Advertisement

ಪ್ರಧಾನಮಂತ್ರಿ ಕಛೇರಿಯಿಂದ ಕೋವಿಡ್ ನಿಯಂತ್ರಣ ಕ್ರಮಗಳ ಪರಿಶೀಲನೆ

12:05 AM Apr 12, 2020 | Hari Prasad |

ನವದೆಹಲಿ: ಕೋವಿಡ್ ವೈರಸ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳನ್ನು ಶುಕ್ರವಾರ ಪ್ರಧಾನಮಂತ್ರಿ ಕಾರ್ಯಾಲಯವು ಪರಿಶೀಲಿಸಿದೆ. ವೈಯಕ್ತಿಕ ಸುರಕ್ಷಾ ಸಾಧನಗಳ (ಪಿಪಿಇ) ಉತ್ಪಾದನೆ ಪ್ರಕ್ರಿಯೆಯು ತೀವ್ರಗತಿಯಲ್ಲಿ ಸಾಗುತ್ತಿದೆ ಎಂದು ಪಿಎಂಒಗೆ ಮಾಹಿತಿ ನೀಡಲಾಗಿದೆ.

Advertisement

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆದಿದ್ದು, ಕೋವಿಡ್ ಸವಾಲನ್ನು ಎದುರಿಸಲು ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಚರ್ಚೆ ನಡೆದಿದೆ. ದೇಶಾದ್ಯಂತ ಈವರೆಗೆ 1,45,916 ಸ್ಯಾಂಪಲ್‌ ಗಳ ಪರೀಕ್ಷೆ ನಡೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಸ್ತೃತ ಪರೀಕ್ಷಾ ಪ್ರಕ್ರಿಯೆ ಕುರಿತು ಪ್ರಧಾನಿ ಕಾರ್ಯಾಲಯ ತೃಪ್ತಿ ವ್ಯಕ್ತಪಡಿಸಿದೆ.

ಪಿಪಿಇಗಳ ತಯಾರಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜತೆಗೆ ಜಿಲ್ಲಾ ಮಟ್ಟದಲ್ಲಿ ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಸಂಸ್ಥೆಗಳ ನೆರವನ್ನು ಪಡೆದುಕೊಂಡು, ಸಂಪನ್ಮೂಲಗಳ ಸದ್ಬಳಕೆ ಆಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಸಮುದಾಯಗಳ ಕಡೆಗೆ ತಜ್ಞರ ದೃಷ್ಟಿ
ಭಾರತದಲ್ಲಿ ಕೋವಿಡ್ ಸೋಂಕು ಸಮುದಾಯದ ಮಟ್ಟದಲ್ಲಿ ಹರಡುತ್ತಿರುವ ಅನುಮಾನಗಳು ದಟ್ಟವಾಗಿ ಆವರಿಸಿವೆ. ಇದಕ್ಕೆ ಪೂರಕವಾಗಿ, ಐಸಿಎಂಆರ್‌ ಇತ್ತೀಚೆಗೆ, ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸುಮಾರು 52 ಪ್ರಾಂತ್ಯಗಳಲ್ಲಿ ನಡೆಸಿರುವ ಕೋವಿಡ್ ವೈರಸ್‌ ಪರೀಕ್ಷೆಯಲ್ಲೂ ಈ ಅನುಮಾನ ದೃಢಪಟ್ಟಿದೆ.

ಫೆ. 15ರಿಂದ ಏ. 2ರ ಅವಧಿಯಲ್ಲಿ ಐಸಿಎಂಆರ್‌, ಈ ಪರೀಕ್ಷೆಗಳನ್ನು ನಡೆಸಿತ್ತು. ಇದರಲ್ಲಿ, ಕೇವಲ ಕೋವಿಡ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಲ್ಲದೆ, ಅತಿ ತೀವ್ರವಾದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ (ಸಿವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಇಲ್‌ನೆಸ್‌ – ಎಸ್‌ಎಆರ್‌ಐ) ರೋಗಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 52 ಜಿಲ್ಲೆಗಳಿಂದ ಒಟ್ಟು 5,911 ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 104 ಜನರಿಗೆ ಕೊರೊನಾ ಇರುವುದು ದೃಢಪಟ್ಟಿದೆ.

Advertisement

ಪರೀಕ್ಷೆಯಿಂದ ಹೊರಬಿದ್ದ ಆತಂಕಕಾರಿ ವಿಚಾರವೇನೆಂದರೆ, ಸೋಂಕು ದೃಢಪಟ್ಟಿರುವ 104 ರೋಗಿಗಳಲ್ಲಿ 40 ಜನರು ಯಾವುದೇ ವಿದೇಶ ಪ್ರವಾಸ ಮಾಡಿಲ್ಲ ಹಾಗೂ ಸೋಂಕಿತರ ಜೊತೆಗೆ ನಂಟನ್ನೂ ಹೊಂದಿಲ್ಲ. ಈ 40 ಜನರು 15 ರಾಜ್ಯಗಳ 36 ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next