Advertisement

ಬಡವರ ಯೋಜನೆಗೆ ವಿಪಕ್ಷಗಳ ಅಡ್ಡಿ : ಮೋದಿ

06:10 AM Apr 11, 2018 | Team Udayavani |

ಮೋತಿಹರಿ (ಬಿಹಾರ): ಸಮಾಜವನ್ನು ಒಡೆಯುವ ಕೆಟ್ಟ ಕೆಲಸಕ್ಕೆ ಕೈ ಹಾಕಿರುವ ವಿಪಕ್ಷ ಗಳು, ಬಡವರ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳಿಗೆ ಹಾದಿಬೀದಿಗಳಿಂದ ಹಿಡಿದು ಸಂಸತ್ತಿನವರೆಗೆ ಅಡೆತಡೆಗಳನ್ನು ಹಾಕುತ್ತಲೇ ಇವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

Advertisement

ಬಿಹಾರದ ಮೋತಿಹರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಪಕ್ಷಗಳಾದ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಹೆಸರೆತ್ತದೆ ಅವುಗಳ ಮೇಲೆ ವಾಗ್ಧಾಳಿ ನಡೆಸಿದರು. ಎಸ್ಸಿ, ಎಸ್ಟಿಗಳ ಕಾಯ್ದೆ ತಿದ್ದುಪತಿ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಬೇಕೆಂತಲೇ ಬೀದಿಗಿಳಿದು ಭಾರತ್‌ ಬಂದ್‌ ಮಾಡಿಸಿದ ವಿಪಕ್ಷಗಳು, ಅತ್ತ, ಸಂಸತ್‌ನ ಸುಗಮ ಕಲಾಪಕ್ಕೂ ಅಡ್ಡಿಪಡಿಸಿದವು ಎಂದ ಅವರು, “ಸಮಾಜದ ಕೆಲವು ಶಕ್ತಿಗಳಿಗೆ ಬಡವರ ಉದ್ಧಾರ ಬೇಕಿಲ್ಲ. ಬಡವರು ಉದ್ಧಾರವಾದರೆ ಅವರನ್ನು ದಾರಿತಪ್ಪಿಸಲು ಸಾಧ್ಯವಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿದೆ” ಎಂದು ಟೀಕಿಸಿದರು.

ನಿತೀಶ್‌ ಆಡಳಿತಕ್ಕೆ ಸೈ: “ಬಿಹಾರದಲ್ಲೂ ಪ್ರತಿಪಕ್ಷಗಳ ಉಪಟಳ ಕಡಿಮೆಯೇನಿಲ್ಲ. ಆದರೂ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರ್ಕಾರದ ನಿಗದಿತ ಉದ್ದೇಶ, ಗುರಿಗಳನ್ನು ನಿಗದಿತ ಅವಧಿಯಲ್ಲೇ ಮುಗಿಸುತ್ತಿದ್ದಾರೆ. ಇದು ವಿಪಕ್ಷಗಳ ಕಣ್ಣು ಕೆಂಪಾಗಿಸಿದೆ” ಎಂದ ಅವರು, “ನಿತೀಶ್‌ ಸರ್ಕಾರವು ಕಡತಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು” ಎಂಬ ಕಿವಿಮಾತನ್ನೂ ಹೇಳಿದರು.

ಸಾಕ್ಷ್ಯ ಚಿತ್ರ ಬಿಡುಗಡೆ: ಭಾರತದ ಮೊಟ್ಟ ಮೊದಲ ವಿದ್ಯುತ್‌ ಚಾಲಿತ ಅತಿ ವೇಗದ ಲೋಕೋಮೋಟಿವ್‌ ಎಂಬ ಹೆಗ್ಗಳಿಕೆ ಪಡೆದಿರುವ ಚಂಪರಣ್‌ ರೈಲಿನ ಎಂಜಿನ್‌ನ ಬಾಳ್ವಿಕೆ ಹಾಗೂ ಅದರಿಂದ ಜನಸಾಮಾನ್ಯರಿಗಾಗುವ ಪ್ರಯೋಜನಗಳ ಕುರಿತಂತೆ ತಯಾರಿಸಲಾಗುವ 15 ನಿಮಿಷಗಳ ಸಾಕ್ಷ್ಯಚಿತ್ರವೊಂದು ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ಮೂರು ಯೋಜನೆಗಳಿಗೆ ಚಾಲನೆ
ಭಾರತದ ಮೊಟ್ಟಮೊದಲ ಆಲ್‌ ಇಲೆಕ್ಟ್ರಿಕ್‌ ಹೈಸ್ಪೀಡ್‌ ರೈಲು ಎಂದೆನಿಸಿರುವ ‘ಚಂಪಾರಣ್‌ ಹಮ್ಸಫ‌ರ್‌ ಎಕ್ಸ್‌ಪ್ರೆಸ್‌’ ರೈಲಿಗೆ ಮೋದಿ ಹಸಿರು ನಿಶಾನೆ ತೋರಿದರು. ಬಿಹಾರದ ಚಂಪಾರಣ್‌ನಲ್ಲಿ ಮಹಾತ್ಮ ಗಾಂಧಿ, 1917ರಲ್ಲಿ ಅಂದಿನ ಬ್ರಿಟಿಷ್‌ ಆಡಳಿತದ ವಿರುದ್ಧ ಸತ್ಯಾಗ್ರಹ ನಡೆಸಿದ್ದರು. ಇದು, ಭಾರತದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ ನಡೆಸಿದ ಮೊಟ್ಟಮೊದಲ ಸತ್ಯಾಗ್ರಹ ಎಂಬ ಹೆಗ್ಗಳಿಕೆ ಪಡೆದಿದೆ. ಇದರ ಶತಮಾನೋತ್ಸವದ ನೆನಪಿಗಾಗಿ ಈ ಹೊಸ ರೈಲು ಸೌಲಭ್ಯ ಜಾರಿಗೆ ತರಲಾಗಿದೆ. ಮಂಗಳವಾರ, ಮಾದೇಪುದರಲ್ಲಿ ನಡೆದ ಮತ್ತೂಂದು ಕಾರ್ಯಕ್ರಮದಲ್ಲಿ ಮೋದಿ, ವಿದ್ಯುತ್‌ ಬೋಗಿಗಳ ನಿರ್ಮಾಣ ಕಾರ್ಖಾನೆಯ ಮೊದಲ ಹಂತವನ್ನು ಲೋಕಾರ್ಪಣೆಗೊಳಿಸಿದರು. ಇದಲ್ಲದೆ, ಮುಜಫ‌ರ್‌ಪುರ್‌-ಸಗೌಲಿ (100.6 ಕಿ.ಮೀ.) ಹಾಗೂ ಸಾಗೌಲಿ-ವಾಲ್ಮೀಕಿ ನಗರ ವಿಭಾಗ (10.9.7 ಕಿ.ಮೀ.) ನಡುವಿನ ಜೋಡಿ ಹಳಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದರು.  

Advertisement

ಸತ್ಯಾಗ್ರಹದಿಂದ ಸ್ವಚ್ಛಾಗ್ರಹದವರೆಗೆ
ಇದೇ ವೇಳೆ, ಸ್ವಚ್ಛ ಭಾರತ ಆಂದೋಲನದಡಿ ಬಿಹಾರ ಸರ್ಕಾರ ಕೈಗೊಂಡಿರುವ ಕ್ರಮಗಳು ಆ ರಾಜ್ಯದ ಇತಿಹಾಸವನ್ನು ಸತ್ಯಾಗ್ರಹದಿಂದ ಸ್ವಚ್ಛಾಗ್ರಹದ ಕಡೆಗೆ ತಂದು ನಿಲ್ಲಿಸಿದೆ ಎಂದು ಬಣ್ಣಿಸಿದ ಮೋದಿ, ಕಳೆದೊಂದು ವಾರದಲ್ಲಿ ರಾಜ್ಯದಲ್ಲಿ 8.5 ಲಕ್ಷ ಶೌಚಾಲಯಗಳನ್ನು ಕಟ್ಟಲಾಗಿದೆ. ಇದು ಸಾಮಾನ್ಯದ ಸಂಗತಿಯಲ್ಲ ಎಂದರು. ಈ ಸಮಾರಂಭದಲ್ಲಿ 20,000 ಸ್ವಚ್ಛಭಾರತ ಸ್ವಯಂಸೇವಕರು ಹಾಜರಿದ್ದಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next