Advertisement

35 ಸಾವಿರ ಕೋಟಿ ಮೌಲ್ಯದ ರಕ್ಷಣಾ ಉತ್ಪನ್ನ ರಫ್ತು ನಮ್ಮ ಗುರಿ: ಪ್ರಧಾನಿ ಮೋದಿ

09:25 AM Feb 06, 2020 | Hari Prasad |

ಲಕ್ನೋ: ‘ಮುಂದಿನ 5 ವರ್ಷಗಳಲ್ಲಿ 5 ಶತಕೋಟಿ ಡಾಲರ್‌ ಮೊತ್ತದ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುವುದೇ ನಮ್ಮ ಗುರಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಉತ್ತರಪ್ರದೇಶದ ಲಕ್ನೋದಲ್ಲಿ 11ನೇ ಆವೃತ್ತಿಯ ಡಿಫೆನ್ಸ್‌ ಎಕ್ಸ್‌ಪೋಗೆ ಬುಧವಾರ ಚಾಲನೆ ನೀಡಿದ ಅವರು, ಉತ್ಪಾದನೆಗೆ ಉತ್ತೇಜನ ನೀಡಲು ಹಾಗೂ ಹೂಡಿಕೆದಾರರನ್ನು ಸೆಳೆಯಲು ತಮ್ಮ ಸರಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಜತೆಗೆ, ‘ಭಾರತಕ್ಕಾಗಿ ಮತ್ತು ಜಗತ್ತಿಗಾಗಿ ಮೇಕ್‌ ಇನ್‌ ಇಂಡಿಯಾ’ ಎನ್ನುವುದೇ ನಮ್ಮ ಮಂತ್ರ ಎಂದೂ ಹೇಳಿದರು.

35 ಸಾವಿರ ಕೋಟಿಗೇರಿಸುವ ಗುರಿ: ಭಾರತದಂಥ ಬೃಹತ್‌ ದೇಶವು ಸಂಪೂರ್ಣವಾಗಿ ಆಮದು ಮೇಲೆ ಅವಲಂಬಿಸಲು ಸಾಧ್ಯವಿಲ್ಲ ಎಂದ ಮೋದಿ, ಕಳೆದ 5 ವರ್ಷಗಳಲ್ಲಿ 460 ರಕ್ಷಣಾ ಪರವಾನಗಿಯನ್ನು ವಿತರಿಸಲಾಗಿದೆ. 2014ರಲ್ಲಿ ಈ ಸಂಖ್ಯೆ 210 ಇತ್ತು ಎಂದಿದ್ದಾರೆ. ಭಾರತವು ಈಗ ಆರ್ಟಿಲ್ಲರಿ ಗನ್‌ಗಳು, ವಿಮಾನ ವಾಹಕಗಳು, ಜಲಾಂತರ್ಗಾಮಿಗಳು, ಲಘು ಯುದ್ಧ ವಿಮಾನಗಳು, ಸಮರ ಹೆಲಿಕಾಪ್ಟರ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ.

2014ರಲ್ಲಿ 2 ಸಾವಿರ ಕೋಟಿ ರೂ. ಮೌಲ್ಯದ ರಕ್ಷಣಾ ಉತ್ಪನ್ನಗಳನ್ನು ಭಾರತ ರಫ್ತು ಮಾಡಿದೆ. ಎರಡೇ ವರ್ಷಗಳಲ್ಲಿ ಇದು 17 ಸಾವಿರ ಕೋಟಿ ರೂ.ಗೆ ಏರಿದೆ. ಮುಂದಿನ 5 ವರ್ಷಗಳಲ್ಲಿ ಇದನ್ನು 35 ಸಾವಿರ ಕೋಟಿ ರೂ.ಗೆ ಏರಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದೂ ಮೋದಿ ಹೇಳಿದ್ದಾರೆ.

ಯಾವುದೇ ದೇಶವನ್ನು ಗುರಿಯಾಗಿಸಿಕೊಂಡು ನಾವು ರಕ್ಷಣಾ ಸನ್ನದ್ಧತೆ ನಡೆಸುತ್ತಿಲ್ಲ. ಏಕೆಂದರೆ ವಿಶ್ವಶಾಂತಿಗೆ ನಾವು ಕೂಡ ಕೊಡುಗೆದಾರರು. ಭಾರತಕ್ಕೆ ಮಾತ್ರವಲ್ಲದೆ, ನೆರೆರಾಷ್ಟ್ರಗಳ ಭದ್ರತೆಯೂ ನಮ್ಮ ಜವಾಬ್ದಾರಿ ಎಂದೂ ಮೋದಿ ತಿಳಿಸಿದ್ದಾರೆ.

Advertisement

ಡಿಜಿಟಲ್‌ ಪರಿವರ್ತನೆಯತ್ತ ಕಣ್ಣು
11ನೇ ಆವೃತ್ತಿಯ ಈ ಎಕ್ಸ್‌ಪೋದಲ್ಲಿ ಭಾರತ ಮತ್ತು ಇತರ ದೇಶಗಳ ರಕ್ಷಣಾ ಸಲಕರಣೆಗಳ ಉತ್ಪಾದನ ಕಂಪೆನಿಗಳು ರಕ್ಷಣಾ ಕ್ಷೇತ್ರದಲ್ಲಿನ ತಮ್ಮ ಉತ್ಪನ್ನಗಳು ಹಾಗೂ ಸೇವೆಗಳನ್ನು ಪ್ರದರ್ಶಿಸಲಿವೆ. ಇದರಿಂದ ಹೊಸ ತಂತ್ರಜ್ಞಾನಗಳು ಹಾಗೂ ತಂತ್ರಜ್ಞಾನ ಸಂಬಂಧಿ ಸೊಲ್ಯೂಷನ್‌ಗಳು ಲಭ್ಯವಾಗಲಿವೆ.

ಈ ಬಾರಿ ‘ಭಾರತ-ಉದಯೋನ್ಮುಖ ರಕ್ಷಣಾ ಉತ್ಪಾದನ ಹಬ್‌’ ಎಂಬ ಥೀಮ್‌ನಲ್ಲಿ ಎಕ್ಸ್‌ಪೋ ನಡೆಯುತ್ತಿದ್ದು, ರಕ್ಷಣಾ ಕ್ಷೇತ್ರದಲ್ಲಿನ ಡಿಜಿಟಲ್‌ ಪರಿವರ್ತನೆಯತ್ತ ಗಮನ ಹರಿಸಲಾಗಿದೆ.

– ಎಕ್ಸ್‌ಪೋ ನಡೆಯಲಿರುವ ದಿನಗಳು: 05

ಭಾಗಿಯಾಗಿರುವ ಒಟ್ಟು ಕಂಪೆನಿಗಳ ಸಂಖ್ಯೆ: 1,028

ಈ ಪೈಕಿ ವಿದೇಶಿ ರಕ್ಷಣಾ ಸಾಮಗ್ರಿ ಕಂಪೆನಿಗಳು : 172

ಭಾಗಿಯಾಗಿರುವ ವಿವಿಧ ದೇಶಗಳ ರಕ್ಷಣಾ ಸಚಿವರು : 38

2018ರಲ್ಲಿ ಚೆನ್ನೈನಲ್ಲಿ ನಡೆದ ಎಕ್ಸ್‌ ಪೋದಲ್ಲಿ ಭಾಗಿಯಾಗಿದ್ದ ಕಂಪೆನಿಗಳು : 702

ಅಂದು ಭಾಗಿಯಾಗಿದ್ದ ವಿದೇಶಿ ಕಂಪೆನಿಗಳು : 160

Advertisement

Udayavani is now on Telegram. Click here to join our channel and stay updated with the latest news.

Next