Advertisement

ಲಸಿಕೆ ವಿತರಣೆಗೆ ಚುನಾವಣೆಯಂತೆ ಸಿದ್ಧತೆ  : ಆರೋಗ್ಯ ಇಲಾಖೆಗೆ ಪ್ರಧಾನಿ ಮೋದಿ ಸೂಚನೆ

01:12 AM Oct 18, 2020 | sudhir |

ಹೊಸದಿಲ್ಲಿ: ದೇಶದ ಪ್ರತಿಯೊಬ್ಬರಿಗೂ ಅತ್ಯಂತ ತ್ವರಿತಗತಿಯಲ್ಲಿ ಕೊರೊನಾ ಲಸಿಕೆ ಸಿಗಬೇಕು. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದಂತೆ ಲಸಿಕೆಯನ್ನೂ ವಿತರಣೆ ಮಾಡಬೇಕು…

Advertisement

ಇದು ಪ್ರಧಾನಿ ಮೋದಿ ಅವರ ಸಲಹೆ. ದೇಶದ ಕೋವಿಡ್‌-19ರ ಸ್ಥಿತಿಗತಿ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಲಸಿಕೆ ಸಿದ್ಧವಾದ ಮೇಲೆ ದೇಶದ ಪ್ರತಿಯೊಬ್ಬರಿಗೆ ಅದು ಹೇಗೆ ತಲುಪಬೇಕು ಎಂಬುದರ ಕುರಿತಾದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು. ಈ ಸಭೆಯಲ್ಲಿ ಲಸಿಕೆ ಆಡಳಿತದ ಕುರಿತಾದ ರಾಷ್ಟ್ರೀಯ ತಜ್ಞರ ಗುಂಪು ವಿವರವಾದ ಮಾಹಿತಿ ನೀಡಿತು.
ದೇಶದಲ್ಲಿ ಎಲ್ಲ ಸರಕಾರಗಳು, ನಾಗರಿಕ ಸಂಸ್ಥೆಗಳನ್ನು ಸೇರಿಸಿಕೊಂಡು ಯಶಸ್ವಿ ಚುನಾವಣೆಯನ್ನು ನಡೆಸುತ್ತೇವೆ. ಹೀಗೆಯೇ ಪ್ರತಿಯೊಬ್ಬರನ್ನು ಇದರಲ್ಲಿ ಒಳಗೊಳ್ಳುವಂತೆ ಮಾಡಿ, ತ್ವರಿತವಾಗಿ ಎಲ್ಲರಿಗೂ ಲಸಿಕೆ ಸಿಗುವಂತೆ ಮಾಡಬೇಕು ಎಂದು ಕರೆ ನೀಡಿದರು.

ಹಾಗೆಯೇ ಸರಕು ಸಾಗಣೆ, ವಿತರಣೆ, ಆಡಳಿತ ವ್ಯವಸ್ಥೆಯನ್ನು ಸಜ್ಜಾಗಿ ಇರಿಸಬೇಕು. ಶೀತಲ ಗೃಹ, ವಿತರಣೆ ಸಂಪರ್ಕ, ನಿರ್ವಹಣ ವ್ಯವಸ್ಥೆ, ಸುಧಾರಿತ ಮೌಲ್ಯ ಮಾಪನ, ಪೂರಕ ಉಪಕರಣಗಳನ್ನೂ ವ್ಯವಸ್ಥಿತ ರೀತಿ ಇರಿಸಿರಬೇಕು ಎಂದೂ ಸಲಹೆ ನೀಡಿದರು.

200-300 ದಶ ಲಕ್ಷ ಡೋಸ್‌ ಲಭ್ಯ
2021ರ ಮಾರ್ಚ್‌ ವೇಳೆಗೆ ಲಸಿಕೆ ಲಭ್ಯವಾಗುವ ಸಾಧ್ಯತೆ ಇದ್ದು, ಈ ವರ್ಷಾಂತ್ಯದ ವೇಳೆಗೆ 200ರಿಂದ 300 ದಶಲಕ್ಷ ಲಸಿಕೆ ಡೋಸ್‌ಗಳು ಸಿದ್ಧವಾಗಲಿವೆ ಎಂದು ಕೊರೊನಾ ಲಸಿಕೆಯ ಪ್ರಮುಖ ಜವಾಬ್ದಾರಿ ಹೊತ್ತಿರುವ ಸೆರಮ್‌ ಸಂಸ್ಥೆ ಹೇಳಿದೆ.

30 ಕೋಟಿ ಮಂದಿ ಗುರುತು
ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ 30 ಕೋಟಿ ಮಂದಿಗೆ ಮೊದಲ ಹಂತದ ಲಸಿಕೆ ಸಿಗಲಿದೆ. ಕೇಂದ್ರ ಸರಕಾರವು ಮೊದಲಿಗೆ ಯಾರಿಗೆ ಲಸಿಕೆ ನೀಡಬೇಕು ಎಂಬುದನ್ನು ಗುರುತಿಸಿದೆ ಎಂದು ಹೇಳಲಾಗಿದ್ದು, ಅತ್ಯಂತ ಅಪಾಯದಲ್ಲಿರುವ ವಲಯಗಳಾದ ಪೊಲೀಸರು, ಆರೋಗ್ಯ ಇಲಾಖೆ ಕಾರ್ಯಕರ್ತರು, ವೃದ್ಧರು, ಸಹ ರೋಗಗಳಿಂದ ನರಳುತ್ತಿರುವವರಿಗೆ ನೀಡಲಾಗುತ್ತದೆ. ದೇಶದಲ್ಲಿ ಎಲ್ಲರಿಗೂ ಲಸಿಕೆ ತಲುಪಿಸುವುದು ಸುಲಭವಲ್ಲ. ಹೀಗಾಗಿ ಲಸಿಕೆ ಸಿದ್ಧವಾದ ಕೂಡಲೇ ಹೈರಿಸ್ಕ್ ನಲ್ಲಿರುವವರಿಗೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ಸರಕಾರದ ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next