Advertisement

ಪ್ರಧಾನಿ ಮೋದಿ ಅಪ್ಪಟ ಸುಳ್ಳುಗಾರ : ಸಿಎಂ ಕುಮಾರಸ್ವಾಮಿ

02:09 AM Mar 09, 2019 | |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಪ್ಪಟ ಸುಳ್ಳುಗಾರ. ಅವರ ಬಣ್ಣದ ಮಾತುಗಳಿಗೆ ಜನರು ಮರುಳಾಗಬಾರದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಬೆಟ್ಟಹಲಸೂರು ಗ್ರಾಮ ಪಂಚಾಯ್ತಿಯ ಕುದುರೆಗೆ ಗ್ರಾಮದಲ್ಲಿ ಶುಕ್ರವಾರ “1ಲಕ್ಷ ಬಹುಮಹಡಿ ಬೆಂಗಳೂರು ನಗರ ವಸತಿ ಯೋಜನೆ’ಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೈತರ ಖಾತೆಗಳಿಗೆ ಹಣಹಾಕುವ ಯೋಜನೆ ಕೂಡ ಮೋಸದ ಕಾರ್ಯಕ್ರಮ ಎಂದು ದೂರಿದರು.

“ಜೆಡಿಎಸ್‌-ಕಾಂಗ್ರೆಸ್‌’ ಸರ್ಕಾರ ಸಾಲಮನ್ನಾ ಹೆಸರಿನಲ್ಲಿ ರೈತರಿಗೆ ಮೋಸ ಮಾಡಿದೆ ಎಂದು ಟೀಕೆ ಮಾಡಿರುವ ಪ್ರಧಾನಿ ಮೋದಿ ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ. ರೈತರ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಈ ವರ್ಷಾಂತ್ಯದ ವೇಳೆಗೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಹೇಳಿದರು.

ರೈತರ ಖಾತೆಗೆ ಪ್ರತಿ ವರ್ಷ 6 ಸಾವಿರ ರೂ. ಹಾಕಲಾಗುವುದು ಎಂದು ಕೇಂದ್ರ ಘೋಷಣೆ ಮಾಡಿದೆ. ದೇಶದ 12 ಕೋಟಿ ರೈತರಿಗೆ 75 ಸಾವಿರ ಕೋಟಿ ರೂ.ನೀಡಲಾಗುವುದು ಎಂದಿದೆ. ಆದರೆ ಮೋದಿ ಅವರ ಕಾರ್ಯಕ್ರಮಗಳು ಬರೀ ಸುಳ್ಳಿನ ಕಂತೆಯಿಂದ ಕೂಡಿದ್ದು, ರೈತರ ಬೆನ್ನಿಗೆ ಚೂರಿ ಹಾಕುವಲ್ಲಿ ಮೋದಿ ನಿರತರಾಗಿದ್ದಾರೆ ಎಂದು ದೂರಿದರು.

ಫ‌ಲಾನುಭವಿಗಳ ಸಂಖ್ಯೆ 17: ಕಿಸಾನ್‌ಸಮ್ಮಾನ್‌ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ 6 ಸಾವಿರ ರೂ.ನೀಡಲು ಸಿದಟಛಿವಿದೆ. ಆದರೆ ರಾಜ್ಯ ಸರ್ಕಾರ ರೈತರ ಮಾಹಿತಿಯನ್ನು ನೀಡುತ್ತಿಲ್ಲ ಎಂದು ನರೇಂದ್ರ ಮೋದಿ ದೂರಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ 8.54 ಲಕ್ಷ ರೈತರ ಅರ್ಜಿಗಳನ್ನು ಪರಿಶೀಲನೆ ಮಾಡಿ, ಅದರಲ್ಲಿ ಮಾಹಿತಿ ಸರಿಯಾಗಿರುವ 2.8 ಲಕ್ಷ ರೈತರ ಅರ್ಜಿಗಳನ್ನು ಕಿಸಾನ್‌ ಸಮ್ಮಾನ್‌ ಯೋಜನೆ ಆ್ಯಪ್‌ಗೆ ಅಪ್‌ ಲೋಡ್‌ ಮಾಡಿದೆ. ಇದರಲ್ಲಿ ಕೇವಲ 17 ಜನ ಫ‌ಲಾನುಭವಿಗಳನ್ನು ಮಾತ್ರ ಕೇಂದ್ರ ಸರ್ಕಾರ ಗುರುತಿಸಿದ್ದು, ಅದರಲ್ಲಿ 6 ಮಂದಿ ಅಕೌಂಟ್‌ಗೆ ಕೇವಲ 950 ರೂ.ಹಾಕಲಾಗಿದೆ ಎಂದು ಲೇವಡಿ ಮಾಡಿದರು.ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವರಾದ ಕೃಷ್ಣಬೈರೇಗೌಡ, ಎಂಟಿಬಿ ನಾಗರಾಜ್‌ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Advertisement

ಅಧಿಕಾರದಲ್ಲಿರೋವರೆಗೂ ಭಯ ಬೇಡ
ಬೆಂಗಳೂರು: ಇನ್ನೂ ನಾಲ್ಕು ವರ್ಷಗಳ ಕಾಲ ನಾನು ಅಧಿಕಾರದಲ್ಲಿರುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, “ಅಧಿಕಾರದಲ್ಲಿರುವವರೆಗೂ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರನ್ನು ಕೈಬಿಡುವುದಿಲ್ಲ’ ಎಂದು ಭರವಸೆ ನೀಡಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಇನ್ನೂ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿರುತ್ತೇನೆ. ಅಲ್ಲಿಯವರೆಗೂ ಯಾವುದೇ ನೌಕರರನ್ನು ಕೆಲಸದಿಂದ ತೆಗೆದುಹಾಕುವುದಿಲ್ಲ. ನೆಮ್ಮದಿಯಿಂದ ಕೆಲಸ ಮಾಡಿಕೊಂಡು ಹೋಗಿ’ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ, “ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅಧಿಕಾರಿಗಳು ನಮಗೆಲ್ಲರಿಗೂ ಪುನಃ ಕೆಲಸ ನೀಡಿದ್ದಾರೆ. ಮೊದಲು ಆರು ತಿಂಗಳವರೆಗೆ ಉದ್ಯೋಗಕ್ಕೆ ತೊಂದರೆ ಇಲ್ಲ ಎನ್ನಲಾಗಿತ್ತು. ಈಗ ಮುಖ್ಯಮಂತ್ರಿಗಳೇ ತಾವು ಅಧಿಕಾರದಲ್ಲಿರುವವರೆಗೆ ತೊಂದರೆ ಇಲ್ಲ ಎಂದು ಅಭಯ ನೀಡಿದ್ದಾರೆ. ಇದರಿಂದ  ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. ಆದರೆ, ಮತ್ತೆ ಕೆಲಸಕ್ಕೆ ಸೇರಿಸಿಕೊಂಡವರಿಗೆ ಈಗ ವೇತನ ಸರಿಯಾಗಿ ದೊರೆಯುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಕೆಲವೆಡೆ ವೇತನವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಈ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next