Advertisement

ಪ್ರಧಾನಿ ಕಾರ್ಯಕ್ರಮಕ್ಕೆ ಅರಮನೆ ಮೈದಾನದಲ್ಲಿ ಸಿದ್ಧತೆ

12:14 PM Feb 01, 2018 | Team Udayavani |

ಬೆಂಗಳೂರು: ಅರಮನೆ ಮೈದಾನದಲ್ಲಿ ಫೆ.4ರಂದು ನಡೆಯಲಿರುವ ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಇದನ್ನು ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರದ ಉದ್ಘಾಟನೆ ಎಂದೂ ಪರಿಗಣಿಸಲು ಬಿಜೆಪಿ ತೀರ್ಮಾನಿಸಿರುವುದರಿಂದ ಸಮಾವೇಶಕ್ಕೆ ಹೊಸ ಕಳೆ ನೀಡಲು ಮುಂದಾಗಿದೆ.

Advertisement

ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್‌ ನಡುವೆಯೂ ಸುಮಾರು 4 ಲಕ್ಷ ಮಂದಿಯನ್ನು ಸೇರಿಸಿ ಸಮಾವೇಶ ನಡೆಸಲು ಬಿಜೆಪಿ ತೀರ್ಮಾನಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಹಲವು ಸಮಿತಿಗಳನ್ನು ರಚಿಸಲಾಗಿದೆ. ಈಗಾಗಲೇ ಸಮಿತಿಗಳು ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಿವೆ. 

ಸಮಾವೇಶ ನಡೆಯಲಿರುವ ಅರಮನೆ ಮೈದಾನದಲ್ಲಿ 20 ಅಡಿ ಎತ್ತರ, 80 ಅಡಿ ಅಗಲ ಮತ್ತು 40 ಅಡಿ ಉದ್ದದ ಬೃಹತ್‌ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಜತೆಗೆ, ದೂರ ಕುಳಿತ ಕಾರ್ಯಕರ್ತರಿಗೆ ನೋಡಲು 20 ಬೃಹತ್‌ ಗಾತ್ರದ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. 

ಭದ್ರತಾ ಉಸ್ತುವಾರಿಗಾಗಿ ಬೆಂಗಳೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಪ್ತಗಿರಿಗೌಡ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಕಾರ್ಯಕರ್ತರನ್ನೊಳಗೊಂಡ ಭದ್ರತಾ ತಂಡ ರಚಿಸಲಾಗಿದ್ದು, ಕಾರ್ಯಕರ್ತರನ್ನು ಸಮಾವೇಶದ ಸ್ಥಳಕ್ಕೆ ತಂದು ಬಿಡಲಿದೆ. ಅಲ್ಲದೆ, ಕಾರ್ಯಕರ್ತರನ್ನು ವಾಹನ ನಿಲುಗಡೆ ಸ್ಥಳ, ಊಟದ ಸ್ಥಳಗಳಿಗೆ ಕಳುಹಿಸುವ ಕೆಲಸವನ್ನೂ ಮಾಡಲಿದೆ. 

ಮೈದಾನದ ಆವರಣದಲ್ಲಿ ತಾತ್ಕಾಲಿಕವಾಗಿ ಮಿನಿ ಆಸ್ಪತ್ರೆ ವ್ಯವಸ್ಥೆ ಮಾಡಲಾಗುತ್ತಿದ್ದು, ಡಾ.ವಾಸುದೇವ್‌ ಮತ್ತು ತಂಡ ಅಗತ್ಯ ಬಿದ್ದವರಿಗೆ ಚಿಕಿತ್ಸೆ ನೀಡಲು ಸಿದ್ಧವಿರುತ್ತದೆ. ಪಾರ್ಕಿಂಗ್‌ ಸ್ಥಳ, ಊಟದ ಸ್ಥಳ ಸೇರಿ ಸುತ್ತಲೂ ಎರಡು ಹಾಸಿಗೆಗಳ ಎಂಟು ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಉಸ್ತುವಾರಿಗಾಗಿ ನರ್ಸಿಂಗ್‌ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಅಗತ್ಯ ಔಷಧ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಸಂಚಾರ ವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿದಂತೆ ವಿಶೇಷ ತಂಡ ರಚಿಸಲಾಗಿದೆ.

Advertisement

ಊಟ, ನೀರಿನ ವ್ಯವಸ್ಥೆ: ಸಮಾವೇಶಕ್ಕೆ ಆಗಮಿಸುವ ಲಕ್ಷಾಂತರ ಕಾರ್ಯಕರ್ತರಿಗೆ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ಸಿದ್ಧತೆಗಾಗಿ ಮೈದಾನದ ಅರ್ಧ ಎಕರೆ ಜಾಗದಲ್ಲಿ ನಾಲ್ಕು ಅಡುಗೆ ಮನೆಗಳನ್ನು ನಿರ್ಮಿಸಲಾಗಿದೆ. ಆಹಾರ ಸಿದ್ಧಪಡಿಸಲು 600 ಅಡುಗೆಯವರನ್ನು ನೇಮಿಸಲಾಗಿದೆ. ಅವುಗಳನ್ನು ಕಾರ್ಯಕರ್ತರಿಗೆ ವಿತರಿಸಲು 250 ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಊಟ, ನೀರಿನ ವ್ಯವಸ್ಥೆಗಾಗಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ನೇತೃತ್ವದಲ್ಲಿ 2000 ಕಾರ್ಯಕರ್ತರನ್ನು ನೇಮಿಸಲಾಗಿದೆ. ಬಿಬಿಎಂಪಿ ಸದಸ್ಯ ಮಂಜುನಾಥ್‌ ನೇತೃತ್ವದಲ್ಲಿ ಸ್ವತ್ಛತಾ ತಂಡ ರಚಿಸಲಾಗಿದ್ದು, ಸುಮಾರು 80 ಕಾರ್ಯ ಕರ್ತರು 200ಕ್ಕೂ ಹೆಚ್ಚು ಖಾಸಗಿ ಸ್ವತ್ಛತಾ ಸಿಬ್ಬಂದಿ ನೆರವಿನೊಂದಿಗೆ ಸ್ವತ್ಛತೆ ಬಗ್ಗೆ ಗಮನಹರಿಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next