Advertisement

ನಾಳೆ ಜಿಲ್ಲಾದ್ಯಂತ ಪ್ರಾಥಮಿಕ ಶಾಲೆ ಬಂದ್‌

09:40 PM Jul 07, 2019 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸರ್ಕಾರ ಪದವೀಧರ ಶಿಕ್ಷಕರೆಂದು ಪರಿಗಣಿಸಿ ವೇತನ ಶ್ರೇಣಿ ಹೆಚ್ಚಿಸುವಂತೆ ಆಗ್ರಹಿಸಿ ಜು.9 ರಂದು ಜಿಲ್ಲಾದ್ಯಂತ ಪ್ರಾಥಮಿಕ ಶಾಲೆಗಳ ಬಂದ್‌ ಆಚರಿಸಲು ನಿರ್ಧರಿಸಲಾಗಿದೆ.

Advertisement

ನಗರದಲ್ಲಿ ಭಾನುವಾರ ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎ.ನಾರಾಯಣಸ್ವಾಮಿ, ರಾಜ್ಯ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ನ್ಯಾಯಯುತವಾದ ಬೇಡಿಕೆಗಳಿಗೆ ಸ್ಪಂದಿಸದ ಪರಿಣಾಮ ರಾಜ್ಯಾದ್ಯಂತ 9ಕ್ಕೆ ಪ್ರಾಥಮಿಕ ಶಾಲೆಗಳ ಬಂದ್‌ ಆಚರಿಸಲು ರಾಜ್ಯ ಸಂಘ ಕರೆ ನೀಡಿದೆ ಎಂದರು.

ವೇತನ ಶ್ರೇಣಿ ಹೆಚ್ಚಿಸುತ್ತಿಲ್ಲ: ಪ್ರಾಥಮಿಕ ಶಾಲೆಗಳಲ್ಲಿ ಪದವೀಧರ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರೂ ಅವರಿಗೆ ಬಡ್ತಿ ನೀಡುತ್ತಿಲ್ಲ. ಕನಿಷ್ಠ ಪದವೀಧರ ಶಿಕ್ಷಕರೆಂದು ಪರಿಗಣಿಸುತ್ತಿಲ್ಲ. ವೇತನ ಶ್ರೇಣಿ ಕೂಡ ಹೆಚ್ಚಳ ಮಾಡಿಲ್ಲ. ಇದರಿಂದ ಶಿಕ್ಷಕರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.

ಹೊಸ ಯೋಜನೆ ರದ್ದಿಗೆ ಆಗ್ರಹ: ಸರ್ಕಾರ ಅನುಸರಿಸುತ್ತಿರುವ ಹೊಸ ಪಿಂಚಣಿ ಯೋಜನೆ ನೌಕರರ ಪಾಲಿಗೆ ಮಾರಕವಾಗಿದ್ದು, ಸರ್ಕಾರ ಈ ಕೂಡಲೇ ಹಳೆ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಿ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

ವರ್ಗಾವಣೆ ಪ್ರಕ್ರಿಯೆ ಮಂದಗತಿ: ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಶಾಲಾ ಶಿಕ್ಷಕರ ವರ್ಗಾವಣೆ ಆರಂಭಗೊಂಡಿದ್ದರೂ ಸಾಕಷ್ಟು ತಾಂತ್ರಿಕ ದೋಷಗಳಿಂದ ವರ್ಗಾವಣೆ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ. ಶಿಕ್ಷಕರ ವರ್ಗಾವಣೆಯನ್ನು ಬೇಗ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.

Advertisement

ಆದ್ಯತೆಯ ಮೇರೆಗೆ ಬಗೆಹರಿಸಿ: ಕಳೆದ 15, 20, 25 ಹಾಗೂ 30 ವರ್ಷಗಳಿಂದ ವೇತನ ಬಡ್ತಿ ಸಿಗದಿರುವ ಶಿಕ್ಷಕರನ್ನು ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಬಡ್ತಿ ನೀಡಬೇಕೆಂದರು. ಗ್ರಾಮೀಣ ಕೃಪಾಂಕ ನೌಕರರ ಸಮಸ್ಯೆಗಳನ್ನು ಕೂಡಲೇ ಆದ್ಯತೆಯ ಮೇರೆಗೆ ಇಲಾಖೆ ಬಗೆಹರಿಸಬೇಕೆಂದು ಒತ್ತಾಯಿಸಿದರು.

ಸರ್ಕಾರದ ನಿರ್ಲಕ್ಷ್ಯ ಧೋರಣೆ: ಅನೇಕ ಬಾರಿ ರಾಜ್ಯ ಮಟ್ಟದಲ್ಲಿ ಹೋರಾಟ, ಧರಣಿ ನಡೆಸಿ ಶಿಕ್ಷಣ ಮಂತ್ರಿಗಳಿಗೆ, ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ಹಾಗೂ ಸರ್ಕಾರ ನಿರ್ಲಕ್ಷ್ಯ ಧೋರಣೆ ವಹಿಸಿದೆ.

ಆದ್ದರಿಂದ ಸಂಘದ ಕರೆಯಂತೆ ಜು.9 ರಂದು ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳನ್ನು ಬಂದ್‌ಗೊಳಿಸಿ ಶಿಕ್ಷಕರು ಹೋರಾಟದಲ್ಲಿ ಭಾಗವಹಿಸಲಿದ್ದು, ಜಿಲ್ಲೆಯ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರು ಸಹ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಎ.ನಾರಾಯಣಸ್ವಾಮಿ ಎಚ್ಚರಿಸಿದರು.

ಎಲ್‌ಕೆಜಿ, ಯುಕೆಜಿ ಆರಂಭಿಸಿ: ಸರ್ಕಾರ ಈ ವರ್ಷದ ಶೈಕ್ಷಣಿಕ ವರ್ಷದಿಂದಲೇ ಎಲ್ಲಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸುವ ಮೂಲಕ ಪ್ರಾಥಮಿಕ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕೆಂದರು.

ಸರ್ಕಾರ ಈ ವರ್ಷ ಕೇವಲ 20 ಶಾಲೆಗಳಲ್ಲಿ ಮಾತ್ರ ಎಲ್‌ಕೆಜಿ ಯುಕೆಜಿ ಆರಂಭಕ್ಕೆ ಅವಕಾಶ ನೀಡಿದ್ದು, ಎಲ್ಲಾ ಶಾಲೆಗಳಲ್ಲಿ ಅವಕಾಶ ಕಲ್ಪಿಸಿದರೆ ಪ್ರಾಥಮಿಕ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಾಗುತ್ತದೆ ಎಂದರು.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸುವುದು, ವೇತನ ಶ್ರೇಣಿ ಹೆಚ್ಚಿಸುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲೆಗಳನ್ನು ಜು.9ರಂದು ಬಂದ್‌ಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ನಡೆಯಲಿರುವ ಧರಣಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಭಾಗವಹಿಸಲಿದ್ದಾರೆ.
-ಎ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷರು. ಪ್ರಾ.ಶಾ.ಸ.ಸಂಘ

Advertisement

Udayavani is now on Telegram. Click here to join our channel and stay updated with the latest news.

Next