲ್ಲಿ ಇಲ್ಲ ಎಂದೇ ಹೇಳಿದ್ದಾರೆ. ಆದರೂ ಇದೇ 31ಕ್ಕೆ ಮಂಡನೆಯಾಗಲಿರುವ ಮಿನಿ ಬಜೆಟ್‌ಗೆ ಇವರ ಸಲಹೆ ಬೇಕೇ ಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next