ಬೀದರ: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಮೆರವಣಿಗೆಯಲ್ಲಿ ಬೀದರ ಜಿಲ್ಲೆಯಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಪರಿಕಲ್ಪನೆ ಸ್ತಬ್ಧಚಿತ್ರ ಪ್ರದರ್ಶನವಾಗಲಿದೆ.
2016-17ನೇ ಸಾಲಿನಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪಗಳಿಂದ ರೈತರು ನಷ್ಟ ಅನುಭವಿಸಿದ್ದರು. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ಅನೇಕ ರೈತರಿಗೆ ನೆರವು ದೊರೆತಿದೆ. ಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಸೂಕ್ತ ಬೆಳೆ ವಿಮೆ ಪರಿಹಾರ ಪಡೆಯುವ ಮೂಲಕ ದೇಶದಲ್ಲಿ ಬೀದರ ಜಿಲ್ಲೆ ಪ್ರಥಮ ಎಂಬ ಹೆಗ್ಗಳಿಕ್ಕೆಗೆ ಪಾತ್ರವಾಗಿತ್ತು. ಈ ಕಾರಣಕ್ಕೆ ಪ್ರಸಕ್ತ ವರ್ಷ ನಡೆಯುವ ಮೈಸೂರು ದಸರಾ ಉತ್ಸವದಲ್ಲಿ ಬೀದರ ಜಿಲ್ಲೆಯಿಂದ ಫಸಲ್ ಬಿಮಾ ಯೋಜನೆ ಕುರಿತಾದ ಸ್ತಬ್ಧಚಿತ್ರ ಪ್ರದರ್ಶನವಾಗಲಿದೆ.
ಅಲ್ಲದೆ, ಬೆಳೆ ವಿಮೆ ಕುರಿತು ಉತ್ಸವದಲ್ಲಿ ಜನರ ಗಮನ ಸೆಳೆಯುವ ಮೂಲಕ ಹೆಚ್ಚಿನ ರೈತರು ಬೆಳೆ ವಿಮೆ ಯೋಜನೆಯೊಂದಿಗೆ ಸಂಪರ್ಕ ಸಾಧಿ ಸುವ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸುವ ಕಾರ್ಯ ಕೂಡ ನಡೆಯಲಿದೆ. 2016-17ನೇ ಸಾಲಿನಲ್ಲಿ ಜಿಲ್ಲೆಯ 171 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಮಹತ್ವ ನೀಡಿ ರೈತರ ಬೆಳೆಗೆಳಿಗೆ ವಿಮೆ ಮಾಡಿಸುವ ಕಾರ್ಯ ಭರದಿಂದ ನಡೆದಿತ್ತು. ಅಲ್ಲದೆ, ಜಿಲ್ಲೆಯ ಡಿಸಿಸಿ ಬ್ಯಾಂಕ್ ಕೂಡ ಫಸಲ್ ಬಿಮಾ ಯೋಜನೆಗೆ ಶ್ರಮಿಸಿದೆ. ಸಂಸದ ಭಗವಂತ ಖೂಬಾ ಕೂಡ ಯೋಜನೆ ಲಾಭ ರೈತರಿಗೆ ಮುಟ್ಟಿಸಬೇಕು ಎಂಬ ನಿಟ್ಟಿನಲ್ಲಿ ಪದೇ ಪದೇ ಅ ಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕಾರ್ಯ ಕೂಡ ನಡೆಸಿದ್ದರುಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
2016-17ನೇ ಸಾಲಿನಲ್ಲಿ 151 ಕೋಟಿ ರೂ. ಮೊತ್ತದ ಬೆಳೆ ವಿಮೆ ಪಡೆಯುವ ಮೂಲಕ ಅತಿ ಹೆಚ್ಚು ಪರಿಹಾರ ಪಡೆದ ದೇಶದ ಮೊದಲ ಜಿಲ್ಲೆ ಎಂದು ಬೀದರ ಜಿಲ್ಲೆ ಗುರುತಿಸಿಕೊಂಡಿತ್ತು. 2017-18ನೇ ಸಾಲಿನಲ್ಲಿ 64 ಕೋಟಿ, 2018ರಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಬೆಳೆ ಹಾನಿ ಸಂಭವಿಸಿದ ವಿಮೆ ಮಾಡಿಸಿದ ರೈತರಿಗೆ 125 ಕೋಟಿ ರೂ. ವಿಮಾ ಪರಿಹಾರ ಜಿಲ್ಲೆಗೆ ಬಿಡುಗಡೆಯಾಗಿದ್ದು, ಜಿಲ್ಲೆಯ ರೈತರು ಫಸಲ್ ಬಿಮಾ ಯೋಜನೆಗೆ ಹೆಚ್ಚಿನ ಮಹತ್ವ ನೀಡುತ್ತಿರುವ ಹಿನ್ನೆಲೆಯಲ್ಲಿ ದಸರಾ ಉತ್ಸವದಲ್ಲಿ ಬೆಳೆ ವಿಮೆ ಕುರಿತು ಸ್ತಬ್ಧಚಿತ್ರ ನಿರ್ಮಾಣಕ್ಕೆ ಅನುಮೋದನೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಸವಕಲ್ಯಾಣದ ಅಂಜಲಿ ಆರ್ಟ್ಸ್ ಸ್ತಬ್ಧಚಿತ್ರ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿದೆ. ಟೆಂಡರ್‌ನಲ್ಲಿ ಮೂವರು ಕಲಾವಿದರು ಭಾಗವಹಿಸಿದರು. ಕಡಿಮೆ ದರಪಟ್ಟಿ ನೀಡಿದ ಕಲಾವಿದರಿಗೆ ಗುತ್ತಿಗೆ ನೀಡಲಾಗಿದೆ. ಈ ವರ್ಷ ನಿರ್ಮಾಣಗೊಳ್ಳುತ್ತಿರುವ ಸ್ತಬ್ಧಚಿತ್ರಕ್ಕೆ 6.48 ಲಕ್ಷ ರೂ. ಮೊತ್ತದ ಟೆಂಡರ್ ನೀಡಲಾಗಿದೆ. ಅಲ್ಲದೆ ಈಗಾಗಲೇ ಸ್ತಬ್ಧಚಿತ್ರ ತಯಾರಿಸುವ ಕಾರ್ಯ ಕೂಡ ನಡೆದಿದೆ ಎಂದು ಡಿಐಡಿಸಿ ರಮೇಶ ಮಠಪತಿ ಮಾಹಿತಿ ನೀಡಿದ್ದಾರೆ.
-ದುರ್ಯೋಧನ ಹೂಗಾರ