ಸೋನಿಪತ್(ಹರಿಯಾಣ) : ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ(ಸೆ25) ಹರಿಯಾಣ ಚುನಾವಣ ಪ್ರಚಾರ ಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ‘ ಸಿದ್ದರಾಮಯ್ಯ ಅವರ ಮೇಲಿನ ಮುಡಾ ಹಗರಣ ಪ್ರಸ್ತಾವಿಸಿ ”ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಇದ್ದು ಆಡಳಿತಕ್ಕೆ ಬಂದ ಎರಡೇ ವರ್ಷದೊಳಗೆ ಕರ್ನಾಟಕ ರಾಜ್ಯವನ್ನು ಕುಲಗೆಡಿಸಿದ್ದಾರೆ. ಕರ್ನಾಟಕ ಮುಖ್ಯಮಂತ್ರಿಯ ವಿರುದ್ಧ ಭೂ ಹಗರಣದ ಆರೋಪವಿದೆ. ಕರ್ನಾಟಕ ಹೈಕೋರ್ಟ್ ಕಾಂಗ್ರೆಸ್ ಸಿಎಂ ವಿರುದ್ಧ ತನಿಖೆ ನಡೆಸಲು ಆದೇಶ ನೀಡಿದೆ. ದಲಿತರಿಗೆ ಮೀಸಲಾಗಿದ್ದ ಅನುದಾನವನ್ನೂ ಕಾಂಗ್ರೆಸ್‌ನವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದಷ್ಟು ನಂಬಿಕೆದ್ರೋಹದ ಪಕ್ಷ ಇನ್ನೊಂದಿಲ್ಲ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
”ಕಾಂಗ್ರೆಸ್‌ನ ರಾಜಮನೆತನವು ದೇಶದ ಅತ್ಯಂತ ಭ್ರಷ್ಟ ಕುಟುಂಬವಾಗಿದ್ದು, ಹೈಕಮಾಂಡ್ ಭ್ರಷ್ಟವಾಗಿರುವಾಗ, ಕೆಳಗೆ ಲೂಟಿ ಮಾಡಲು ಮುಕ್ತ ಪರವಾನಗಿ ಇದೆ” ಎಂದು ಕಿಡಿ ಕಾರಿದರು.
” ಕಾಂಗ್ರೆಸ್ ಯಾವಾಗಲೂ SC/ST/OBC ಭಾಗಿಯಾಗುವುದನ್ನು ವಂಚಿಸುತ್ತಿದೆ. ದಲಿತರಿಗೆ ಮೀಸಲಾತಿ ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್, ಇಲ್ಲದಿದ್ದರೆ ಒಬಿಸಿಯಂತೆ ದಲಿತರೂ ಮೀಸಲಾತಿಗಾಗಿ ಕಾಂಗ್ರೆಸ್ ಸೋಲನ್ನು ಕಾಯಬೇಕಾಗುತ್ತಿತ್ತು.ಕಾಂಗ್ರೆಸ್ ಸರ್ಕಾರದಿಂದ ದೂರ ಉಳಿದಿದ್ದಾಗಲೆಲ್ಲಾ ಬಡವರು, ಎಸ್‌ಸಿ/ಎಸ್‌ಟಿ/ಒಬಿಸಿಗಳು ತಮ್ಮ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್, ಸರ್ಕಾರ ಇದ್ದಾಗಲೆಲ್ಲ ದಲಿತರು ಮತ್ತು ಹಿಂದುಳಿದವರ ಹಕ್ಕುಗಳನ್ನು ಕಿತ್ತುಕೊಂಡಿದೆ” ಎಂದು ಪ್ರಧಾನಿ ಮೋದಿ ಕಿಡಿ ಕಾರಿದರು.
”10 ವರ್ಷಗಳ ಹಿಂದೆ ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯವನ್ನು ಹೇಗೆ ಲೂಟಿ ಮಾಡಲಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಇಲ್ಲಿ ರೈತರ ಜಮೀನುಗಳನ್ನು ಲೂಟಿ ಮಾಡಿ ರಾಜ್ಯವನ್ನು ದಲ್ಲಾಳಿಗಳಿಗೆ ಮತ್ತು ಅಳಿಯಂದಿರಿಗೆ ಹಸ್ತಾಂತರಿಸಲಾಯಿತು’ ಎಂದು ತೀವ್ರ ವಾಗ್ದಾಳಿ ನಡೆಸಿದರು.