ಬೆಂಗಳೂರು: ನಗರದಲ್ಲಿ ಗುತ್ತಿಗೆ ಅವಧಿ ಮುಗಿದಿರುವ ಹಾಗೂ ಇನ್ನೂ ಚಾಲ್ತಿಯಲ್ಲಿರುವ ಒಟ್ಟು 324 ಆಸ್ತಿಗಳಿಗೆ ಸದ್ಯದ ಮಾರುಕಟ್ಟೆ ದರ ನಿಗದಿ ಮಾಡಲು ನಿರ್ಧರಿಸಲಾಗಿದೆ ಎಂದು ಮೇಯರ್ ಎಂ.ಗೌತಮ್‌ಕುಮಾರ್ ತಿಳಿಸಿದ್ದಾರೆ. ಪಾಲಿಕೆಯ ಆಸ್ತಿ ಸಂರಕ್ಷಣೆ, ತೆರಿಗೆ ಸಂಗ್ರಹ ಹಾಗೂ ಗುತ್ತಿಗೆ ದರ ನಿಗದಿ ಮಾಡುವ ಸಂಬಂಧ ಬುಧವಾರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮೇಯರ್ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಬಿಎಂಪಿಯಿಂದ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸೇವಾ ಸಂಸ್ಥೆಗಳಿಗೆ ಕಡಿಮೆ ದರಕ್ಕೆ ಗುತ್ತಿಗೆ ನೀಡಲಾಗಿದೆ. ಈ ರೀತಿ ಒಟ್ಟು 324 ವಿವಿಧ ಸಂಘ ಸಂಸ್ಥೆಗಳು ಹಾಗೂ ಸಮಾಜ ಸೇವಾ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಇವುಗಳಲ್ಲಿ 159 ಆಸ್ತಿಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದು, 165 ಆಸ್ತಿಗಳ ಗುತ್ತಿಗೆ ಅವಧಿ ಇನ್ನೂ ಬಾಕಿ ಇದೆ. ಎಲ್ಲವನ್ನೂ ಸದ್ಯದ ಮಾರುಕಟ್ಟೆ ದರಕ್ಕೆ ನಿಗದಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಆಸ್ತಿಗಳ ವಿಭಾಗಕ್ಕೆ ವಿಶೇಷ ತಂಡ: ಪಾಲಿಕೆಯ ಆಸ್ತಿ ಸಂರಕ್ಷಿಸುವ ನಿಟ್ಟಿನಲ್ಲಿ ವಿಶೇಷ ತಂಡ ರಚಿಸಲು ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದ ಮೇಯರ್, ತಹಶೀಲ್ದಾರ್‌ಗಳು, ಸಹಾ ಯಕ ಕಂದಾಯ ಅಧಿಕಾರಿಗಳು, ಎಂಜಿನಿಯರ್ ಗಳು ಹಾಗೂ ಸರ್ವೇಯರ್‌ಗಳ ವಿಶೇಷ ತಂಡ ರಚಿಸಿ ಆಸ್ತಿಗಳ ವಿಭಾಗ ಬಲಪಡಿ ಸಲು ಸೂಚಿಸಲಾಗಿ ದೆ. ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳ ಉಪ ಆಯುಕ್ತರಿಗೆ ಆಸ್ತಿಗಳ ಜವಾಬ್ದಾರಿ ನೀಡುವು ದು ಹಾಗೂ ಎಲ್ಲ ಆಸ್ತಿಗಳ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ನಗರದಲ್ಲಿ ವಿವಿಧ ಇಲಾಖೆಗಳಿಂದ ಪಾಲಿಕೆಗೆ ಹಸ್ತಾಂತರವಾಗುವ ಆಸ್ತಿಗಳನ್ನು ಮೇಲ್ವಿಚಾರಣೆ ಮಾಡುವುದು ಹಾಗೂ ಆಸ್ತಿ ಗುರುತಿನ ಸಂಖ್ಯೆ (ಪಿಐಡಿ) ನೀಡುವುದಕ್ಕೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. ನ್ಯಾಯಾಲಯಗಳಲ್ಲಿರುವ ಆಸ್ತಿ ಸಂಬಂಧಿತ ಪ್ರಕರಣಗಳನ್ನು 15 ದಿನಗಳಲ್ಲಿ ಇತ್ಯರ್ಥಪಡಿಸಲು ಕಾನೂನು ಕೋಶ ಸಹಾಯ ಪಡೆಯುವಂತೆ ನಿರ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು. ಪಾಲಿಕೆ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ವಿಶೇಷ ಆಯುಕ್ತ (ಆಸ್ತಿ ವಿಭಾಗ) ಮಂಜುನಾಥ್, ಕಾನೂನು ಕೋಶದ ಮುಖ್ಯಸ್ಥ ದೇಶಪಾಂಡೆ, ವಲಯ ಜಂಟಿ ಮತ್ತಿತರರು ಹಾಜರಿದ್ದರು.
ಆಸ್ತಿಗಳ ಸಂರಕ್ಷಣೆಗೆ ಬಿಬಿಎಂಪಿ ಬಜೆಟ್‌ನಲ್ಲಿ 20 ಕೋಟಿ ರೂ. ಮೀಸಲಿಡಲಾಗಿದೆ. ಕೆಲವು ಸಂಘ-ಸಂಸ್ಥೆಗಳು ಗುತ್ತಿಗೆ ಆಧಾರದ ಮೇಲೆ ಪಡೆದ ಕಟ್ಟಡಗಳನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು, ಅವುಗಳನ್ನು ವಶಕ್ಕೆಪಡೆಯಲಾಗುವುದು.
-ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ