ಹೊಸದಿಲ್ಲಿ: ಕೊರೊನಾ ಚಿಕಿತ್ಸೆಗೆ ಅತ್ಯವಶ್ಯವಾಗಿರುವ ಔಷಧ ಲಸಿಕೆ ಹಾಗೂ ವೈದ್ಯಕೀಯ ಸಾಮಗ್ರಿಗಳ ಹಕ್ಕುಸ್ವಾಮ್ಯ ನಿಯಮಗಳನ್ನು ಸಡಿಲಗೊಳಿಸಿ, ಅವು ಎಲ್ಲ ದೇಶಗಳಲ್ಲೂ ಉತ್ಪಾದನೆಯಾಗುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಜಿ-7 ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ .
ರವಿವಾರ ನಡೆದ ಜಿ-7 ಶೃಂಗಸಭೆಯ ಚರ್ಚೆಗಳಲ್ಲಿ ಭಾಗವಹಿಸಿದ ಅವರು, ಆರೋಗ್ಯ, ಹವಾಮಾನ ಬದಲಾವಣೆ ಹಾಗೂ ಮುಕ್ತ ಸಮಾಜ ಎಂಬ ವಿಷಯಾಧಾರಿತ ಮೂರು ವೇದಿಕೆಗಳಲ್ಲಿ ಮಾತನಾಡಿದರು.
ಆರೋಗ್ಯ ವಿಚಾರಗಳ ಕುರಿತ ವೇದಿಕೆಯಲ್ಲಿ ಮಾತನಾಡಿದ ಅವರು, “ಕೊರೊನಾ ನಿಗ್ರಹಕ್ಕೆ ಬೇಕಾದ ಅವಶ್ಯ ವಸ್ತುಗಳ ಉತ್ಪಾದನೆ ಎಲ್ಲೆಡೆಯೂ ಸಾಧ್ಯವಾಗಬೇಕಾದರೆ ವಿಶ್ವ ವಾಣಿಜ್ಯ ಒಕ್ಕೂಟದ ಎಲ್ಲ ಸದಸ್ಯ ರಾಷ್ಟ್ರಗಳು ತಮ್ಮ ನಡುವಿನ ಟ್ರೇಡ್ ರಿಲೇಟೆಡ್ ಆ್ಯಸ್ಪೆಕ್ಟ್ ಆಫ್ ಇಂಟೆಲೆಕುcéವಲ್ ಪ್ರಾಪರ್ಟಿ ರೈಟ್ಸ್ (ಟ್ರಿಪ್ಸ್) ನಿಯಮಾವಳಿಗೆ ತಿದ್ದುಪಡಿ ತರಬೇಕು. ಈ ತಿದ್ದುಪಡಿಗೆ ಆಗ್ರಹಿಸಿ, ಭಾರತ ಈಗಾಗಲೇ ಡಬ್ಲ್ಯುಟಿಒಗೆ ಮನವಿ ಸಲ್ಲಿಸಿದೆ. ಭಾರತದ ಈ ಪ್ರಯತ್ನಕ್ಕೆ ಜಿ-7 ಸದಸ್ಯ ರಾಷ್ಟ್ರಗಳು ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.
ಮುಕ್ತ ಸಮಾಜಕ್ಕೆ ಒತ್ತು: ಹವಾಮಾನ ಬದಲಾವಣೆ ವೇದಿಕೆಯಲ್ಲಿ ಮಾತನಾಡಿದ ಅವರು, ಜಗತ್ತನ್ನು ತಾಪಮಾನ ಹೆಚ್ಚಳದ ಅಪಾಯದಿಂದ ಪಾರು ಮಾಡಬೇಕಾದರೆ ರಾಷ್ಟ್ರಗಳ ಪರಸ್ಪರ ಸಹಕಾರ ಅತ್ಯಗತ್ಯ ಎಂದರು. ಪ್ಯಾರಿಸ್ ಸಮ್ಮೇಳನದಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯಗಳನ್ನು ಜಾರಿಗೊಳಿಸಲು ಭಾರತ ಬದ್ಧವಾಗಿದೆ ಎಂದರು.