ಕುಣಿಗಲ್ : ತಾಲೂಕಿನ ಬಿದನಗೆರೆ ಬಸವೇಶ್ವರ ಮಠದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಿಶ್ವ ವಿಖ್ಯಾತ 161 ಅಡಿ ಎತ್ತರದ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ವಿಡಿಯೋ ಮೂಲಕ ಏ 10 ಭಾನುವಾರ ಶ್ರೀರಾಮ ನವಮಿಯಂದು ಲೋಕಾರ್ಪಣೆ ಮಾಡಲಿದ್ದಾರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಶ್ರೀ ಕ್ಷೇತ್ರದ ಪೀಠಾಧಿಕಾರಿ ಡಾ.ಧನಂಜಯ ಗುರೂಜಿ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಗುರೂಜಿ ಮಾತನಾಡಿ, ಪಂಚಮುಖಿ ಆಂಜನೇಯಸ್ವಾಮಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವ ದೆಹಲಿಯ ಸಂಸತ್ ಭವನದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿಯಿತು, ಮನವಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ ಪ್ರಧಾನ ಮಂತ್ರಿಗಳು ಶ್ರೀ ಕ್ಷೇತ್ರದಲ್ಲಿ ನಿರ್ಮಾಣಗೊಂಡಿರುವ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿಯ ಕೆತ್ತನೆ ಅದ್ಬುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು, ಶ್ರೀ ರಾಮ ನವಮಿ ದಿನದಂದು ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿ ಲೋಕಾರ್ಪಣೆಗೊಳ್ಳುತ್ತಿರುವುದು ಹಿಂದೂಗಳಿಗೆ ವಿಶೇಷವಾದ ದಿನವಾಗಿದೆ ಎಂದರು.
ಕಾರ್ಯಕ್ರಮಕ್ಕೆ ಬರಲು ನನಗೆ ಸಂತಸವಾಗಿದ್ದರೂ , ಕಾರ್ಯನಿಮಿತ್ತ ಬರಲು ಸಾಧ್ಯವಾಗುತ್ತಿಲ್ಲ, ವರ್ಚುವಲ್ ವಿಡಿಯೋ ಮೂಲಕ ವಿಗ್ರಹವನ್ನು ಲೋಕಾರ್ಪಣೆ ಮಾಡುತ್ತೇನೆ ಎಂದು ತಿಳಿಸಿದರು, ಮತ್ತೊಮ್ಮೆ ಕ್ಷೇತ್ರಕ್ಕೆ ಭೇಟಿ ನೀಡುವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ ಎಂದು ಗುರೂಜಿ ತಿಳಿಸಿದರು.
ಸ್ವಾಮೀಜಿ, ಗಣ್ಯರು ಭಾಗಿ
ಭಾನುವಾರ ಹೆಲಿಕಾಪ್ಟರ್ ಮೂಲಕ ಇಲ್ಲಿನ ಸ್ಟಡ್‌ಫಾರಂಗೆ ಆಗಮಿಸುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಾರಿನಲ್ಲಿ ಕ್ಷೇತ್ರಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಶಿರಾ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ, ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್‌ಜೋಶಿ, ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಚಿವ ಡಾ.ಸಿ.ಎನ್. ಅಶ್ವಥ್‌ನಾರಾಯಣ್, ಸಂಸದರಾದ ಡಿ.ಕೆ.ಸುರೇಶ್, ಮುನಿಸ್ವಾಮಿ, ಶಾಸಕರಾದ ಡಾ.ಹೆಚ್.ಡಿ.ರಂಗನಾಥ್, ರಾಜುಗೌಡ, ಮಾಜಿ ಸಚಿವ ಡಿ.ನಾಗರಾಜಯ್ಯ, ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷೆ ತಾರಾ ಅನುರಾಧಾ, ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್, ಬಿಜೆಪಿ ಮುಖಂಡ ಹೆಚ್.ಡಿ.ರಾಜೇಶ್‌ಗೌಡ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ದಾಸೋಹ ವ್ಯವಸ್ಥೆ
ಕಾರ್ಯಕ್ರಮಕ್ಕೆ 20 ರಿಂದ 25 ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಈ ನಿಟ್ಟಿನಲ್ಲಿ ಉಪಹಾರ, ಊಟ, ಕುಡಿಯುವ ನೀರು, ನೀರ ಮಜ್ಜಿಗೆ ಪಾನಕ, ಶೌಚಾಲಯ ವ್ಯವಸ್ಥೆ ಸೇರಿದಂತೆ ಮೋಲಭೂತ ಸೌಲಭ್ಯಗಳನ್ನು ಕ್ಷೇತ್ರದ ವತಿಯಿಂದ ವ್ಯವಸ್ಥೆಗೊಳಿಸಲಾಗಿದೆ ಎಂದು ಗುರೂಜಿ ತಿಳಿಸಿದರು.
ಭದ್ರತೆ ಪರಿಶೀಲನೆ
ಏ 10 ರಂದು ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಸಚಿವರು ಹಾಗೂ ಸ್ವಾಮೀಜಿಗಳು ಭಾಗವಹಿಸುವ ಹಿನ್ನಲೆಯಲ್ಲಿ ಡಿವೈಎಸ್‌ಪಿ ಜಿ.ಆರ್.ರಮೇಶ್, ಸಿ.ಪಿ.ಐ ರಾಜು ಸೇರಿದಂತೆ ಪೊಲೀಸ್ ತಂಡವು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.