Advertisement

ಪ್ರಧಾನಿ ಭದ್ರತೆಯಲ್ಲಿ ಲೋಪ ಸರ್ವಥಾ ಒಪ್ಪುವಂಥದ್ದಲ್ಲ

12:20 AM Jan 07, 2022 | Team Udayavani |

ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ, ರಾಷ್ಟ್ರೀಯ ಸ್ಮಾರಕ ಮತ್ತು ರಾಜಕೀಯ ರ್ಯಾಲಿಯೊಂದರ ನಿಮಿತ್ತ ಪಂಜಾಬ್‌ನ ಫಿರೋಜ್‌ಪುರಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆ ವಿಚಾರದಲ್ಲಿ ಲೋಪ ಎಸಗಿರುವುದು ಹಿಂದೆಂದೂ ಕಂಡರಿಯದ ಸಂಗತಿ. ದೇಶದಲ್ಲಿ ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿಯವರ ಹತ್ಯೆ ಅನಂತರ ಪ್ರಧಾನಿ ಹುದ್ದೆಯಲ್ಲಿರುವವರಿಗೆ ಗರಿಷ್ಠ ಭದ್ರತೆ ಒದಗಿಸಲಾಗುತ್ತಿದೆ. ಅದರಲ್ಲೂ ಈ ವಿಷಯದಲ್ಲಿ ಕಿಂಚಿತ್ತೂ ಲೋಪವಾಗದಂತೆ ನೋಡಿಕೊಳ್ಳಲಾಗುತ್ತಿದೆ.

Advertisement

ಆದರೆ ಬುಧವಾರ ಪಂಜಾಬ್‌ನಲ್ಲಿ ರಾಜಕೀಯ ಕಾರಣ ಅಥವಾ ಇನ್ನಾವುದೋ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ತೆರಳುತ್ತಿದ್ದ ಮಾರ್ಗವನ್ನು ಪ್ರತಿಭಟನೆಯ ಕಾರಣದಿಂದ ಮುಚ್ಚಿದ್ದು, ಅಲ್ಲದೇ ಅವರು ಫ್ಲೈಓವರ್‌ವೊಂದರ ಮೇಲೆ ಸುಮಾರು 20 ನಿಮಿಷಗಳ ವರೆಗೆ ಕಾಯುವಂತೆ ಮಾಡಿದ್ದು, ದುರ್ದೈವವೇ ಸರಿ.

ದೇಶದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿಯಂಥ ಮೇಲ್ಮಟ್ಟದ ಸಾಂವಿಧಾನಿಕ ಹುದ್ದೆಗಳಿಗೆ ಅತ್ಯುನ್ನತ ಮೌಲ್ಯವಿದೆ. ಹಾಗೆಯೇ ಈ ಹುದ್ದೆ ಅಲಂಕರಿಸಿರುವಂಥವರಿಗೆ ಗರಿಷ್ಠ ಮನ್ನಣೆಯೂ ಇದೆ. ಇದರ ಜತೆಗೆ ಈ ಹುದ್ದೆಯಲ್ಲಿರುವಂಥವರ ಜೀವಗಳಿಗೆ ಅತ್ಯಮೂಲ್ಯ ಬೆಲೆಯೂ ಇದೆ. ಹೀಗಾಗಿಯೇ ಇವರ ಭದ್ರತೆಗಾಗಿ ಕೇಂದ್ರದ ಮಟ್ಟದಲ್ಲಿ ಎಸ್‌ಪಿಜಿ ಮತ್ತು ರಾಜ್ಯದ ಮಟ್ಟದಲ್ಲಿ ತನ್ನದೇ ಆದ ಭದ್ರತೆಯ ವ್ಯವಸ್ಥೆ ಇರುತ್ತದೆ.

ದೇಶದಲ್ಲಿ ಎಸ್‌ಪಿಜಿ ವ್ಯವಸ್ಥೆ ಬಂದ ಮೇಲೆ ಇದುವರೆಗೆ ಒಮ್ಮೆ ಮಾತ್ರ ಭದ್ರತಾ ಲೋಪವಾಗಿದೆ. ಅದು 2006ರಲ್ಲಿ ಡಾ| ಮನಮೋಹನ್‌ ಸಿಂಗ್‌ ಅವರು ಕೇರಳದ ತಿರುವನಂತಪುರ ಪ್ರವಾಸದಲ್ಲಿದ್ದಾಗ ರಾಜಭವನಕ್ಕೆ ಹೋಗಬೇಕಾಗಿದ್ದ ಕಾರು ಬೇರೆಡೆ ಹೋಗಿ ಒಂದಷ್ಟು ವಿವಾದವಾಗಿತ್ತು. ಇದನ್ನು ಬಿಟ್ಟರೆ ಇದುವರೆಗೆ ಇಂಥ ಭದ್ರತಾ ಲೋಪ ಸಂಭವಿಸಿರಲೇ ಇಲ್ಲ.
ಆದರೆ ಪಂಜಾಬ್‌ನಲ್ಲಿ ಬುಧವಾರ ನಡೆದಿರುವ ಘಟನೆ, ಆ ರಾಜ್ಯದ ಪೊಲೀಸ್‌ ವ್ಯವಸ್ಥೆಯ ಸಂಪೂರ್ಣ ವೈಫ‌ಲ್ಯಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಅಲ್ಲಿನ ಸರಕಾರ ನಡೆದುಕೊಂಡ ರೀತಿ ಬಗ್ಗೆಯೂ ಕಟು ಟೀಕೆ ವ್ಯಕ್ತವಾಗಿದೆ. ಕೇವಲ ರಾಜಕೀಯ ಸಮಾವೇಶಕ್ಕೆ ಪ್ರಧಾನಿಗಳು ಬಂದಿದ್ದರೆ ಮುಖ್ಯಮಂತ್ರಿಗಳು ಈ ಭೇಟಿಯನ್ನು ನಿರ್ಲಕ್ಷಿಸಬಹುದಿತ್ತು. ಆದರೆ ಅಭಿವೃದ್ಧಿ ಯೋಜನೆಗಳೂ ಇದ್ದುದರಿಂದ ನಿರ್ಲಕ್ಷಿಸುವಂತೆ ಇರಲೇ ಇಲ್ಲ. ಪ್ರಧಾನಿ ಸ್ವಾಗತಕ್ಕಾಗಿ ವಿಮಾನ ನಿಲ್ದಾಣಕ್ಕೂ ತೆರಳದ ಸಿಎಂ, ಇದಕ್ಕೆ ಬೇರೊಂದು ನೆಪ ಹೇಳಿದ್ದಾರೆ. ಇದಾದ ಬಳಿಕ ಕಾಕತಾಳೀಯವೆಂಬಂತೆ ರೈತರು ರಸ್ತೆ ತಡೆ ನಡೆಸಿ ಪ್ರಧಾನಿ ತೆರಳುತ್ತಿದ್ದ ಮಾರ್ಗ ಬಂದ್‌ ಮಾಡಿದ್ದಾರೆ. ಇದೆಲ್ಲವೂ ರಾಜಕೀಯದ ವಿಚಾರಕ್ಕಾಗಿಯೇ ನಡೆಸಿರಬಹುದು ಎಂಬುದು ಬಿಜೆಪಿ ನಾಯಕರ ಆರೋಪವೂ ಆಗಿದೆ.

ಹೀಗಾಗಿ ಪ್ರಧಾನಿ ಭೇಟಿ ವಿಚಾರದಲ್ಲಿ ಅದು ಪಂಜಾಬ್‌ ಸರಕಾರವೇ ಆಗಲಿ ಅಥವಾ ಇನ್ನಾವುದೇ ಸರಕಾರವಾಗಲಿ ಯಾವುದೇ ಕಾರಣಕ್ಕೂ ಇಂಥ ನಿರ್ಲಕ್ಷ್ಯ ವಹಿಸಲೇಬಾರದು. ಫಿರೋಜ್‌ಪುರ ಪಾಕಿಸ್ಥಾನ ಗಡಿಯಿಂದ ತೀರಾ ಸನಿಹದಲ್ಲೇ ಇದ್ದು, ಒಂದು ವೇಳೆ ಪ್ರಧಾನಿಗಳ ಜೀವಕ್ಕೆ ಸಮಸ್ಯೆಯಾಗಿದ್ದರೆ ಅದು ದೊಡ್ಡ ದುರಂತವೇ ಆಗುತ್ತಿತ್ತು. ಅಷ್ಟೇ ಅಲ್ಲ, ನಿನ್ನೆಯ ಘಟನೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತ ನಗೆಪಾಟಲಿಗೀಡಾಗಿದೆ ಎಂಬುದು ಸುಳ್ಳಲ್ಲ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next