Advertisement

ಪ್ರಧಾನಿ ನರೇಂದ್ರ ಮೋದಿ ಶೋ ಮ್ಯಾನ್‌

06:00 AM Mar 26, 2018 | |

ಮೈಸೂರು/ಮಂಡ್ಯ: ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಪರ ಚುನಾವಣಾ ಪ್ರಚಾರ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಭಾನುವಾರ ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಭರ್ಜರಿ ರೋಡ್‌ ಶೋ ನಡೆಸಿದರು. ಬಳಿಕ, ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡು ಜೆಡಿಎಸ್‌, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

Advertisement

ಮೈಸೂರಿನಲ್ಲಿ ಅರಮನೆ ಸಮೀಪದ ಗನ್‌ಹೌಸ್‌ ವೃತ್ತದ ಸಮೀಪವಿರುವ ಬಸವೇಶ್ವರ ಪ್ರತಿಮೆ ಮುಂಭಾಗದಿಂದ ಮಧ್ಯಾಹ್ನ 4.40ಕ್ಕೆ ಆರಂಭವಾದ ರೋಡ್‌ ಶೋಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಯಿತು. ಸಂಸ್ಕೃತ ಪಾಠಶಾಲೆ ವೃತ್ತದಲ್ಲಿ ಜಮಾಯಿಸಿದ್ದ ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನಿಗೆಂದು ಬೀಡಿಗಳನ್ನು ಬಳಸಿ ತಯಾರಿಸಿದ್ದ ಭಾರೀ ಗಾತ್ರದ ವಿಶೇಷ ಹಾರವೊಂದನ್ನು ಹೊತ್ತು ತಂದಿದ್ದರು. ಬೀಡಿ ಹಾರವನ್ನು ಮುಟ್ಟಿ, ಕೃತಜ್ಞತೆ ಸಲ್ಲಿಸಿ ರಾಹುಲ್‌ ಮುಂದೆ ಸಾಗಿದರು. ಅಂದಾಜು 3 ಕಿ.ಮೀ ನಡೆದ ರೋಡ್‌ ಶೋಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಸಚಿವರು, ನಾಯಕರು ಸಾಥ್‌ ನೀಡಿದರು.

ಮೋದಿ ವಿರುದ್ಧ ವಾಗ್ಧಾಳಿ:
ಬಳಿಕ, ಶ್ರೀರಂಗಪಟ್ಟಣ, ಕೆ.ಆರ್‌.ಪೇಟೆಯಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿ, ನರೇಂದ್ರ ಮೋದಿ ಒಬ್ಬ ಶೋ ಮ್ಯಾನ್‌. ಪ್ರಧಾನಿಯಾಗಿ ರಾಷ್ಟ್ರದ ಮುನ್ನಡೆಗೆ ನೀಡಿದ ಕೊಡುಗೆ ಶೂನ್ಯ. ಬಂಡವಾಳಶಾಹಿಗಳ ಹಣ ಲೂಟಿಗೆ ಅವಕಾಶ ಮಾಡಿಕೊಟ್ಟಿದ್ದೇ ಬಿಜೆಪಿ ಸರ್ಕಾರದ ಸಾಧನೆ ಎಂದು ಟೀಕಿಸಿದರು. ಇದೇ ವೇಳೆ, ಶ್ರೀರಂಗಪಟ್ಟಣದಲ್ಲಿ ರಾಹುಲ್‌ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಅವರ ಸ್ವಾಗತಕ್ಕೆ ಅಳವಡಿಸಲಾಗುತ್ತಿದ್ದ ನೈಟ್ರೋಜನ್‌ ಬಲೂನ್‌ ಸ್ಫೋಟಗೊಂಡು ಗಾಯಗೊಂಡಿದ್ದ 12 ಮಂದಿಗೆ ತಲಾ 25 ಸಾವಿರ ರೂ. ಪರಿಹಾರವನ್ನು ಕೆಪಿಸಿಸಿ ವತಿಯಿಂದ ಘೋಷಿಸಲಾಯಿತು.

ಪಾಂಡವಪುರದಲ್ಲಿ ರೋಡ್‌ ಶೋ ವೇಳೆ ರಸ್ತೆ ಬದಿ ನಿಂತಿದ್ದ ರೈತರತ್ತ ಧಾವಿಸಿದರು. ಅಗಲಿದ ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯನವರ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಬಳಿ ಬಂದು, ಕುಶಲೋಪರಿ ವಿಚಾರಿಸಿದರು. ದರ್ಶನ್‌ ಅವರು ರಾಹುಲ್‌ಗೆ ಹಸಿರು ಶಾಲು ತೊಡಿಸಿ ಅಭಿನಂದಿಸಿದರು. ರೈತರ ಸಮಸ್ಯೆ ಪರಿಹಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, ಈ ಬಾರಿ ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸಿ ಪುಟ್ಟಣ್ಣಯ್ಯನವರ ಆತ್ಮಕ್ಕೆ ಶಾಂತಿ ದೊರಕಿಸುವಂತೆ ಜನರಲ್ಲಿ ಮನವಿ ಮಾಡಿದರು.

ಹಿರಿಯ ಮುಖಂಡರಾದ ಮಾಜಿ ಸಚಿವ ಎಂ.ಸಿ.ನಾಣಯ್ಯ ಸೇರಿ ಜೆಡಿಎಸ್‌ನ ಬಂಡಾಯ ಶಾಸಕರು, ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಬಲ ತುಂಬಿದೆ. ಕೆಪಿಸಿಸಿ ರಾಜ್ಯ ಚುನಾವಣಾ ಸಮಿತಿ ಸಭೆ ಮಾರ್ಚ್‌ 26 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಹೈಕಮಾಂಡ್‌ಗೆ ಶಿಫಾರಸು ಮಾಡಲಾಗುವುದು. ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿ, ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ.

Advertisement

ಕಾಂಗ್ರೆಸ್‌ ಸೇರ್ಪಡೆ
ಮೈಸೂರು/ಶ್ರೀರಂಗಪಟ್ಟಣ:
ಶನಿವಾರವಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜೆಡಿಎಸ್‌ ಬಂಡಾಯ ಶಾಸಕರಾದ ಎನ್‌.ಚೆಲುವರಾಯ ಸ್ವಾಮಿ, ಜಮೀರ್‌ ಅಹ್ಮದ್‌ ಖಾನ್‌, ಭೀಮಾನಾಯ್ಕ, ಅಖಂಡ ಶ್ರೀನಿವಾಸ್‌, ಎಚ್‌.ಸಿ.ಬಾಲಕೃಷ್ಣ, ರಮೇಶ್‌ ಬಂಡಿಸಿದ್ದೇಗೌಡ, ಇಕ್ಬಾಲ್‌ ಅನ್ಸಾರಿ, ಜೆಡಿಎಸ್‌ ಹಿರಿಯ ಮುಖಂಡರಾದ ಮಾಜಿ ಸಚಿವ ಎಂ.ಸಿ.ನಾಣಯ್ಯ, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಎಂ.ಶ್ರೀನಿವಾಸ್‌, ರಾಮಕೃಷ್ಣ, ಬಿಬಿಎಂಪಿ ಮಾಜಿ ಮೇಯರ್‌ ವೆಂಕಟೇಶಮೂರ್ತಿ ಮೈಸೂರಿನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇವರಿಗೆ ಶಲ್ಯಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.

ಟ್ವೀಟ್‌ ಮೂಲಕ ಸ್ವಾಗತ 
ಬೆಂಗಳೂರು:
ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾದ ಜೆಡಿಎಸ್‌ನ ಹಿರಿಯ ಮುಖಂಡ ಎಂ.ಸಿ.ನಾಣಯ್ಯ ಸೇರಿ 10 ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಟ್ವೀಟ್‌ ಮೂಲಕ ಸ್ವಾಗತ ಕೋರಿದ್ದಾರೆ. 

ಈ ಬಗ್ಗೆ ಟ್ವೀಟ್‌ ಮಾಡಿರುವ ಪರಮೇಶ್ವರ್‌, ಜೆಡಿಎಸ್‌ನ 10 ಮುಖಂಡರು ಎಐಸಿಸಿ ಅಧ್ಯಕ್ಷರಾದ ರಾಹುಲ್‌ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ್ದಾರೆ. ಹಿರಿಯ ಮುಖಂಡರಾದ ಎಂ.ಸಿ.ನಾಣಯ್ಯ, ಬಿ.ಜಡ್‌.ಜಮೀರ್‌ ಅಹಮ್ಮದ್‌ ಖಾನ್‌, ಎನ್‌.ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಎಚ್‌.ಸಿ.ಬಾಲಕೃಷ್ಣ, ಭೀಮಾ ನಾಯ್ಕ, ರಮೇಶ್‌ ಬಂಡಿಸಿದ್ದೇಗೌಡ, ಇಕ್ಬಾಲ್‌ ಅನ್ಸಾರಿ, ಸರೋವರ ಶ್ರೀನಿವಾಸ್‌ ಹಾಗೂ ರಾಮಕೃಷ್ಣ ಅವರಿಗೆ ಕಾಂಗ್ರೆಸ್‌ಗೆ ಸ್ವಾಗತ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next