Advertisement

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

04:52 PM Apr 26, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏ. 27ರಂದು ವಾಸ್ತವ್ಯ ಮಾಡಿ ಮತಬೇಟೆ ಆರಂಭಿಸಲಿದ್ದು, ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ವಾಸ್ತವ್ಯ ಮಾಡುತ್ತಿರುವ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ.

Advertisement

ಮೇ 7ರಂದು ನಡೆಯಲಿರುವ ಮತದಾನ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮೋದಿ ಸುನಾಮಿ ಅಪ್ಪಳಿಸಲಿದ್ದು, ಬೆಳಗಾವಿ,
ಚಿಕ್ಕೋಡಿ ಹಾಗೂ ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಏ. 27ರಂದು ಸಂಜೆ 7:30ಕ್ಕೆ ಆಗಮಿಸಲಿರುವ ಮೋದಿ ಬೆಳಗಾವಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಸ್ವಾತಂತ್ರ್ಯ ನಂತರ ಪ್ರಧಾನಿಯೊಬ್ಬರು ಬೆಳಗಾವಿ ನೆಲದಲ್ಲಿ ವಾಸ್ತವ್ಯ ಮಾಡುತ್ತಿರುವುದು ಇದೇ ಮೊದಲನೆಯದ್ದಾಗಿದೆ. ಈ ಹಿಂದೆ ಎಚ್‌.ಡಿ. ದೇವೇಗೌಡ ಪ್ರಧಾನಿ ಆಗಿದ್ದಾಗ ರಸ್ತೆ ಮಾರ್ಗವಾಗಿ ಬೆಳಗಾವಿಗೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಂದಿದ್ದರು. ನಂತರ ಇಲ್ಲಿ ಕೆಲ ಹೊತ್ತು ಉಳಿದುಕೊಂಡು ಮುಂಬೈಗೆ ಪ್ರಯಾಣ ಬೆಳೆಸಿದ್ದರು.

ಬೆಳಗಾವಿ ತಾಲೂಕಿನ ಕಾಕತಿ ಹೊರ ವಲಯದ ಬೆಳಗಾವಿ-ಪುಣೆ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿರುವ ಐಟಿಸಿ ವೆಲ್ಕ್ಂ ಹೋಟೆಲ್‌ನಲ್ಲಿ ಮೋದಿ ರಾತ್ರಿ ಕಳೆಯಲಿದ್ದಾರೆ. 5 ಎಕರೆ ವಿಸ್ತೀರ್ಣದಲ್ಲಿರುವ ಈ ಹೋಟೆಲ್‌ ಇನ್ನೂ ಉದ್ಘಾಟನೆ ಆಗಿಲ್ಲ. ಉದ್ಘಾಟನೆಗೂ ಮುನ್ನವೇ ಮೋದಿಯವರ ಆತಿಥ್ಯಕ್ಕೆ ಈ ಹೋಟೆಲ್‌ ಸಜ್ಜಾಗಿದೆ.

ಈಗಾಗಲೇ ಎಸ್‌ಪಿಜಿ ತಂಡ ಹೋಟೆಲ್‌ ಸುಪರ್ದಿಗೆ ಪಡೆದುಕೊಂಡಿದೆ. ಕೊನೆಯ ಕ್ಷಣದಲ್ಲಿ ಭದ್ರತೆ ದೃಷ್ಟಿಯಿಂದ ಮೋದಿ ವಾಸ್ತವ್ಯ ಮಾಡುವ ಸ್ಥಳ ಬದಲಾವಣೆ ಆಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ..

ಮೋದಿಗೂ ಬೆಳಗಾವಿಗೂ ಬಿಡಲಾರದ ನಂಟು:
ಈಗಾಗಲೇ 8 ಸಲ ಮೋದಿ ಬೆಳಗಾವಿಗೆ ಆಗಮಿಸಿದ್ದು, ಬೆಳಗಾವಿಗೂ ಮೋದಿಗೂ ಅವಿನಾಭಾವ ಸಂಬಂಧವಿದೆ. 2014 ಲೋಕಸಭೆ
ಚುನಾವಣೆಯಿಂದಲೂ ಮೋದಿ ಕುಂದಾನಗರಿಗೆ ಬರುತ್ತಿದ್ದಾರೆ. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ಯೋಜನೆಗೆ ಬೆಳಗಾವಿಯಿಂದಲೇ ಚಾಲನೆ ನೀಡಿದ್ದರು. ಗುಂಡಿ ಒತ್ತುವ ಮೂಲಕ ಎಲ್ಲ ರೈತರ ಖಾತೆಗೆ ಹಣ ಜಮೆ ಮಾಡಿದ್ದರು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಕೆಎಲ್‌ಇ ದಶಮಾನೋತ್ಸವ ಸಮಾರಂಭ, ಚುನಾವಣಾ ಪ್ರಚಾರ, ವಿಧಾನಸಭೆ ಚುನಾವಣೆ ವೇಳೆ ದೇಶದಲ್ಲಿಯೇ ಅತಿ ದೊಡ್ಡ ರೋಡ್‌ ಶೋ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮೋದಿ
ಬೆಳಗಾವಿಯೊಂದಿಗೆ ಉತ್ತಮ ನಂಟು ಹೊಂದಿದ್ದಾರೆ.

Advertisement

ಉತ್ತರ ಕರ್ನಾಟಕ ಚುನಾವಣಾ ರಣತಂತ್ರ:
ಬೆಳಗಾವಿಯಲ್ಲಿ ಮೋದಿ ಒಂದು ದಿನ ವಾಸ್ತವ್ಯ ಮಾಡುವ ಮೂಲಕ ಇಲ್ಲಿಂದಲೇ ಉತ್ತರ ಕರ್ನಾಟಕ ಭಾಗದ ಚುನಾವಣೆಯ ರಣತಂತ್ರ ಹೆಣೆಯಲಿದ್ದಾರೆ. ಈ ಭಾಗದ ಲೋಕಸಭಾ ಕ್ಷೇತ್ರಗಳ ಚುಣಾವಣಾ ರಣಕಹಳೆ ಮೊಳಗಿಸಲು ಮೋದಿ ಮಾಸ್ಟರ್‌ ಪ್ಲಾನ್‌ ಮಾಡಲಿದ್ದಾರೆ. ಬಿಜೆಪಿಯ ಭದ್ರಕೋಟೆ ಆಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಗೆಲುವಿನ ಯಾತ್ರೆ ಮುಂದುವರಿಸಲಿದ್ದಾರೆ. ಮತದಾರರನ್ನು ಸೆಳೆಯಲು ಮೋದಿ ಅಜೆಂಡಾ ಪ್ರಮುಖವಾಗಿದ್ದು, ಹೀಗಾಗಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದರೆ ಉತ್ತರ ಕರ್ನಾಟಕ ಭಾಗವನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂಬ ಲೆಕ್ಕಾಚಾರ ಬಿಜೆಪಿಯವರದ್ದಾಗಿದೆ.

ಏ. 28ರಂದು ನಗರದ ಮಾಲಿನಿ ಸಿಟಿ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಮೋದಿ ವಾಸ್ತವ್ಯ ಮಾಡಿದ ಸ್ಥಳದಿಂದ ಹೆಲಿಕಾಪ್ಟರ್‌ ಮೂಲಕ ಮಾಲಿನಿ ಸಿಟಿ ಮೈದಾನಕ್ಕೆ ಆಗಮಿಸಲಿದ್ದಾರೆ. ಈ ಮೈದಾನದಲ್ಲಿ ಹೆಲಿಪ್ಯಾಡ್‌ ತಯಾರಿಯೂ ನಡೆದಿದೆ. ಅಬ್‌ ಕೀ ಬಾರ್‌ ಚಾರ್‌ ಸೌ ಪಾರ್‌ ಎಂಬ ಘೋಷವಾಕ್ಯದಿಂದ ಬೆಳಗಾವಿಯಲ್ಲಿ ಮೋದಿ ರಣಕಹಳೆ ಮೊಳಗಿಸಲಿದ್ದಾರೆ. ಬೆಳಗ್ಗೆ 11:30ಕ್ಕೆ ನಡೆಯಲಿರುವ ಸಮಾವೇಶದಲ್ಲಿ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ, ಚಿಕ್ಕೋಡಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಯವರ ಪರ ಮತ ಕೇಳಲಿದ್ದಾರೆ. ರಾಜ್ಯದ ವಿವಿಧ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿರಲಿದ್ದಾರೆ.

ರಾತ್ರಿ ವಾಸ್ತವ್ಯ, ಬೆಳಗ್ಗೆ ಸಮಾವೇಶ
ಬೆಳಗಾವಿ ನಗರದ ಐಟಿಸಿ ವೆಲ್ಕ್ಂ ಹೋಟೆಲ್‌ನಲ್ಲಿ ಏ. 27ರಂದು ಸಂಜೆ 7:30ಕ್ಕೆ ವಾಸ್ತವ್ಯ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಕೆಲ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಇತರೆ ನಾಯಕರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಮರುದಿನ ಏ. 28ರಂದು ಬೆಳಗ್ಗೆ 11:30ಕ್ಕೆ ನೇರವಾಗಿ ಸಮಾವೇಶ ನಡೆಯುವ ಮಾಲಿನಿ ಸಿಟಿ ಮೈದಾನಕ್ಕೆ ಆಗಮಿಸಲಿದ್ದಾರೆ. ಬಳಿಕ ಇಲ್ಲಿಂದ ದಾವಣಗೆರೆ ಸಮಾವೇಶಕ್ಕೆ ತೆರಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ಮಾಡಲಾಗುತ್ತಿದೆ. ಈಗಾಗಲೇ 3-4 ಸಭೆಗಳನ್ನು ನಡೆಸಲಾಗಿದೆ. ಎಸ್‌ಪಿಜಿ ತಂಡ ಬೆಳಗಾವಿಗೆ ಆಗಮಿಸಿ ನಮ್ಮೊಂದಿಗೆ ಸಭೆ ನಡೆಸಿದೆ. ಮೋದಿ  ಆಗಮಿಸುವ ಎಲ್ಲ ಕಡೆಗೂ ಹೆಚ್ಚಿನ
ಪೊಲೀಸರನ್ನು ನಿಯೋಜಿಸಲಾಗುವುದು. ಬೇರೆ ಜಿಲ್ಲೆಗಳಿಂದಲೂ ಪೊಲೀಸ್‌ ಸಿಬ್ಬಂದಿ ಬರಲಿದ್ದಾರೆ.
*ಯಡಾ ಮಾರ್ಟಿನ್‌
ಮಾರ್ಬನ್ಯಾಂಗ್‌, ಪೊಲೀಸ್‌ ಕಮಿಷನರ್‌

*ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next