Advertisement
ಬಡತನ ನಿರ್ಮೂಲನೆ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ, ಜಾಗತಿಕ ತಾಪಮಾನ ನಿಯಂತ್ರಣ ಮತ್ತು ಭಯೋತ್ಪಾದನೆ ಸೇರಿದಂತೆ ಹಲವಾರು ವಿಷಯಗಳ ಮೇಲೆ ಮಾತನಾಡಿದ ಪ್ರಧಾನಿ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ರಾಷ್ಟ್ರನಾಯಕರ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿದರು.
Related Articles
Advertisement
ಜಗತ್ತಿನಾದ್ಯಂತ ಈ ವರ್ಷ ಮಹಾತ್ಮಾ ಗಾಂಧಿ ಅವರ 150ನೇ ಜಯಂತಿಯನ್ನು ಆಚರಿಸುತ್ತಿದೆ. ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಗಾಂಧೀಜಿ ಅವರು ಹಾಕಿಕೊಟ್ಟ ಮಾರ್ಗ ಅಶಾಂತಿಯಿಂದ ಕಂಗೆಟ್ಟಿರುವ ಇಂದಿನ ಜಗತ್ತಿಗೆ ಆದರ್ಶಪ್ರಾಯವಾಗಿದೆ ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟರು.
ನಾನು ಇಲ್ಲಿಗೆ ಬರುತ್ತಿರಬೇಕಾದರೆ ವಿಶ್ವಸಂಸ್ಥೆಯ ಗೋಡೆಗಳ ಮೇಲೆ ‘ಪ್ಲಾಸ್ಟಿಕ್ ಬಳಕೆ ನಿಷೇಧಿಸಿ’ ಎಂದು ಬರೆದಿರುವುದನ್ನು ಕಂಡೆ. ನಮ್ಮ ದೇಶದಲ್ಲಿ ಒಮ್ಮೆಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಅನ್ನು ನಿಷೇಧಿಸುವ ನಿಟ್ಟಿನಲ್ಲಿ ಬಹುದೊಡ್ಡ ಅಭಿಯಾನವೊಂದು ನಡೆಯುತ್ತಿದೆ ಎಂಬುದನ್ನು ನಾನಿಲ್ಲಿ ನಿಮ್ಮ ಗಮನಕ್ಕೆ ತರಲು ಸಂತೋಷಪಡುತ್ತೇನೆ ಎಂದು ಮೋದಿ ಹೇಳಿದರು.
ಮಾತ್ರವಲ್ಲದೇ ಮುಂದಿನ ಐದು ವರ್ಷಗಳಲ್ಲಿ ಭಾರತವು ‘ಕ್ಷಯ ರೋಗ ಮುಕ್ತವಾಗಲಿದೆ’. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಪದವೇ ನಮಗೆ ಸ್ಪೂರ್ತಿಯಾಗಿದೆ. ಮತ್ತಿದು ಕೇವಲ ಭಾರತಕ್ಕೆ ಮಾತ್ರವೇ ಸೀಮಿತವಾಗಿಲ್ಲ ಹಾಗೂ ಕೇವಲ ತೋರಿಕೆಗಾಗಿ ನಾವು ಕಠಿಣ ಪರಿಶ್ರಮ ಪಡುತ್ತಿಲ್ಲ ಎಂದೂ ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಭಾರತವು ಇಂದು ವಿಶ್ವಕ್ಕೇ ಒಂದು ಸ್ಪೂರ್ತಿಯಾಗಿದೆ ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದರು. ಅಭಿವೃದ್ಧಿಶೀಲ ರಾಷ್ಟ್ರವೊಂದು ದೇಶವ್ಯಾಪಿ ಬೃಹತ್ ಸ್ವಚ್ಛತಾ ಅಭಿಯಾನವೊಂದನ್ನು ಯಶಸ್ವಿಯಾಗಿ ನಡೆಸುತ್ತದೆ ಎಂದಾದರೆ ಹಾಗೂ ಕೇವಲ ಐದು ವರ್ಷಗಳಲ್ಲಿ 11 ಕೋಟಿ ಶೌಚಾಲಯಗಳನ್ನು ನಿರ್ಮಿಸಬಲ್ಲದು ಎಂದಾದರೆ ಈ ವ್ಯವಸ್ಥೆಯು ಇಡೀ ವಿಶ್ವಕ್ಕೇ ಒಂದು ಸ್ಪೂರ್ತಿಯ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಇನ್ನು ತನ್ನ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಜಾಗತಿಕ ತಾಪಮಾನದ ವಿಚಾರವನ್ನು ಪ್ರಸ್ತಾಪಿಸಲು ಮರೆಯಲಿಲ್ಲ. ಜಾಗತಿಕ ತಾಪಮಾನದ ಕಾರಣದಿಂದಾಗಿ ಇಂದು ವಿಶ್ವದ ಹಲವು ಕಡೆಗಳಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ ಎಂದು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಹಾಗೂ ‘ಪರಿಸರ ರಕ್ಷಿಸಿ’ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮೋದಿ ಅವರು ವಿಶ್ವಕ್ಕೇ ಕರೆ ನೀಡಿದರು. ಜಾಗತಿಕ ತಾಪಮಾನಕ್ಕೆ ಕಡಿಮೆ ಕೊಡುಗೆ ನೀಡುತ್ತಿರುವ ದೇಶ ಭಾರತವಾಗಿದೆ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುತ್ತಿರುವ ರಾಷ್ಟ್ರವೂ ಭಾರತವಾಗಿದೆ ಎಂದು ಮೋದಿ ಅವರು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪ್ರತಿಪಾದಿಸಿದರು.
ತನ್ನ ಭಾಷಣದಲ್ಲಿ ಭಯೋತ್ಪಾದನೆಯ ವಿಚಾರವನ್ನು ಪ್ರಸ್ತಾಪಿಸಲು ಪ್ರಧಾನಿ ಮೋದಿ ಮರೆಯಲಿಲ್ಲ. ಭಯೋತ್ಪಾದನೆಯ ವಿಚಾರಕ್ಕೆ ಬಂದಾಗ ಜಗತ್ತಿನ ದೇಶಗಳು ತೋರುತ್ತಿರುವ ದ್ವಂದ್ವ ನೀತಿಯು ವಿಶ್ವಸಂಸ್ಥೆ ಸ್ಥಾಪನೆಗೊಂಡ ಆಶಯಗಳಿಗೆ ವಿರುದ್ಧವಾದುದಾಗಿದೆ ಎಂದು ಹೇಳುವ ಮೂಲಕ ಮೋದಿ ಅವರು ಪಾಕಿಸ್ಥಾನ, ಚೀನಾ ಸಹಿತ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಮತ್ತು ಅಂತಹ ದೇಶಗಳಿಗೆ ಬೆಂಬಲವಾಗಿ ನಿಂತಿರುವ ದೇಶಗಳನ್ನು ತರಾಟೆಗೆ ತೆಗೆದುಕೊಂಡರು. ಮಾನವ ಜನಾಂಗದ ಉಳಿವಿಗಾಗಿ ಭಯೋತ್ಪಾದನೆಯ ವಿರುದ್ಧ ಹೋರಾಡುವುದು ಎಲ್ಲಾ ರಾಷ್ಟ್ರಗಳ ಆದ್ಯ ಕರ್ತವ್ಯವಾಗಿದೆ ಎಂದು ಮೋದಿ ವಿಶ್ವದ ರಾಷ್ಟ್ರಗಳನ್ನು ಒತ್ತಾಯಿಸಿದರು.
ವಿಶ್ವ ಶಾಂತಿಗಾಗಿ ಭಾರತ ಮಾಡಿರುವಷ್ಟು ತ್ಯಾಗವನ್ನು ಯಾವ ರಾಷ್ಟ್ರವೂ ಮಾಡಿಲ್ಲ ಎಂದು ಮೋದಿ ವಿಶ್ವ ಸಮುದಾಯದ ಮುಂದೆ ಪ್ರತಿಪಾದಿಸಿದರು. ವಿಶ್ವಸಂಸ್ಥೆಯ ಶಾಂತಿ ಕಾಪಾಡುವ ಯೋಜನೆಗೆ ಭಾರತದ ಕೊಡುಗೆ ಗಮನಾರ್ಹವಾದುದು ಎಂದು ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.