Advertisement

ಮೋದಿ ಭಾಷಣದಲ್ಲಿ ಅಭಿವೃದ್ಧಿ ವಿಚಾರ ; ಇಮ್ರಾನ್ ಮಾತಿನಲ್ಲಿ ಭಾರತ, ಮೋದಿ ಪ್ರಹಾರ

03:33 PM Sep 29, 2019 | Hari Prasad |

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರದಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಮಾತನಾಡಿದರು. ಏಷ್ಯಾ ಖಂಡದ ಎರಡು ಪರಮಾಣು ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಹದಗೆಟ್ಟು ಹೋಗಿರುವ ಕಾರಣದಿಂದ ವಿಶ್ವಸಂಸ್ಥೆಯಲ್ಲಿ ಈ ಇಬ್ಬರೂ ನಾಯಕರ ಭಾಷಣ ಜಾಗತಿಕ ಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.

Advertisement

ಸಾಮಾನ್ಯ ಸಭೆಯಲ್ಲಿ ಮೊದಲಿಗೆ ನರೇಂದ್ರ ಮೋದಿ ಅವರು ಮಾತನಾಡಿದರೆ ಆ ಬಳಿಕ ಇಮ್ರಾನ್ ಖಾನ್ ಅವರು ಮಾತನಾಡಿದರು. ಭಾರತದ ಪ್ರಧಾನಿ ಅಭಿವೃದ್ಧಿ, ಪ್ಲಾಸ್ಟಿಕ್ ಮುಕ್ತ ಪರಿಸರ, ಹವಾಮಾನ ಬದಲಾವಣೆ, ಭಯೋತ್ಪಾದನೆ ವಿರುದ್ಧ ವಿಶ್ವನಾಯಕರು ಒಟ್ಟಾಗಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿದರು. ಅಪ್ಪಿ ತಪ್ಪಿಯೂ ಅವರು ಭಯೋತ್ಪಾದನೆಯ ವಿಚಾರದಲ್ಲಿ ನೆರೆರಾಷ್ಟ್ರ ಪಾಕಿಸ್ಥಾನದ ಹೆಸರನ್ನು ಉಲ್ಲೇಖಿಸಲಿಲ್ಲ. ಆದರೆ ಇಮ್ರಾನ್ ಖಾನ್ ಅವರು ತಮ್ಮ ಭಾಷಣದಲ್ಲಿ ಭಾರತ, ಪ್ರಧಾನಿ ಮೋದಿ ಮತ್ತು ಆರ್.ಎಸ್.ಎಸ್.ಎಸ್. ಬಗ್ಗೆಯೂ ಉಲ್ಲೇಖಿಸಿದ್ದು ವಿಶೇಷವಾಗಿತ್ತು.

ಹಾಗಾದರೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಈ ಇಬ್ಬರು ನಾಯಕರು ಯಾವ ವಿಚಾರಗಳಿಗೆ ಎಷ್ಟು ಒತ್ತುಕೊಟ್ಟರು ಎಂಬ ಒಂದು ತುಲನಾತ್ಮಕ ವಿಶ್ಲೇಷಣೆ ಇಲ್ಲಿದೆ.

ಭಾರತದ ಬಗ್ಗೆ 25 ಸಲ ಮಾತನಾಡಿದ ಪ್ರಧಾನಿ ಮೋದಿ
ತಮ್ಮ 17 ನಿಮಿಷಗಳ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಭಾರತದ ಕುರಿತು 25 ಸಲ ಮಾತನಾಡಿದರು. ಇದರಲ್ಲಿ ದೇಶದ ಬೆಳವಣಿಗೆ ಮತ್ತು ತಮ್ಮ ಸರಕಾರ ಕೈಗೊಂಡಿರುವ ಅಬಿವೃದ್ಧಿ ಕಾರ್ಯಕ್ರಮಗಳ ವಿಚಾರವಾಗಿ ಮೋದಿ ಪ್ರಸ್ತಾಪಿಸಿದರು. ಜಲ ಸಂರಕ್ಷಣೆ, ವಿದ್ಯುತ್ ಸೌಲಭ್ಯ ಪೂರೈಕೆ ಮತ್ತು ಆರ್ಥಿಕ ಅಭಿವೃದ್ಧಿ ವಿಚಾರಗಳ ಕುರಿತಾಗಿ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು.

ಅಭಿವೃದ್ಧಿ ಸಾಧಿಸಿ ತೋರಿಸುವುದು ಭಾರತಕ್ಕೆ ಪ್ರಮುಖವಾದುದಾಗಿದೆ ಯಾಕೆಂದರೆ ಇದರಿಂದ ಇನ್ನುಳಿದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಭಿವೃದ್ಧಿ ಹೊಂದಲು ಸ್ಪೂರ್ತಿಯಾಗಲಿದೆ ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದರು.

Advertisement

ಜಗತ್ತಿನ ಕುರಿತು 23 ಸಲ ಪ್ರಸ್ತಾಪಿಸಿದ ಮೋದಿ
ಕಳೆದ ಐದು ವರ್ಷಗಳಲ್ಲಿ ಭಾರತ ಸಾಧಿಸಿರುವ ಅಭಿವೃದ್ಧಿಯನ್ನು ಪ್ರಸ್ತಾಪಿಸುತ್ತಲೇ ಪ್ರಧಾನಿ ಮೋದಿ ಅವರು ಭಯೋತ್ಪಾದನೆಯ ವಿರುದ್ಧ ಮತ್ತು ಪರಿಸರ ಸಂರಕ್ಷಣೆಗಾಗಿ ಜಗತ್ತಿನ ರಾಷ್ಟ್ರಗಳು ಯಾವ ರೀತಿ ಹೋರಾಟವನ್ನು ಮಾಡಬಹುದು ಎಂಬುದನ್ನೂ ಸಹ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಲು ಮರೆಯಲಿಲ್ಲ.

ಪ್ರಾಚೀನ ಪ್ರಜಾಪ್ರಭುತ್ವವಾಗಿ ಅಮೆರಿಕಾ ಬೆಳೆದು ಬಂದ ರೀತಿಯನ್ನು ಮೋದಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಮತ್ತು ಈ ವಿಚಾರದಲ್ಲಿ ಭಾರತ ಮತ್ತು ಅಮೆರಿಕಾ ದೇಶಗಳ ನಡುವೆ ಇರುವ ಸಾಮ್ಯತೆಯನ್ನೂ ಸಹ ಮೋದಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದರು.

ಅಭಿವೃದ್ಧಿ ವಿಚಾರ ಏಳು ಬಾರಿ ಪ್ರಸ್ತಾವನೆ
ಭಾರತದಲ್ಲಿ ಅಭಿವೃದ್ಧಿ ಕಾರ್ಯಗಳು ಹೇಗೆ ತೇಜೋಗತಿಯಲ್ಲಿ ನಡೆಯುತ್ತಿವೆ ಎಂಬ ವಿಚಾರವಾಗಿಯೂ ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

ಪಾಕಿಸ್ಥಾನ ಮತ್ತು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಲೇ ಇಲ್ಲ
ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ನೆರೆರಾಷ್ಟ್ರ ಪಾಕಿಸ್ಥಾನದ ವಿಚಾರವನ್ನು ನೇರವಾಗಿ ಪ್ರಸ್ತಾಪಿಸಲಿಲ್ಲ ಹಾಗೆಯೇ ಪ್ರಧಾನಿ ಮೋದಿ ಅವರ ಭಾಷಣದಲ್ಲಿ ಪ್ರಸ್ತಾವನೆಯಾಗದ ಇನ್ನೊಂದು ಅಂಶವೆಂದರೆ ಕಾಶ್ಮೀರ ವಿಚಾರ.

ತನ್ನ 17 ನಿಮಿಷಗಳ ಭಾಷಣವನ್ನು ಮೋದಿ ಅವರು ಭಾರತ ಮತ್ತು ಅದಕ್ಕೆ ಸಂಬಂಧಿಸಿದ ಅಭಿವೃದ್ಧಿ ವಿಚಾರಗಳಿಗೇ ಮೀಸಲಿಟ್ಟರು. ಜಾಗತಿಕ ಉಗ್ರವಾದದ ಕುರಿತು ನೇರವಾಗಿ ಪ್ರಸ್ತಾಪಿಸದಿದ್ದರೂ ಸಾಂಕ್ರಾಮಿಕ ರೂಪದಲ್ಲಿ ಹರಡುತ್ತಿರುವ ಭಯೋತ್ಪಾದನಾ ಪಿಡುಗನ್ನು ಮಟ್ಟಹಾಕುವುದು ಎಲ್ಲರ ಕರ್ತವ್ಯ ಎಂದಷ್ಟೇ ಹೇಳಿದ್ದು ವಿಶೇಷವಾಗಿತ್ತು.

ಆದರೆ ಪ್ರಧಾನಿ ಮೋದಿ ಅವರ ಭಾಷಣದ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ 50 ನಿಮಿಷಗಳ ಭಾಷಣದಲ್ಲಿ ಬಹುಪಾಲು ಸಮಯವನ್ನು ಕಾಶ್ಮೀರ ವಿಚಾರವಾಗಿ ಮಾತನಾಡಲೆಂದೇ ಮೀಸಲಿಟ್ಟರು.


ಭಾರತದ ಕುರಿತಾಗಿ 17 ಸಲ ಪ್ರಸ್ತಾವನೆ
ತನ್ನ ಎಂದಿನ ವರಸೆಯಂತೆಯೇ ಕಾಶ್ಮೀರದಲ್ಲಿ ಭಾರತ ಹಿಂಸೆಯನ್ನು ಪ್ರಚೋದಿಸುತ್ತಿದೆ ಎಂದು ವರಾತ ತೆಗೆದರೆ ಕಳೆದ ಹಲವಾರು ದಶಕಗಳಿಂದ ಭಾರತ ಕಾಶ್ಮೀರ ವಿಚಾರದಲ್ಲಿ ಹಿಂಸಾ ಪ್ರವೃತ್ತಿಯಿಂದಲೇ ನಡೆದುಕೊಂಡಿದೆ ಎಂದು ಆಪಾದಿಸಿದರು.

ಆಗಸ್ಟ್ 5ರಂದು 370ನೇ ವಿಧಿ ರದ್ದತಿಯ ಬಳಿಕ ಭಾರತವು ಎಂಟು ಮಿಲಿಯನ್ ಕಾಶ್ಮೀರಿಗರನ್ನು ಕರ್ಫ್ಯೂ ಸ್ಥಿತಿಯಲ್ಲಿರಿಸಿದೆ ಎಂದು ಹೇಳುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಇಮೇಜಿಗೆ ಧಕ್ಕೆ ಉಂಟುಮಾಡುವ ಪ್ರಯತ್ನವನ್ನು ತನ್ನ ಭಾಷಣದಲ್ಲಿ ಮಾಡಿದರು. ಪಾಕಿಸ್ಥಾನವು ಕಾಶ್ಮೀರದ ಪಾಲಿನ ರಕ್ಷಕ ಎಂಬುದನ್ನು ತೋರ್ಪಡಿಸುವ ಪ್ರಯತ್ನದಲ್ಲಿ ಇಮ್ರಾನ್ ಖಾನ್ ಅವರು ತನ್ನ ದೇಶವು ಕಾಶ್ಮೀರಿಗರ ಸ್ಥಿತಿಯ ಕುರಿತು ಅತೀವ ಕಳವಳವನ್ನು ಹೊಂದಿದೆ ಎಂದು ಬಿಂಬಿಸುವ ಪ್ರಯತ್ನವನ್ನೂ ಸಹ ಮಾಡಿದರು.

ಪ್ರಧಾನಿ ಮೋದಿ ಮತ್ತು ಆರ್.ಎಸ್.ಎಸ್. ಬಗ್ಗೆ 12 ಸಲ ಪ್ರಸ್ತಾಪಿಸಿದ ಪಾಕ್ ಪ್ರಧಾನಿ
ತನ್ನ ಭಾಷಣದಲ್ಲಿ ಪ್ರಧಾನಿ ಮೋದಿ ಅವರನ್ನು ನೇರ ಟೀಕೆಗೆ ಗುರಿಯಾಗಿಸಿದ ಇಮ್ರಾನ್ ಖಾನ್ ಅವರು 2019ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ಪಾಕಿಸ್ಥಾನವನ್ನು ತಮ್ಮ ರಾಜಕೀಯ ಹಾಗೂ ಚುನಾವಣಾ ಲಾಭಕ್ಕಾಗಿ ಬಳಸಿಕೊಂಡಿದ್ದರು ಎಂಬ ನೇರ ಆರೋಪವನ್ನು ಮಾಡಿದರು. ನರೇಂದ್ರ ಮೋದಿ ಅವರು ಓರ್ವ ಕಟ್ಟರ್ ಹಿಂದುತ್ವವಾದಿಯಾಗಿದ್ದು ಅವರಿಗೆ ಈ ಗುಣ ತಮ್ಮ ಮೂಲ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯಿಂದ ಬಂದದ್ದು ಎಂದು ಇಮ್ರಾನ್ ಅವರು ಹೇಳಿದ್ದು ವಿಶೇಷವಾಗಿತ್ತು.

ಇಷ್ಟು ಮಾತ್ರವಲ್ಲದೇ ಖಾನ್ ಅವರು ಆರ್.ಎಸ್.ಎಸ್. ಅನ್ನು ಹಿಟ್ಲರ್ ನ ನಾಝೀ ಸಂಘಟನೆಯೊಂದಿಗೆ ಹೋಲಿಸಿ, ಇದರ ಮೂಲ ಉದ್ದೇಶ ಮುಸ್ಲಿಂರ ಮೂಲೋತ್ಪಾಟನೆ ಎಂಬ ಗಂಭೀರ ಆರೋಪವನ್ನು ಜಾಗತಿಕ ಸಮುದಾಯದ ಮುಂದೆ ಮಾಡಿದರು. ಹಿಂದೂಗಳು ತಾವು ಮುಸ್ಲಿಂರು ಮತ್ತು ಕ್ರಿಶ್ಚಿಯನ್ನರಿಗಿಂತ ಮೆಲ್ಮಟ್ಟದವರು ಎಂಬ ಭಾವನೆಯನ್ನು ಹೊಂದಿದ್ದಾರೆ ಹಾಗೂ ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಂರಿಗೆ ಸಿಗಬೇಕಾದ ಸ್ಥಾನಮಾನದಿಂದ ಅವರು ವಂಚಿತರಾಗಿದ್ದಾರೆ ಎಂಬ ಮೊಸಳೆ ಕಣ್ಣೀರನ್ನು ಇಮ್ರಾನ್ ಖಾನ್ ತಮ್ಮ ಭಾಷಣದಲ್ಲಿ ಸುರಿಸಿದರು.

ಪರಮಾಣು ಯುದ್ಧದ ಬಗ್ಗೆ ಎರಡು ಬಾರಿ ಪ್ರಸ್ತಾವನೆ
ಪಾಕಿಸ್ಥಾನ ಮತ್ತು ಭಾರತದ ಮಧ್ಯೆ ಶಾಂತಿ ಮಾತುಕತೆಗಳು ನಡೆಸುವ ಜವಾಬ್ದಾರಿಯನ್ನು ಖಾನ್ ಅವರು ವಿಶ್ವಸಂಸ್ಥೆಯ ಹೆಗಲಿಗೆ ಹೊರಿಸುವ ಮೂಲಕ ಎರಡೂ ದೇಶಗಳ ನಡುವಿನ ಶಾಂತಿ ವಿಚಾರದ ಚೆಂಡನ್ನು ಅವರು ವಿಶ್ವಸಂಸ್ಥೆಯ ಅಂಗಳಕ್ಕೆ ಎಸೆದುಬಿಟ್ಟರು.

ಭೌಗೋಳಿಕವಾಗಿ ಗಾತ್ರದಲ್ಲಿ ಭಾರತಕ್ಕಿಂತ ಏಳುಪಟ್ಟು ಸಣ್ಣದಾಗಿರುವ ತನ್ನ ದೇಶವು ತನ್ನ ಸಾರ್ವಭೌಮತೆಯ ಉಳಿವಿಗಾಗಿ ಕೊನೇ ಉಸಿರಿನ ತನಕ ಹೋರಾಡಲಿದೆ ಎಂದು ಹೇಳುವ ಮೂಲಕ ವಿಶ್ವಸಂಸ್ಥೆಯ ಹಾಗೂ ವಿಶ್ವದ ಇತರೇ ದೇಶಗಳ ಕರುಣೆಯನ್ನು ಗಿಟ್ಟಿಸಿಕೊಳ್ಳುವ ಭಾವನಾತ್ಮಕ ಪ್ರಯತ್ನವನ್ನು ಖಾನ್ ತಮ್ಮ ಭಾಷಣದಲ್ಲಿ ಮಾಡಿದರು.

ಕಾಶ್ಮೀರದಲ್ಲಿ ಭಾರತ ಸರಕಾರ ಏನು ಮಾಡುತ್ತಿದೆ ಎಂಬ ವಿಚಾರಗಳನ್ನು ಆ ದೇಶದ ಬಳಿಯಿಂದ ಕೇಳಿ ಪಡೆದುಕೊಳ್ಳುವಂತೆ ಹೇಳಿ ಇಮ್ರಾನ್ ಖಾನ್ ಅವರು ತಮ್ಮ ಭಾಷಣವನ್ನು ಮುಗಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡನೇ ಬಾರಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮತ್ತು ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ಮೋದಿ ಅವರು ತಮ್ಮ ಪಕ್ಷದ ಪರಮೋಚ್ಛ ನಾಯಕ ಹಾಗೂ ದೇಶದ ಮಾಜೀ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಮಾರ್ಗವನ್ನೇ ಅನುಸರಿಸಿದರು. ವಾಜಪೇಯಿ ಅವರು 1977ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಹಿಂದಿಯಲ್ಲಿಯೇ ಮಾತನಾಡಿ ವಿಶ್ವದ ಗಮನವನ್ನು ಸೆಳೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next