ದೇವನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡದೆ ಕೇವಲ ರಾಜಕೀಯ ಪಕ್ಷಗಳನ್ನು ಟೀಕಿಸುವುದೇ ಭಾಷಣವಾಗಿದೆ. ಉತ್ತರ ಕರ್ನಾಟಕದಲ್ಲಿ ನಿರಂತರವಾಗಿ ಮಹದಾಯಿ ಹೋರಾಟ ನಡೆಯುತ್ತಿದ್ದರೂ ಅದರ ವಿಚಾರ ಎತ್ತದಿರುವುದು ಪ್ರಧಾನಿಗೆ ರೈತರ ಮೇಲೆ ಎಷ್ಟು ಕಾಳಜಿ ಇದೆ ಎಂಬುವುದು ಸ್ಪಷ್ಟವಾಗು ತ್ತಿದೆ ಎಂದು ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ವಿಜಯಪುರ ಕ್ರಾಸ್‌ನಲ್ಲಿರುವ ಅವರ ಕಚೇರಿಯಲ್ಲಿ ಮೋದಿ ಬೆಂಗಳೂರಿಗೆ ಬಂದು ಕೇವಲ ರಾಜಕೀಯ ಮಾತನಾಡಿರುವುದಕ್ಕೆ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮೋಸ ಮಾಡಿದ ಪ್ರಧಾನಿ: 900 ದಿನಗಳಿ ಗಿಂತಲೂ ಮಹದಾಯಿ ಹೋರಾಟ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿದೆ. ರೈತರು, ಕನ್ನಡ ಪರ ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿ ಇದರ ಬಗ್ಗೆ ಮಾತನಾಡುತ್ತಾರೆ ಎಂಬುವ ನಿರೀಕ್ಷೆಯಲ್ಲಿದ್ದ ಜನರಿಗೆ ಮೋಸ ಮಾಡಿದ್ದಾರೆ. ಕಳೆದ ವಾರದಷ್ಟೆ ಅವರ ಗಮನ ಸೆಳೆಯಲು ಕರ್ನಾಟಕ ಬಂದ್‌ನ್ನು ಕನ್ನಡ ಪರ ಸಂಘಟನೆಗಳು ಮಾಡಿದ್ದವು. ಅದಕ್ಕೆ
ರಾಜಕೀಯ ಅರ್ಥ ಕಲ್ಪಿಸುತ್ತಾರೆ. ಭಾನುವಾರ ಬಂದ್ ಮಾಡಿ ಗಮನ ಸೆಳೆಯುವ ಪ್ರಯತ್ನವಿತ್ತು. ಆದರೆ, ಹೈಕೋರ್ಟ್
ಆದೇಶದಿಂದ ಕೈಬಿಡಲಾಯಿತು ಎಂದರು.
ಸ್ಥಳೀಯ ಮುಖಂಡರಂತೆ ಮಾತನಾಡುತ್ತಾರೆ: ಪ್ರಧಾನಿ ನರೇಂದ್ರ ಮೋದಿ ಮಾತನಾಡುವಾಗ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿದೆ. ಶೇ.10 ಕಮೀಷನ್ ಸರ್ಕಾರವಾಗಿದೆ. ಗ್ರೀನ್ ಸಿಟಿ ಬೆಂಗಳೂರನ್ನು ಗಾರ್ಬೇಜ್ ಸಿಟಿ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಒಬ್ಬ ಪಕ್ಷದ ವಕ್ತಾರನಾಗಿ ಮಾತ್ರ ಬಂದಿರುತ್ತಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಇವರಿಗೇನು ಗೊತ್ತು.
ಸ್ಥಳೀಯ ಮುಖಂಡರು ಸೇರಿ ಸಣ್ಣತನದ ಮಾತು ಆಡುತ್ತಾರೆ. ಅದನ್ನೇ ಮೈಗೂಡಿಸಿ ಕೊಂಡಿದ್ದಾರೆ. ಮೂರು ಲಕ್ಷ ಸಾವಿರ ಕೋಟಿ ರೂ. ಅನುದಾನ ನೀಡಿದ್ದೇನೆಂದು ಹೇಳುವವರು ಇಷ್ಟು ದಿನ ಏಕೆ ಹೇಳಲಿಲ್ಲ. ಈ ರೀತಿ ಸುಳ್ಳುಗಳನ್ನು ಹೇಳಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ನಿರುದ್ಯೋಗಿ ಯುವಕರಿಗೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಹೇಳಿದ್ದರು. ಹೊರ ದೇಶದಲ್ಲಿರುವ ಕಪ್ಪುಹಣ ತಂದು ಪ್ರತಿ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಗಳನ್ನು ಹಾಕುತ್ತೇವೆಂದು ಹೇಳಿದ್ದರು. ಆದರೆ ಅಮಿತ್ ಶಾ ಇದೊಂದು ಚುನಾವಣಾ ಜುಮ್‌ಲಾ (ಗಿಮಿಕ್ಸ್) ಆಗಿದೆ ಎಂದು ಹೇಳುತ್ತಾರೆ. ಈಗ ಮಂಡಿಸಿರುವ ಬಜೆಟ್ ನಲ್ಲಿರುವ ಕಾರ್ಯಕ್ರಮಗಳು ನರೇಂದ್ರ ಮೋದಿ, ಅಮಿತ್ ಶಾ ಜುಮ್‌ಲಾ ಅಲ್ಲವೇ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು. ಸುಳ್ಳು ಹೇಳಿದ ಪ್ರಧಾನಿ: ಆರೋಗ್ಯ ವಿಮಾ ಯೋಜನೆ ತಂದಿದ್ದು, 50 ಕೋಟಿ ಜನರಿಗೆ ಎರಡು ಸಾವಿರ ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದೇವೆಂದು ಹೇಳುವವರು ಈ ಯೋಜನೆಯಲ್ಲಿ 50 ಕೋಟಿ ಕುಟುಂಬಕ್ಕೆ 5 ಲಕ್ಷ ಲೆಕ್ಕ ಹಾಕಿದರೆ ಲಕ್ಷ ಲಕ್ಷ ಕೋಟಿ ರೂ. ಅನುದಾನ ಮೀಸಲಿಡಬೇಕು. ಕೇವಲ ಒಂದು ಕುಟುಂಬಕ್ಕೆ 40 ರೂ. ಮಾತ್ರ ಆರೋಗ್ಯ ವಿಮೆಗೆ ಬರುತ್ತದೆ. 5 ಲಕ್ಷ ರೂ. ಹೇಗೆ ಕೊಡಲು ಸಾಧ್ಯ. ಯುವಕರಿಗೆ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿ ನಿರುದ್ಯೋಗಿಗಳಾಗಿ ಮಾಡಿದ್ದಾರೆ. ಟೀವಿ ಸಂದರ್ಶನದಲ್ಲಿ ಯುವಕರು ಪಕೋಡ ಮಾರಿ ಜೀವನ ಸಾಗಿಸಬಹುದು ಎಂಬ ಹೇಳಿಕೆ ನೀಡುತ್ತಾರೆ. ಪ್ರಧಾನ ಮಂತ್ರಿ ಚಹಾ ಮಾರಿ ಜೀವನ ಸಾಗಿಸಬಹುದಿತ್ತು. ಏಕೆ ಪ್ರಧಾನಿಯಾಗಿದ್ದೀರಾ ಎಂದು ಪ್ರಶ್ನಿಸಿದರು. ಜುಮ್‌ಲಾ (ಗಿಮಿಕ್ಸ್) ಮಾಡಲು ಹೊರಟಿದ್ದಾರೆ: ಮತ್ತೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ಇಂಥ ಜುಮ್‌ಲಾ (ಗಿಮಿಕ್ಸ್) ಮಾಡಲು ಹೊರಟಿದ್ದಾರೆ. ಈಗಾಗಲೇ
ನೋಟು ಬ್ಯಾನ್ ಮಾಡಿ 150ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ಸಂತ್ವಾನ, ಕೆಲಸ, ಪರಿಹಾರ ನೀಡುವ ಕೆಲಸವಾಗಿಲ್ಲ. ಯಾರಾದರೂ ಹಿಂದೂಗಳು ಸತ್ತರೆ ಆ ಹೆಣಕ್ಕೆ ಬಿಜೆಪಿ ಕಾರ್ಯಕರ್ತ ಎಂದು ಬಿಂಬಿಸುತ್ತಾರೆ. ಹೆಣದ ಮುಂದೆ ರಾಜಕೀಯ ಮಾಡುವುದೇ ಬಿಜೆಪಿಯ ಜಾಯಮಾನವಾಗಿದೆ ಎಂದು ಲೇವಡಿ ಮಾಡಿದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂವನಹಳ್ಳಿ ಮುನಿರಾಜು, ಕೆಪಿಸಿಸಿ ಸದಸ್ಯ ರಾಮಚಂದ್ರಪ್ಪ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಡೇವಿಡ್ ನಾರಾಯಣಸ್ವಾಮಿ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪುರುಶೋತ್ತಮ್ ಕುಮಾರ್ ಮತ್ತಿತರರಿದ್ದರು.