Advertisement

ಸಾಗರ: ಶಿಥಿಲಗೊಂಡ ಶಾಲಾ ಕಟ್ಟಡದಲ್ಲೇ ವಿದ್ಯಾರ್ಥಿಗಳಿಗೆ ಪಾಠ… ಗ್ರಾಮಸ್ಥರ ಪ್ರತಿಭಟನೆ

04:39 PM Jul 13, 2023 | Team Udayavani |

ಸಾಗರ: ತಾಲೂಕಿನ ಮುಳುಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲವಾಗಿದ್ದು ವಿದ್ಯಾರ್ಥಿಗಳು ಅಭದ್ರತೆ ನಡುವೆ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಹಿನ್ನೆಲೆಯಲ್ಲಿ ಶಾಲೆ ದುರಸ್ತಿಗೆ ಒತ್ತಾಯಿಸಿ ಗ್ರಾಮಸ್ಥರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಮುಳುಕೆರೆ ಶಾಲಾ ಕಟ್ಟಡ ತುಂಬಾ ಹಳೆಯದಾಗಿದ್ದು ಮಳೆಯಿಂದ ಒಂದು ಭಾಗದ ಗೋಡೆ ವಾಲಿದೆ. ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದ್ದು ಮಕ್ಕಳನ್ನು ಶಾಲೆಗೆ ಕಳಿಸಲು ಭಯವಾಗುತ್ತಿದೆ. ಮಕ್ಕಳ ಸುರಕ್ಷತೆಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಶಾಲೆ ಇರುವ ಜಾಗ ತುಂಬಾ ಇಕ್ಕಟ್ಟಾಗಿದೆ. ಶಾಲೆ, ಅಂಗನವಾಡಿ, ಅಕ್ಷರ ದಾಸೋಹ ಕಟ್ಟಡ, ಶೌಚಾಲಯಗಳೆಲ್ಲವೂ ಒಂದೇ ಕಡೆ ಇದ್ದು, ಮಕ್ಕಳಿಗೆ ತೊಂದರೆಯಾಗುತ್ತಿದೆ. ಶಾಲೆಗಾಗಿ ಮೀಸಲಿಟ್ಟ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಿಸಿ ಎಂದು ಮನವಿ ಸಲ್ಲಿಸಿದ್ದಾಗಲೂ ಗಮನ ಹರಿಸುತ್ತಿಲ್ಲ. ಶಾಲೆಗೆ ಮೀಸಲಿಟ್ಟ ಜಾಗ ಅತಿಕ್ರಮಣವಾಗುತ್ತಿದೆ. ತಕ್ಷಣ ಶಿಕ್ಷಣ ಸಚಿವರು, ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಬಿಇಓ ಭೇಟಿ: ಗ್ರಾಮಸ್ಥರ ಪ್ರತಿಭಟನೆ ಹಿನ್ನೆಲೆಯಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡವನ್ನು ದುರಸ್ತಿ ಮಾಡುವ ಜೊತೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಶಿಕ್ಷಣ ಸಚಿವರ ಕ್ಷೇತ್ರಕ್ಕೆ ಬಂದಾಗ ಶಾಲೆಗೆ ಭೇಟಿ ನೀಡಲು ಮನವಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದ ಮೇಲೆ ಗ್ರಾಮಸ್ಥರು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚಂದಮ್ಮ, ಸದಸ್ಯ ಶಿವಮೂರ್ತಿ ಗುತ್ನಳ್ಳಿ, ಪ್ರಮುಖರಾದ ಕನ್ನಪ್ಪ ಮುಳಕೇರಿ, ಪರಸಪ್ಪ, ಶೇಖರಪ್ಪ, ಮಂಜುನಾಥ್ ಇನ್ನಿತರರು ಹಾಜರಿದ್ದರು.

Advertisement

ಇದನ್ನೂ ಓದಿ: ಆನ್ಲೈನ್‌ ಸಾಲದ ಕಿರುಕುಳಕ್ಕೆ ಸಿಲುಕಿದ ಕುಟುಂಬ: ಮಕ್ಕಳಿಗೆ ವಿಷವಿಕ್ಕಿ, ದಂಪತಿ ಆತ್ಮಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next