Advertisement

ಪ್ರಧಾನಿ ಮೋದಿ ರೋಡ್‌ ಶೋ: ಸನಿಹದಲ್ಲೇ ವೀಕ್ಷಿಸಿ ಜೈಕಾರ ಹಾಕಿದ ಜನತೆ

11:18 AM Sep 03, 2022 | Team Udayavani |

ಮಂಗಳೂರು: ಪ್ರಧಾನಿ ಮೋದಿ ಯವರನ್ನು ಸನಿಹದಿಂದ ವೀಕ್ಷಿಸಬೇಕೆಂಬ ಹಲವು ಮಂದಿಯ ಆಸೆ ಶುಕ್ರವಾರ ಈಡೇರಿತು. ಸಮಾವೇಶದಿಂದ ವಾಪಸ್‌ ತೆರಳುವಾಗ ಸಭಾಂಗಣದ ಮುಖ್ಯದ್ವಾರದಿಂದ ಕೂಳೂರು ಮೇಲ್ಸೇತುವೆಯ ವರೆಗಿನ ಹೆದ್ದಾರಿಯ ವರೆಗೆ ಸುಮಾರು 150 ಮೀಟರ್‌ವರೆಗೂ ಪ್ರಧಾನಿಯವರ ಕಾರು ತೀರಾ ನಿಧಾನವಾಗಿ ಸಂಚರಿ ಸಿತು. ಪ್ರಧಾನಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದವರ ಕಡೆಗೆ ಕಾರಿನೊಳಗಿಂದಲೇ ಕೈ ಬೀಸುತ್ತ ತೆರಳಿದರು. ಆಗ “ಮೋದಿ… ಮೋದಿ’ ಎಂಬ ಘೋಷಣೆ ಮೊಳಗಿತು. ಬಿಸಿಲಿನ ಧಗೆ ಇದ್ದರೂ ಕಾರ್ಯಕರ್ತರ ಉತ್ಸಾಹ ಕುಗ್ಗಿರಲಿಲ್ಲ. 2019ರಲ್ಲಿ ಪ್ರಧಾನಿ ಮಂಗಳೂರಿಗೆ ಭೇಟಿ ನೀಡಿದ್ದಾಗಲೂ ರೋಡ್‌ ಶೋ ಮಾಡಿದ್ದರು. ಅನಂತರ ಕೆಲವು ದಿನಗಳ ಬಳಿಕ ಸಂದರ್ಶನವೊಂದರಲ್ಲಿ ಇಲ್ಲಿನ ಜನತೆಯ ಪ್ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Advertisement

ನಿಯಂತ್ರಣಕ್ಕೆ ಹರಸಾಹಸ
ಉತ್ಸಾಹಿ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು, ಅರೆ ಸೇನಾ ಪಡೆಯವರು ಹರಸಾಹಸ ಪಟ್ಟರು.
ಬಹುತೇಕ ಕಾರ್ಯಕರ್ತರು ಸಭಾಂಗಣದೊಳಗೆ ತೆರಳಿದ್ದರೂ ಇನ್ನೂ ಸಾವಿರಾರು ಮಂದಿ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ ಜಮಾಯಿಸಿ ಮೋದಿಯವರನ್ನು ಸನಿಹದಿಂದ ನೋಡಲು ಕಾತರಿಸುತ್ತಿದ್ದರು. ರಸ್ತೆಯ ಎರಡು ಬದಿಗಳಲ್ಲಿ ಬಲವಾದ ತಡೆಬೇಲಿಗಳನ್ನು ಅಳವಡಿಸಲಾಗಿತ್ತು. ಆದರೂ ಕಾರ್ಯಕರ್ತರು ಪದೇ ಪದೆ ಬ್ಯಾರಿಕೇಡ್‌ ದಾಟಿ ಮುನ್ನು ಗ್ಗಲು ಯತ್ನಿಸುತ್ತಿದ್ದರು. ಪ್ರಧಾನಿ ಸಭಾಂಗಣ ದೊಳಗೆ ಆಗಮಿಸಿದ ಕೂಡಲೇ ಸಭಾಂಗಣದ ಎಡಭಾಗದ ದ್ವಾರದ ಕಡೆಯಲ್ಲಿದ್ದ ಬ್ಯಾರಿಕೇಡನ್ನು ದೂಡಿ ಕೆಲವು ಮಂದಿ ರಸ್ತೆಗೆ ಧಾವಿಸಿದರು. ಪೊಲೀಸರು ಕಾರ್ಯಕರ್ತರನ್ನು ತಡೆದು ವಾಪಸ್‌ ಕಳುಹಿಸಿದರು. ಪ್ರಧಾನಿ ಭೇಟಿಯ ಮೊದಲು ಒಂದೆರಡು ಬಾರಿ ಪೊಲೀಸರು ಲಘು ಲಾಠಿಚಾರ್ಜ್‌ ಮಾಡಿದರು.

6 ತಾಸು ಹೆದ್ದಾರಿ ಸ್ತಬ್ಧ
ಎಸ್‌ಪಿಜಿ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿಯ ಬೈಕಂಪಾಡಿ ಯಿಂದ ಕೆಪಿಟಿಯ ವರೆಗೆ 10 ಕಿಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ಯಾವುದೇ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಕೂಳೂರು ಪರಿಸರದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಪೊಲೀಸರ ಸೂಚನೆಯಂತೆ ಮುಚ್ಚಲಾಗಿತ್ತು.

ರಸ್ತೆ ಮೂಲಕ ನಿರ್ಗಮನ
ಹವಾಮಾನ ವೈಪರೀತ್ಯದಿಂದಾಗಿ ಮೋದಿಯವರು ಹೆಲಿಕಾಪ್ಟರ್‌ ಬದಲಾಗಿ ರಸ್ತೆ ಮಾರ್ಗದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದರು. ಬದಲಿ ಮಾರ್ಗವನ್ನು ಹಿಂದೆಯೇ ನಿಗದಿಗೊಳಿಸಲಾಗಿತ್ತು. ಸುಮಾರು 4 ಗಂಟೆಯ ವೇಳೆಗೆ ಮೋಡ ಆವರಿಸತೊಡಗಿದ್ದು, ಸಂಜೆಯ ವೇಳೆಗೆ ಪ್ರತಿಕೂಲ ಹವಾಮಾನ ಉಂಟಾಯಿತು. ಇದರಿಂದಾಗಿ ಪ್ರಧಾನಿ ಹೆಲಿಕಾಪ್ಟರ್‌ ಬದಲಿಗೆ ಕಾರಿನ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದರು.

ನಾಪತ್ತೆಯಾಗಿದ್ದ ಬಾಲಕಿಯನ್ನು ಮನೆಗೆ ತಲುಪಿಸಿದ ಪೊಲೀಸರು
ಸಮಾವೇಶಕ್ಕೆ ಬಂದು ಜನಜಂಗುಳಿಯ ನಡುವೆ ಹೆತ್ತವರ ಕೈತಪ್ಪಿ ನಾಪತ್ತೆಯಾಗಿದ್ದ ಕಾವೂರು ಜ್ಯೋತಿನಗರದ ನಾಲ್ಕನೇ ತರಗತಿಯ ಬಾಲಕಿಯೋರ್ವಳನ್ನು ಪೊಲೀಸರು ಆಕೆಯ ಮನೆಗೆ ತಲುಪಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು ಕರಾವಳಿ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ಶಕ್ತಿಯನ್ನು ತುಂಬಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿಸಿದ್ದಾರೆ.
– ನಳಿನ್‌ ಕುಮಾರ್‌ ಕಟೀಲು, ಸಂಸದರು, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next