Advertisement

Politics: ಮಾತಿಗೆ ತಪ್ಪಿದ ಪ್ರಧಾನಿ ಮೋದಿ ಸರಕಾರ: ಸಿಎಂ ಟೀಕೆ

11:37 PM Dec 26, 2023 | Team Udayavani |

ಬೆಂಗಳೂರು: ಅಧಿಕಾರಕ್ಕೆ ಬಂದು ಕೇವಲ ಆರು ತಿಂಗಳಲ್ಲಿ ಎಲ್ಲ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಾತಿಗೆ ತಪ್ಪಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಯುವನಿಧಿ’ ಅಡಿ ನಿರುದ್ಯೋಗ ಭತ್ಯೆಗಾಗಿ ಪದವೀಧರರು ಮತ್ತು ಡಿಪ್ಲೊಮಾ ಪೂರೈಸಿದವರಿಂದ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವನಿಧಿಗೆ ಚಾಲನೆ ನೀಡುವ ಮೂಲಕ ಚುನಾವಣೆ ಪೂರ್ವ ಹೇಳಿದ್ದ ಎಲ್ಲ ಐದು ಗ್ಯಾರಂಟಿಗಳನ್ನು ನಾವು ಈಡೇರಿಸಿದ್ದೇವೆ. ಜತೆಗೆ ರಾಜ್ಯದ ಆರ್ಥಿಕ ಸದೃಢತೆಯನ್ನೂ ಕಾಯ್ದುಕೊಂಡಿದ್ದೇವೆ. ಆದರೆ, ನೀವು (ಪ್ರಧಾನಿ ಮೋದಿ ಅವರಿಗೆ) ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಹತ್ತು ವರ್ಷವಾಯಿತು. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ ಮಾಡುವುದಾಗಿ ಹೇಳಿದ್ದಿರಿ. ಹಾಗಿದ್ದರೆ, ಮಾತು ತಪ್ಪಿದವರು ಯಾರು? ನಮ್ಮದು ನುಡಿದಂತೆ ನಡೆಯುವ ಸರಕಾರ. ನಿಮ್ಮದು ಮಾತಿಗೆ ತಪ್ಪಿದ ಸರಕಾರ’ ಎಂದು ತರಾಟೆಗೆ ತೆಗೆದುಕೊಂಡರು.

2018ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆಗ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ಪೈಕಿ ಶೇ. 10ರಷ್ಟು ಕೂಡ ಈಡೇರಿಸಿಲ್ಲ. ಆದರೆ, ನಾವು 2013-17ರ ಅವಧಿಯಲ್ಲೂ ಎಲ್ಲ ಭರವಸೆಗಳನ್ನು ಈಡೇರಿಸಿದ್ದೆವು. ಈ ಅವಧಿಯಲ್ಲಂತೂ ಕೇವಲ ಆರು ತಿಂಗಳಲ್ಲಿ ಪ್ರಮುಖ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಇದೇ ನಮಗೂ ಮತ್ತು ನಿಮಗೂ (ಬಿಜೆಪಿಗೆ) ಇರುವ ವ್ಯತ್ಯಾಸ ಎಂದು ತೀಕ್ಷ್ಣವಾಗಿ ಹೇಳಿದರು.

ಗ್ಯಾರಂಟಿಗಳನ್ನು ನೀಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಇವರೇನು ದೊಡ್ಡ ಆರ್ಥಿಕ ತಜ್ಞರೇ? ಈಗ ಗ್ಯಾರಂಟಿ ಜಾರಿಯಾಗುವುದರ ಜತೆಗೆ ರಾಜ್ಯವೂ ಆರ್ಥಿಕವಾಗಿ ಸದೃಢವಾಗಿದೆ. ಬಜೆಟ್‌ನಲ್ಲಿ ಹಣವನ್ನೂ ಹಂಚಿಕೆ ಮಾಡಲಾಗಿದೆ. ಪ್ರಸಕ್ತ ಸಾಲಿಗೆ ಈ ಯೋಜನೆಗಳಿಗೆ 39 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎಂದ ಅವರು, ನನ್ನ ಪ್ರಕಾರ ದೇಶ ಕಂಡ ಇದುವರೆಗಿನ ಪ್ರಧಾನ ಮಂತ್ರಿಗಳಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ನರೇಂದ್ರ ಮೋದಿ’ ಎಂದು ಆರೋಪಿಸಿದರು.

Advertisement

ಕವಿಯಾದ ಡಿಕೆಶಿ; ಕಿವಿಯಾದ ಯುವಸಮೂಹ
ಸಾಮಾನ್ಯವಾಗಿ ರಾಜಕೀಯ ನಾಯಕರು ಭಾಗವಹಿಸುವ ಕಾರ್ಯಕ್ರಮಗಳು ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆ ಆಗುತ್ತವೆ. ಅದಕ್ಕೆ ಆಯಾ ಪಕ್ಷಗಳ ಕಾರ್ಯಕರ್ತರು ಸಾಕ್ಷಿಯಾಗುತ್ತಾರೆ. ಆದರೆ, ಮಂಗಳವಾರ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರಣ ಕೊಂಚ ಬದಲಾಗಿತ್ತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೆಲಹೊತ್ತಿನ ಮಟ್ಟಿಗೆ ಕವಿಗಳಾದರು; ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಸಮುದಾಯ ಕಿವಿಯಾಯಿತು.

ಡಿ.ಕೆ.ಶಿವಕುಮಾರ್‌ ಅವರ ಭಾಷಣ ಗ್ಯಾರಂಟಿಗಳ ಕುರಿತಾಗಿದ್ದರೂ, ಅದನ್ನು ಪ್ರಸ್ತುತಪಡಿಸಿದ ಪರಿ ಭಿನ್ನವಾಗಿತ್ತು. ಇದಕ್ಕಾಗಿ ತಾವೇ ರಚಿಸಿದ ಕವನವನ್ನೇ ವಾಚಿಸಿದರು. ಅದರಲ್ಲಿ ಗ್ಯಾರಂಟಿಗಳಿಂದ ಪಕ್ಷಕ್ಕೆ ದೊರೆತ ಶಕ್ತಿ, ವಿಪಕ್ಷಗಳ ಪೀಕಲಾಟ ಎಲ್ಲವೂ ಸೇರಿತ್ತು.

ಕೊಟ್ಟ ಮಾತು ಉಳಿಸಿಕೊಂಡ ಕೈ’ಗೆ ಶಕ್ತಿ ಬಂತು, ಐದು ಬೆರಳು ಸೇರಿ ಒಂದು ಮುಷ್ಠಿ ಆಯಿತು, ಐದು ಗ್ಯಾರಂಟಿ ಸೇರಿ ಕೈ’ ಗಟ್ಟಿಯಾಯಿತು, ಅರಳಿದ ಕಮಲ ಇದನ್ನು ನೋಡಿ ಉದುರಿಹೋಯಿತು, ಅತ್ತ-ಇತ್ತ ನೋಡಿ ತೆನೆ ಹೊತ್ತ ಮಹಿಳೆಯು ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ನೋಡಿ, ತೆನೆ ಬಿಸಾಡಿಹೋದಳು, ಐದು ಬೆರಳು ಸೇರಿ ಕೈ’ ಗಟ್ಟಿಯಾಯಿತು, ಮುಷ್ಠಿಯಾಯಿತು…’ ಎಂದು ಡಿ.ಕೆ. ಶಿವಕುಮಾರ್‌ ಕವನ ವಾಚನ ಮಾಡಿದರು. ಇದಕ್ಕೆ ಯುವಸಮುದಾಯ ಕರತಾಡನ ಶಿಳ್ಳೆಯೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ, ಯುವಕ-ಯುವತಿಯರಿಗೆ ಶಿಸ್ತಿನ ಪಾಠ, ಉಪಕಾರದ ಸ್ಮರಣೆ ಬಗ್ಗೆ ಕಿವಿಮಾತನ್ನೂ ಉಪಮುಖ್ಯಮಂತ್ರಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.