Advertisement

ಇಪ್ಪಂತೆಂಟು ತಿಂಗಳ ಬಳಿಕ ವೇದಿಕೆ ಹಂಚಿಕೊಳ್ಳಲಿರುವ ಮೋದಿ –ಉದ್ಭವ್‌

09:05 AM Apr 10, 2019 | Team Udayavani |

ಲಾತೂರ್‌ : ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌.ಡಿ.ಎ. ಮೈತ್ರಿಕೂಟದ ದೀರ್ಘ‌ಕಾಲೀನ ಒಡನಾಡಿಯಾಗಿದ್ದ ಶಿವಸೇನಾ ಪಕ್ಷವು ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರಕಾರದ ಹಲವಾರು ನೀತಿಗಳನ್ನು ನೇರವಾಗಿ ವಿರೋಧಿಸುತ್ತಾ ಬಂದಿತ್ತು. ಮಾತ್ರವಲ್ಲದೇ ಸಮಯ ಸಿಕ್ಕಾಗಲೆಲ್ಲಾ ಶಿವಸೇನೆಯ ಮುಖ್ಯಸ್ಥ ಉದ್ಭವ್‌ ಠಾಕ್ರೆ ಅವರು ಪ್ರಧಾನಿ ಮೋದಿ, ಪಕ್ಷಾಧ್ಯಕ್ಷ ಅಮಿತ್‌ ಶಾ, ಕೇಂದ್ರ ಮತ್ತು ಮಹಾರಾಷ್ಟ್ರದ ಬಿಜೆಪಿ ನಾಯಕರ ವಿರುದ್ಧ ಬಹಿರಂಗ ಟೀಕೆಗಳನ್ನು ಮಾಡುತ್ತಲೇ ಬರುತ್ತಿದ್ದರು ಮತ್ತು ತಮ್ಮ ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲೂ ಸಹ ತಮ್ಮ ಮಿತ್ರಪಕ್ಷದ ನಾಯಕರ ವಿರುದ್ಧ ಶಿವಸೇನೆ ಮತ್ತು ಅದರ ಮುಖಂಡರ ಟೀಕೆ ಸಾಗುತ್ತಿತ್ತು. ಈ ಮೂಲಕ ಮಿತ್ರಪಕ್ಷದೊಳಗಿನ ವಿರೋಧ ಪಕ್ಷವಾಗಿ ಶಿವಸೇನೆ ಕಳೆದ ನಾಲ್ಕು ವರ್ಷಗಳಲ್ಲಿ ಬದಲಾಗಿತ್ತು.

Advertisement

ಕಳೆದ ಬಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೂ ಚುನಾವಣೋತ್ತರ ಮೈತ್ತಿ ಮಾಡಿಕೊಳ್ಳುವ ಮೂಲಕ ಬಿಜೆಪಿ-ಶಿವಸೇನೆ ಮತ್ತೂಮ್ಮೆ ಒಂದಾಗಿತ್ತು. ಆದರೂ ಕೇಸರಿ ಪಕ್ಷದ ಮೇಲಿನ ಶಿವಸೇನೆಯ ಸಿಟ್ಟು ಯಾಕೋ ಕಡಿಮೆಯಾಗಿರಲೇ ಇಲ್ಲ. ಒಂದು ಹಂತದಲ್ಲಂತೂ ಇನ್ನೇನು ಈ ಎರಡು ಪಕ್ಷಗಳ ಮೈತ್ರಿ ಮುರಿದು ಹೋಗುತ್ತದೆ ಎನ್ನುವ ಹಂತದವರೆಗೂ ಸಂಬಂಧ ಬಿಗಡಾಯಿಸಿತ್ತು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ ಅವರ ತಂತ್ರಗಾರಿಕೆಯ ಫಲವಾಗಿ ಬಿಜೆಪಿ – ಶಿವಸೇನೆ 25:23 ಪ್ರಮಾಣದಲ್ಲಿ ಸೀಟು ಹೊಂದಾಣಿಕೆ ಮಾಡಿಕೊಂಡು ಹೋರಾಟಕ್ಕೆ ಇಳಿದಿವೆ. ಇದಕ್ಕೂ ಮುನ್ನ 2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, 2017ರ ಬೃಹನ್‌ ಮುಂಬಯಿ ಮುನ್ಸಿಪಲ್‌ ಕಾರ್ಪೊರೇಷನ್‌ ಚುನಾವಣೆಯಲ್ಲಿ ಮತ್ತು 2018ರ ಪಾಳ್ಘರ್‌ ಲೋಕಸಭಾ ಉಪಚುನಾವಣೆಯಲ್ಲಿ ಈ ಎರಡು ಪಕ್ಷಗಳು ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದವು.

ಪರಿಸ್ಥಿತಿ ಹೀಗಿರುತ್ತಾ ಈ ಎರಡು ಪ್ರಮುಖ ಪಕ್ಷಗಳ ಮುಖಂಡರು ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವಸೇನಾ ಮುಖ್ಯಸ್ಥ ಉದ್ಭವ ಠಾಕ್ರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರದಂದು ಮಹಾರಾಷ್ಟ್ರದ ಲಾಥೂರ್‌ ನಲ್ಲಿ ಮಿತ್ರಪಕ್ಷಗಳ ಜಂಟಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸುಮಾರು 2 ವರ್ಷಗಳ ಬಳಿಕ ಮೋದಿ ಮತ್ತು ಠಾಕ್ರೆ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. 2016ನೇ ಇಸವಿ ಡಿಸೆಂಬರ್‌ 24ರಂದು ಮುಂಬಯಿಯ ಚೌಪಟ್ಟಿಯಲ್ಲಿ ಸಮುದ್ರ ಮಧ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಮಹಾರಾಜ ಶಿವಾಜಿ ಪ್ರತಿಮೆ ಸ್ಥಾಪನೆಗೆ ‘ಜಲಪೂಜೆ’ ನೆರವೇರಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಉದ್ಭವ ಠಾಕ್ರೆ ಅವರು ಜೊತೆಯಾಗಿ ವೇದಿಕೆ ಹಂಚಿಕೊಂಡಿದ್ದರು. ಆ ಬಳಿಕ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ನಲ್ಲಿ ಈ ಇಬ್ಬರು ನಾಯಕರು ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಗರು ಕಾರ್ಯಕ್ರಮದುದ್ದಕ್ಕೂ ಮೋದಿ ಪರ ಘೋಷಣೆ ಕೂಗುವ ಮೂಲಕ ಉದ್ಭವ ಠಾಕ್ರೆ ಅವರಿಗೆ ಮುಜುಗರ ಉಂಟುಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next