ರಾಮಾಯಣದೊಂದಿಗೆ ನಂಟು ಹೊಂದಿರುವ ವಿವಿಧ ದೇಗುಲಗಳಿಗೆ ಕಳೆದೊಂದು ವಾರದಲ್ಲಿ ಪ್ರಧಾನಿ ಮೋದಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅದರಂತೆ, ರಾಮಮಂದಿರದ ಪ್ರಾಣ ಪ್ರತಿಷ್ಠೆಗೆ ಮುನ್ನಾದಿನವಾದ ಭಾನುವಾರ ಅವರು ತಮಿಳುನಾಡಿನ ಧನುಷ್ಕೋಡಿ ಮತ್ತು ಅರಿಚಲ್ ಮುನ್ನೈಗೆ ಹೋಗುವ ದಾರಿಯಲ್ಲಿ ಶ್ರೀ ಕೋದಂಡರಾಮಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಕೋದಂಡರಾಮಸ್ವಾಮಿ ದೇಗುಲದಲ್ಲಿ ಬಿಲ್ಲು-ಬಾಣ ಹಿಡಿದು ನಿಂತಿರುವ ರಾಮನ ವಿಗ್ರಹವನ್ನು ಪೂಜಿಸಲಾಗುತ್ತದೆ.
Advertisement
ಅಲ್ಲಿಂದ ಅರಿಚಲ್ ಮುನ್ನೈಗೆ ತೆರಳಿದ ಮೋದಿ, ಅಲ್ಲಿನ ಸಮುದ್ರಕ್ಕೆ ಹೂವುಗಳನ್ನು ಅರ್ಪಿಸಿ, ರಾಷ್ಟ್ರ ಲಾಂಛನವಿರುವ ಸ್ತಂಭಕ್ಕೂ ಪುಷ್ಪನಮನ ಸಲ್ಲಿಸಿದರು. ಜತೆಗೆ, ಬೀಚ್‌ನಲ್ಲಿ ಪ್ರಾಣಾಯಾಮ ಮಾಡಿದ್ದೂ ಕಂಡುಬಂತು.
ಕೋದಂಡರಾಮಸ್ವಾಮಿ ದೇಗುಲ ಮತ್ತು ಅರಿಚಲ್ ಮುನ್ನೈ ಭೇಟಿಯ ಬಳಿಕ ನೇರವಾಗಿ ಮಧುರೈಗೆ ಹೋದ ಪ್ರಧಾನಿ ಮೋದಿ, ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ತೆರಳಿದರು. ತಮಿಳುನಾಡಿನ ಪವಿತ್ರ ಜಲವುಳ್ಳ ಕಳಶವನ್ನೂ ಮೋದಿ ತಮ್ಮೊಂದಿಗೆ ಒಯ್ದರು ಎಂದು ದೇಗುಲದ ಅರ್ಚಕರು ತಿಳಿಸಿದ್ದಾರೆ. ಶನಿವಾರ ಪ್ರಧಾನಿ ಮೋದಿಯವರು ತಮಿಳುನಾಡಿನ ಶ್ರೀರಂಗಂನಲ್ಲಿರುವ ಶ್ರೀ ರಂಗನಾಥಸ್ವಾಮಿ ಮತ್ತು ರಾಮೇಶ್ವರದ ಅರುಳ್‌ಮಿಗು ರಾಮನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದರು. ಅದಕ್ಕೂ ಮೊದಲು, ಅಂದರೆ ಕಳೆದ ವಾರ, ರಾಮಾಯಣದೊಂದಿಗೆ ನಂಟು ಹೊಂದಿರುವ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇಗುಲ ಮತ್ತು ಕೇರಳದ ತ್ರಿಪ್ರಯಾರ್ ರಾಮಸ್ವಾಮಿ ದೇಗುಲಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
Related Articles
ಅರಿಚಲ್ ಮುನ್ನೈ ಎನ್ನುವುದು ರಾಮಸೇತುವಿರುವ ಸ್ಥಳ. ಇದು ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದ ದಕ್ಷಿಣ ತುದಿಯಲ್ಲಿದೆ. ಸೀತೆಯನ್ನು ಅಪಹರಣ ಮಾಡಿದ ರಾವಣನ ಸಂಹಾರಕ್ಕಾಗಿ ಶ್ರೀರಾಮನು ವಾನರ ಸೇನೆಯ ಸಹಾಯದಿಂದ ರಾಮಸೇತುವನ್ನು ನಿರ್ಮಿಸಿದ್ದು ಇದೇ ಪ್ರದೇಶದಲ್ಲಿ.
Advertisement