Advertisement

ಕ್ಷಣಕ್ಷಣ ಮಾಹಿತಿ ಮಾರ್ಗದರ್ಶನ : ಕೋವಿಡ್ ನಿಯಂತ್ರಣಕ್ಕೆ ಪ್ರಧಾನಿ ಸಲಹೆ

10:03 AM Jul 12, 2020 | sudhir |

ಹೊಸದಿಲ್ಲಿ: ದೇಶಾದ್ಯಂತ ಕೋವಿಡ್ ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಿರುವ ಎಲ್ಲ ರಾಜ್ಯಗಳಿಗೂ ರಾಷ್ಟ್ರೀಯ ಮಟ್ಟದಲ್ಲಿ ಕ್ಷಣ ಕ್ಷಣದ ಮಾಹಿತಿ ಮತ್ತು ಮಾರ್ಗ ದರ್ಶನ ಒದಗಿಸುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ. ಸೋಂಕು ನಿಯಂತ್ರಣಕ್ಕೆ ದಿಲ್ಲಿಯಲ್ಲಿ ತೆಗೆದುಕೊಳ್ಳ ಲಾಗಿರುವ ಕ್ರಮಗಳ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದ್ದು, ಇತರೆಡೆ ವಿಸ್ತರಿಸುವಂತೆ ಹೇಳಿದ್ದಾರೆ.

Advertisement

ಶನಿವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಆರೋಗ್ಯ ಸಚಿವ ಡಾ| ಹರ್ಷವರ್ಧನ್‌, ನೀತಿ ಆಯೋಗದ ಸದಸ್ಯರು, ಸಂಪುಟ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಈ ನಿರ್ದೇಶನ ನೀಡಿದ್ದಾರೆ. ದೇಶದ ಕೊರೊನಾ ಸ್ಥಿತಿಗತಿ ಮತ್ತು ಸೋಂಕಿನ ವಿರುದ್ಧ ಸಮರ್ಪಕ ಹೋರಾಟಕ್ಕೆ ರಾಜ್ಯಗಳು ಕೈಗೊಂಡ ಕ್ರಮಗಳನ್ನು ಅವರು ಈ ವೇಳೆ ಪರಿಶೀಲಿಸಿದ್ದಾರೆ.

ಅತ್ಯಧಿಕ ಸೋಂಕುಪೀಡಿತರಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಂಕು ಸಂಬಂಧಿ ಕ್ಷಣಕ್ಷಣದ ಮಾಹಿತಿ ಲಭ್ಯವಾಗುವಂತೆ ಮಾಡುವುದು ಮತ್ತು ಸೂಕ್ತ ಸಲಹೆ ನೀಡುವುದು ಅತ್ಯಗತ್ಯ. ರಾಷ್ಟ್ರೀಯ ಮಟ್ಟದಲ್ಲೇ ಈ ಕೆಲಸ ಆಗಬೇಕೆಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ದಿಲ್ಲಿ ಕ್ರಮಕ್ಕೆ ಮೆಚ್ಚುಗೆ
ದಿಲ್ಲಿಯಲ್ಲಿ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದ ಹಲವು ಜಿಲ್ಲೆಗಳನ್ನು ಒಳಗೊಂಡ ಎನ್‌ಸಿಆರ್‌(ರಾಷ್ಟ್ರ ರಾಜ ಧಾನಿ ಸುತ್ತಮುತ್ತಲಿನ ಪ್ರದೇಶ)ನಲ್ಲೂ ಇದೇ ರೀತಿಯ ಕ್ರಮಗಳನ್ನು ಜಾರಿ ಮಾಡುವಂತೆ ಸೂಚಿಸಿದ್ದಾರೆ.

ಜನಜಾಗೃತಿ ಹೆಚ್ಚಲಿ
ದೇಶವಾಸಿಗಳು ವೈಯಕ್ತಿಕ ನೈರ್ಮಲ್ಯ, ಸಾರ್ವಜನಿಕ ಸ್ಥಳಗಳಲ್ಲಿ ಶಾರೀರಿಕ ಅಂತರ ಸಹಿತ ಸುರಕ್ಷಾ ಕ್ರಮ ಗಳನ್ನು ಪಾಲಿಸಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಇನ್ನಷ್ಟು ಹೆಚ್ಚಬೇಕು ಎಂದು ಪ್ರಧಾನಿ ಪುನರುಚ್ಚರಿಸಿದ್ದಾರೆ.

Advertisement

ಧಾರಾವಿಗೆ ಡಬ್ಲ್ಯುಎಚ್‌ಒ ಮೆಚ್ಚುಗೆ
ಜಿನೇವಾ: ಕೋವಿಡ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡರೂ ನಿಯಂತ್ರಿಸಲು ಸಾಧ್ಯವಿದೆ ಎನ್ನುವುದಕ್ಕೆ ಮುಂಬಯಿಯ ಧಾರಾವಿಯೇ ಸಾಕ್ಷಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮೆಚ್ಚುಗೆ ವ್ಯಕ್ತಪಡಿಸಿದೆ.

ಧಾರಾವಿಯಲ್ಲಿ ಕೈ ಗೊಂಡ ಕ್ರಮಗಳು ವಿಶ್ವಕ್ಕೆ ಮಾದರಿ ಎಂದು ಸಂಸ್ಥೆಯ ಮಹಾಕಾರ್ಯದರ್ಶಿ ಹೇಳಿ ದ್ದಾರೆ. ಕೋವಿಡ್ ಎಷ್ಟು ವೇಗವಾಗಿ ಹರಡುತ್ತಿದ್ದರೂ ಕಟ್ಟುನಿಟ್ಟಿನ ಕ್ರಮ ಪಾಲಿಸುವ ಮೂಲಕ ನಿಯಂತ್ರಿಸಬಹುದು. ಭಾರತದ ಅತೀ ದೊಡ್ಡ ಕೊಳಚೆ ಪ್ರದೇಶ ಮುಂಬಯಿಯ ಧಾರಾವಿ ಇದಕ್ಕೆ ಉತ್ತಮ ಉದಾಹರಣೆ ಎಂದು ಅವರು ಹೇಳಿದ್ದಾರೆ.

ಪರೀಕ್ಷೆ ನಡೆಸುವುದು, ಸೋಂಕುಪೀಡಿರು, ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚು ವುದು, ಸೋಂಕುಪೀಡಿತರನ್ನು ಇತರರಿಂದ ಪ್ರತ್ಯೇ ಕಿಸುವುದು, ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಕೊರೊನಾ ಹರಡುವುದನ್ನು ತಡೆಗಟ್ಟ ಬಹುದು ಎಂದು ಅವರು ಹೇಳಿದ್ದಾರೆ.

ಧಾರಾವಿಯಲ್ಲಿ ಕೋವಿಡ್ ನಿಯಂತ್ರಿಸಿದ್ದು ಹೇಗೆ?
ಸೋಂಕು ಪೀಡಿತರನ್ನು ಪತ್ತೆಹಚ್ಚಲು ಬಿಎಂಸಿ (ಬೃಹನ್ಮುಂಬಯಿ ಮುನಿಸಿಪಲ್‌ ಕಾರ್ಪೊರೇಶನ್‌) ಪೂರ್ವಭಾವಿ ಕ್ರಮ ಕೈಗೊಂಡಿತು. ಬಿಎಂಸಿ ಅಧಿಕಾರಿಗಳೇ ಮನೆ ಮನೆಗೆ ತೆರಳಿ ಸ್ಕ್ರೀನಿಂಗ್‌ ನಡೆಸಿದರು. ಸೋಂಕುಪೀಡಿತರಿಗೆ ಸಕಾಲಕ್ಕೆ, ಸೂಕ್ತ ಚಿಕಿತ್ಸೆ ನೀಡಲಾಯಿತು. ಧಾರಾವಿಯಲ್ಲಿ ಕನಿಷ್ಠ 6-7 ಲಕ್ಷ ಜನರ ಸ್ಕ್ರೀನಿಂಗ್‌ ನಡೆಸಲಾಗಿದೆ. 14 ಸಾವಿರ ಜನರನ್ನು ಪರೀಕ್ಷಿಸಲಾಗಿದೆ. 13 ಸಾವಿರ ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ವೃದ್ಧರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಇಲ್ಲಿನ ಶೇ. 82 ಸೋಂಕುಪೀಡಿತರು ಈಗ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ಕೇವಲ 166 ಸಕ್ರಿಯ ಪ್ರಕರಣಗಳಿವೆ ಎಂದು ಬಿಎಂಸಿ ಜಿ. ನಾರ್ತ್‌ ವಾರ್ಡ್‌ನ ಸಹಾಯಕ ಆಯುಕ್ತ ಕಿರಣ್‌ ದಿಘಾವ್ಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next