Advertisement

Modi: ಲೋಕಸಭಾ ಚುನಾವಣೆಯತ್ತ ಪ್ರಧಾನಿ ಮೋದಿ ಚಿತ್ತ

09:54 PM Aug 15, 2023 | Team Udayavani |

ದೇಶದ 77ನೇ ಸ್ವಾತಂತ್ರೊéàತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಅರಳಿಸಿ, ದೇಶದ ಜನತೆಯನ್ನುದ್ದೇಶಿಸಿ ಸತತ 10ನೇ ಬಾರಿಗೆ ಮಾಡಿದ ಭಾಷಣ ಈ ಹಿಂದಿನ ಎಲ್ಲ ಭಾಷಣಗಳಿಗಿಂತ ಕೊಂಚ ಭಿನ್ನವಾಗಿತ್ತು. ಸರ್ಕಾರದ ಸಾಧನೆ, ಭವಿಷ್ಯದ ಯೋಚನೆ, ಯೋಜನೆ ಹಾಗೂ ವಿಪಕ್ಷಗಳನ್ನು ಗುರಿಯಾಗಿಸಿ ಪರೋಕ್ಷ ಟೀಕೆಯ ಜತೆಜತೆಯಲ್ಲಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಮೇಲೂ ದೃಷ್ಟಿ ನೆಟ್ಟಿದ್ದು ಸ್ಪಷ್ಟವಾಗಿತ್ತು.

Advertisement

ತಮ್ಮ ಈ ಹಿಂದಿನ ಸ್ವಾತಂತ್ರ್ಯ ದಿನದ ಭಾಷಣಗಳಲ್ಲಿ ಸರ್ಕಾರದ ಸಾಧನೆಗಳನ್ನು ವಿವರಿಸುವ ಜತೆಯಲ್ಲಿ ಕೆಲವು ಹೊಸ ಯೋಜನೆಗಳನ್ನು ಘೋಷಿಸುತ್ತಿದ್ದ ಪ್ರಧಾನಿ ಮೋದಿ ಈ ಬಾರಿ ಈ ಸಂಪ್ರದಾಯಕ್ಕೆ ಕೊಂಚ ವಿರಾಮ ನೀಡಿದಂತೆ ಕಂಡುಬಂತು. ಹೀಗಾಗಿ ತಮ್ಮ ಭಾಷಣದ ವೇಳೆ ಹೆಚ್ಚಿನ ಸಮಯವನ್ನು ಸರ್ಕಾರದ ಸಾಧನೆ, ಜಾರಿಗೊಳಿಸಿದ ಯೋಜನೆಗಳಿಂದ ದೇಶದ ಜನರಿಗೆ ಲಭಿಸಿರುವ ಪ್ರಯೋಜನಗಳನ್ನು ವಿವರಿಸಲು ಬಳಸಿಕೊಂಡರು. ಅವರು ಹೊಸದಾಗಿ ಘೋಷಿಸಿದ ಯೋಜನೆ ಎಂದರೆ ಸಾಂಪ್ರದಾಯಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಕಲ್ಯಾಣಕ್ಕಾಗಿ 13,000-15,000 ಕೋ. ರೂ. ಮೊತ್ತದ ವಿಶ್ವಕರ್ಮ ಯೋಜನೆ ಮಾತ್ರ. ವಿಶ್ವಕರ್ಮ ಜಯಂತಿ ದಿನವಾದ ಸೆ. 17ರಂದು ಈ ಯೋಜನೆಗೆ ಚಾಲನೆ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ.

ಈವರೆಗಿನ ಭಾಷಣಗಳಲ್ಲಿ ದೇಶದ ನಾಗರಿಕರನ್ನು ದೇಶವಾಸಿಗಳು, ತನ್ನ ಸಹ ನಾಗರಿಕರೇ ಎಂದು ಸಂಬೋಧಿಸುತ್ತಲೇ ಭಾಷಣ ಆರಂಭಿಸುತ್ತಿದ್ದ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ತನ್ನ ಕುಟುಂಬದ ಸದಸ್ಯರೇ ಎಂದು ಸಂಬೋಧಿಸಿದ್ದೇ ಅಲ್ಲದೆ ನಾನು ನಾಗರಿಕರಿಗಾಗಿ ಬದುಕುತ್ತಿದ್ದೇನೆ ಮತ್ತು ಉಸಿರಾಡುತ್ತಿದ್ದೇನೆ. ನಾನು ಕನಸು ಕಾಣುವಾಗಲೂ ನಾಗರಿಕರಿಗಾಗಿ ಕನಸು ಕಾಣುತ್ತೇನೆ ಎಂದು ಹೇಳುವ ಮೂಲಕ ದೇಶದ ಜನತೆಯನ್ನು ಭಾವನಾತ್ಮಕವಾಗಿ ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದುದು ವಿಶೇಷವಾಗಿತ್ತು. ಮುಂದಿನ ಐದು ವರ್ಷಗಳಲ್ಲಿ ದೇಶ ಅಭೂತಪೂರ್ವ ಅಭಿವೃದ್ಧಿಯನ್ನು ಕಾಣಬೇಕಿದೆ.

ದೇಶದ ಸ್ವಾತಂತ್ರ್ಯದ ಶತಮಾನದ ಸಂದರ್ಭದಲ್ಲಿ ನಾವು ಅಭಿವೃದ್ಧಿ ಹೊಂದಿದ ದೇಶವಾಗಬೇಕಿದೆ. ಈ ಕನಸು ಈಡೇರಬೇಕಾದರೆ ಮುಂದಿನ ಐದು ವರ್ಷ ಅತೀ ಮುಖ್ಯವಾಗಿದೆ. ಮುಂದಿನ ವರ್ಷ ಆ.15ರಂದು ಇದೇ ಕೆಂಪುಕೋಟೆಯಲ್ಲಿ ನಿಂತು ನಾನು ಮಾತನಾಡುವ ಸಂದರ್ಭದಲ್ಲಿ ನಿಮ್ಮ ಸಾಮರ್ಥ್ಯ, ನೀವು ಸಾಧಿಸಿದ ಅಭಿವೃದ್ಧಿ, ಹೆಚ್ಚಿನ ಆತ್ಮ ವಿಶ್ವಾಸದಿಂದ ನೀವು ಕಂಡ ಯಶಸ್ಸುಗಳಿಂದಾಗಿ ದೇಶ ಸಾಧಿಸಿದ ಪ್ರಗತಿಯ ಚಿತ್ರಣವನ್ನು ನಿಮ್ಮ ಮುಂದಿಡಲಿದ್ದೇನೆ ಎನ್ನುವ ಮೂಲಕ ತಮ್ಮ ಭವಿಷ್ಯದ ಆಕಾಂಕ್ಷೆ ಏನು ಎಂಬುದನ್ನು ಪ್ರಧಾನಿ ಮೋದಿ ತೆರೆದಿಟ್ಟರು.

ನಾವು ನಮ್ಮ ಕನಸುಗಳನ್ನು ಸಾಕಾರಗೊಳಿಸಬೇಕಾದರೆ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣ ಈ ಮೂರು ಅನಿಷ್ಠಗಳನ್ನು ತೊಡೆದು ಹಾಕಬೇಕಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿಪಕ್ಷಗಳನ್ನು ಚುಚ್ಚಿದರು. ಭಾಷಣದ ಆರಂಭದಲ್ಲೇ ಮಣಿಪುರ ಹಿಂಸಾಚಾರ, ಉತ್ತರ ಭಾರತದಲ್ಲಿನ ಪ್ರವಾಹದಿಂದ ಜನರಿಗಾಗಿರುವ ಸಂಕಷ್ಟದ ವಿಷಯವನ್ನು ಪ್ರಸ್ತಾವಿಸಲು ಅವರು ಮರೆಯಲಿಲ್ಲ.

Advertisement

ಒಟ್ಟಿನಲ್ಲಿ ಪ್ರಧಾನಿ ಅವರ ಈ ಬಾರಿಯ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಚುನಾವಣಾ ಛಾಯೆ ಇದ್ದುದು ಕಂಡುಬಂದುದಂತೂ ಸುಳ್ಳಲ್ಲ. ಹಾಗೆಂದು ಜನಪ್ರಿಯ ಯೋಜನೆಗಳ ಘೋಷಣೆ, ಆಶ್ವಾಸನೆಗಳಿಗೆ ಜೋತು ಬೀಳದೆ ಸರ್ಕಾರದ ಸಾಧನೆಗಳನ್ನು ಮತ್ತು ದೇಶದ ಬಗೆಗಿನ ತಮ್ಮ ದೂರದೃಷ್ಟಿಯನ್ನು ತೆರೆದಿಡುವ ಮೂಲಕ ಜನರನ್ನು ಸೆಳೆಯಲು ಪ್ರಧಾನಿ ಮೋದಿ ಪ್ರಯತ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next