ಮೈಸೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿಗೆ 40 ಲಕ್ಷ ರೂ. ಖರ್ಚು ಮಾಡಲು ಅವಕಾಶ ನೀಡಲಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ಮಾಡಿರುವ ರೋಡ್ ಶೋ ವ್ಯವಸ್ಥೆಯ ಖರ್ಚುವೆಚ್ಚಗಳನ್ನು ನೀಡಿದವರು ಯಾರು ಎಂಬ ಬಗ್ಗೆ ಮಾಹಿತಿ ನೀಡಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮಾಹಿತಿ ಅಧಿಕಾರಿಗಳನ್ನು ಕೋರಿರುವುದಾಗಿ ಜೆಡಿಎಸ್ ವಕ್ತಾರ ಎನ್. ಆರ್. ರವಿಚಂದ್ರೇ ಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವ ರು, ಪ್ರಧಾನಿ ರೋಡ್ ಶೋ ವೇಳೆ ಸಾವಿರಾರು ಸಂಖ್ಯೆಯನ್ನು ಪೊಲೀಸರನ್ನು ಬಳಸಲು ಅವಕಾಶವಿದೆಯೇ? ಪ್ರಧಾನಿಯವರು ನಗರದ ಗನ್‌ಹೌಸ್‌ನಿಂದ ಸಯ್ನಾಜಿರಾವ್ ರಸ್ತೆಯ ಹೈವೇ ಸರ್ಕಲ್‌ವರೆಗೆ ನಡೆಸಿದ ಸುಮಾರು ನಾಲ್ಕು ಕಿ.ಮೀ. ರೋಡ್ ಶೋದ ಖರ್ಚು ವೆಚ್ಚವನ್ನು ಯಾರು ನೋಡಿಕೊಂಡಿದ್ದಾರೆ? ಇದಕ್ಕೆ ಎಷ್ಟು ಖರ್ಚು ಆಗಿದೆ ಹಾಗೂ ಇದರಲ್ಲಿ ಸರಕಾರದ ಪಾತ್ರವೇನು ಮುಂತಾದ ಎಲ್ಲ ಮಾಹಿತಿಗಳನ್ನು ಬಹಿರಂಗಪಡಿಸಲು ಮನವಿ ಮಾಡಲಾಗಿದೆ ಎಂದರು.
ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಈ ರೀತಿಯ ರೋಡ್ ಶೋಗಳನ್ನು ನಡೆಸಲು ಪ್ರಜಾಪ್ರತಿನಿಧಿ ಕಾಯ್ದೆ 1951 ಅಥವಾ ಚುನಾವಣ ಮಾದರಿ ನೀತಿ ಸಂಹಿತೆಯಲ್ಲಿ ಅವಕಾಶವಿದೆಯೆ? ರೋಡ್ ಶೋಗೆ ಸುಮಾರು ನಾಲ್ಕು ಕಿ.ಮೀ. ಉದ್ದದ ಕೇಸರಿ ಬಾವುಟ, ಕಬ್ಬಿಣದ ಬ್ಯಾರಿಕೇಡ್ ಹಾಗೂ ಜನರು ಆಸೀನರಾಗಲು ಒದಗಿಸಿದ ಕುರ್ಚಿ ಟಾರ್ಪಾಲ್‌ಗಳನ್ನೂ ಸರಬರಾಜು ಮಾಡಿದವರ್ಯಾರು ಎಂಬುದನ್ನೂ ಬಹಿರಂಗ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಮೋದಿ ರೋಡ್ ಶೋ: ವಿಶ್ವನಾಥ್ ಟೀಕೆ
ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಅಪಾರ ಗೌರವವಿದೆ. ಆದರೆ ಪ್ರಧಾನಿ ದೇಶದ ಸಮಸ್ಯೆಗಳನ್ನು ಬದಿಗೊತ್ತಿ ಚುನಾವಣ ಪ್ರಚಾರಕ್ಕೆ ಆದ್ಯತೆ ನೀಡಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗಾಗಿ ಯಾವೊಬ್ಬ ಪ್ರಧಾನಿಯೂ ಇಷ್ಟೊಂದು ಸಮಯವನ್ನು ಕಳೆದಿರಲಿಲ್ಲ. ಈ ವಿಷಯದಲ್ಲಿ ಮೋದಿಯವರು ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದಿದ್ದಾರೆ. ಮೋದಿ ರೋಡ್ ಶೋ ಫ್ಯಾಶನ್ ಶೋ ರೀತಿ ಆಯಿತು. ಮೋದಿ ರೋಡ್ ಶೋಗೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರಲಿಲ್ಲ. ಮೋದಿ ಆಗಮನದಿಂದ ಜನರಲ್ಲಿ ಸಿನಿಕ ಭಾವನೆ ಉಂಟಾಗಿದೆ ಎಂದರು. ರಾಜ್ಯದ ಬಿಜೆಪಿ ನಾಯಕರು ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆ. ಹೀಗಾಗಿ ಮತ ಕೇಳಲು ಜನರ ಮುಂದೆ ಬರಲಿಲ್ಲ. ಹೀಗಾಗಿ ಮೋದಿ ಅವರು ಪಕ್ಷದ ಪರವಾಗಿ ಪ್ರಚಾರ ನಡೆಸಿದರು. ಮೋದಿ ಪ್ರಚಾರಕ್ಕೆ ಭಾರೀ ಹಣ ಖರ್ಚಾಗಿದೆ ಎಂದು ಅವರು ದೂರಿದರು. ಕಾಂಗ್ರೆಸ್ ಮಾಡಿದ್ದ ಸಾಲವನ್ನು ನಾವು ತೀರಿಸು ತ್ತಿದ್ದೇವೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದು ಸರಿಯಲ್ಲ. ಕಾಂಗ್ರೆಸ್ ಸರಕಾರವಿದ್ದಾಗ ಎಷ್ಟು ಸಾಲವಿತ್ತು, ಈಗ ಎಷ್ಟು ಹೆಚ್ಚಾಗಿದೆ ಎಂದು ಬೊಮ್ಮಾಯಿ ಅವರು ತಿಳಿಸಬೇಕು. ಡಬಲ್ ಎಂಜಿನ್ ಸರಕಾರದಿಂದ ಯಾವುದೇ ಪ್ರಯೋಜನವಿಲ್ಲ ಎಂದರು.