Advertisement

ಅಸ್ಸಾಂ ಸಹಜ ಸ್ಥಿತಿಯತ್ತ ; ಅಗತ್ಯ ವಸ್ತುಗಳ ಬೆಲೆ ಇಳಿಕೆ –ಮದ್ಯ ದುಬಾರಿ!

09:54 AM Dec 17, 2019 | Team Udayavani |

ಗೌಹಾತಿ: ಪೌರತ್ವ ಹಕ್ಕು ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಸ್ಸಾಂ ರಾಜಧಾನಿ ಗೌಹಾತಿ ಸಹಿತ ರಾಜ್ಯದ ವಿವಿಧೆಡೆಗಳಲ್ಲಿ ನಡೆದ ಪ್ರತಿಭಟನೆಯ ಬಿಸಿ ನಿಧಾನವಾಗಿ ಕರಗಲಾರಂಭಿಸಿದ್ದು ಈ ಎಲ್ಲಾ ಭಾಗಗಳಲ್ಲಿ ಇದೀಗ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.

Advertisement

ಪ್ರತಿಭಟನೆಯ ಕಾರಣದಿಂದ ವಿಧಿಸಲಾಗಿದ್ದ ಕರ್ಫ್ಯೂ ಸ್ಥಿತಿ ತೆರವುಗೊಂಡಿರುವುದರಿಂದ ಆಹಾರ ಸೇರಿದಂತೆ ಅತ್ಯಗತ್ಯ ಸಾಮಾಗ್ರಿಗಳು ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದು ಇವುಗಳ ಬೆಲೆಗಳೂ ಸಹ ಸ್ಥಿರವಾಗಿವೆ. ಆದರೆ ರಾಜ್ಯದ ಪ್ರಮುಖ ಆದಾಯ ಮೂಲವಾಗಿರುವ ಪ್ರವಾಸೋದ್ಯಮ ಕ್ಷೇತ್ರ ಚೇತರಿಸಿಕೊಳ್ಳಲು ಮಾತ್ರ ಇನ್ನೂ ಕೆಲವು ದಿನಗಳ ಅವಶ್ಯಕತೆ ಇದೆ.

ಪೂರೈಕೆ ಕೊರತೆಯಿಂದ ಮುಚ್ಚಿದ್ದ ಗೌಹಾತಿಯಲ್ಲಿನ ಪೆಟ್ರೋಲ್ ಪಂಪ್ ಗಳು ಇಂದಿನಿಂದ ಮತ್ತೆ ಕಾರ್ಯಾರಂಭ ಮಾಡಿವೆ. ಆದರೂ ಮುಂಜಾಗರೂಕತಾ ಕ್ರಮವಾಗಿ ಹೆಚ್ಚಿನ ಪೆಟ್ರೋಲ್ ಬಂಕ್ ಗಳಲ್ಲಿ 500 ರೂಪಾಯಿಗಳಿಗಿಂತ ಹೆಚ್ಚಿನ ಪೆಟ್ರೋಲ್ ಮಾರಾಟ ಮಾಡುತ್ತಿಲ್ಲ.

ಆದರೆ ವಿಚಿತ್ರವೆಂದರೆ ಅಸ್ಸಾಂನ ವಿವಿಧ ಕಡೆಗಳಲ್ಲಿ ಮದ್ಯದ ಬೆಲೆಗಳು ಗಗನಮುಖಿಯಾಗಿವೆ. ಕಾಳಸಂತೆಯಲ್ಲಿ ಮದ್ಯದ ಬೆಲೆ ನಾಲ್ಕುಪಟ್ಟು ಹೆಚ್ಚಾಗಿರುವುದಾಗಿ ವರದಿಯಾಗಿದೆ. ಆದರೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿನ ವಿವಿಧ ಪ್ರೇಕ್ಷಣೀಯ ಸ್ಥಳಗಳ ಪ್ರವಾಸದ ಬುಕ್ಕಿಂಗ್ ಗಳನ್ನು ಪ್ರವಾಸಿಗರು ರದ್ದುಗೊಳಿಸುತ್ತಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಅಸ್ಸಾಂನಾದ್ಯಂತ ಡಿಸೆಂಬರ್ 12ರಂದು ಪ್ರತಿಭಟನೆ ನಡೆದಿತ್ತು. ಮತ್ತು ಈ ಪ್ರತಿಭಟನೆ ವ್ಯಾಪಕವಾಗುತ್ತಿದ್ದಂತೆ ಮತ್ತು ಹಿಂಸಾ ಸ್ವರೂಪವನ್ನು ತಾಳುತ್ತಿದ್ದಂತೆಯೇ ಪೊಲೀಸರು ಗೌಹಾತಿ ಸೇರಿ ಪ್ರಮುಖ ನಗರಗಳಲ್ಲಿ ಕರ್ಫ್ಯೂ ವಿಧಿಸಿದ್ದರು. ಸೋಮವಾರದಂದು ಗೌಹಾತಿಯಲ್ಲಿ ಕರ್ಫ್ಯೂ ತೆಗೆದುಹಾಕಲಾಗಿತ್ತು.

Advertisement

ಪ್ರತಿಭಟನೆ ಸ್ವರೂಪ ಉಗ್ರವಾಗುತ್ತಿದ್ದಂತೆ ಇಲ್ಲಿನ ಮಾರುಕಟ್ಟೆಗಳಲ್ಲಿ ತರಕಾರಿ ಮತ್ತು ಮಾಂಸದ ಉತ್ಪನ್ನಗಳ ಬೆಲೆ ಇದ್ದಕ್ಕಿದ್ದಂತೆ ಏರಿಕೆ ಕಂಡಿತ್ತು. ಪ್ರತಿಭಟನೆಯ ಕಾರಣದಿಂದ ತರಕಾರಿ ಸಾಮಾಗ್ರಗಳನ್ನು ಸಾಗಾಟ ಮಾಡುತ್ತಿದ್ದ ವಾಹನಗಳು ರಸ್ತೆ ಮಧ್ಯದಲ್ಲೇ ನಿಂತುಬಿಟ್ಟ ಕಾರಣ ಮಾರುಕಟ್ಟೆಗೆ ಸಾಮಾಗ್ರಿಗಳ ಪೂರೈಕೆಯಲ್ಲಾದ ವ್ಯತ್ಯಯವೇ ಬೆಲೆ ಏರಿಕೆಗೆ ಕಾರಣವಾಗಿತ್ತು.

ಬಟಾಟೆಯ ಬೆಲೆ 16 ರೂಪಾಯಿಗಳಿಂದ 40 ರೂಪಾಯಿಗಳಿಗೆ ಏರಿಕೆಯಾಗಿತ್ತು. ಈಗಾಗಲೇ ಬೆಲೆ ಹೆಚ್ಚಿಸಿಕೊಂಡಿರುವ ಈರುಳ್ಳಿ 60 ರೂ,ಗಳಿಂದ 120 ರೂಪಾಯಿಗಳವರೆಗೆ ಏರಿಕೆ ಕಂಡಿತ್ತು. ಕೋಳಿ ಮಾಂಸ 160 ರೂ.ಗಳಿಂದ 250 ರೂ,ಗಳಿಗೆ ಹೆಚ್ಚಳವಾಗಿತ್ತು. ಮಟನ್ ಬೆಲೆ 600 ರೂಪಾಯಿಗಳಿಂದ 800 ರೂಪಾಯಿಗಳಿಗೆ ಜಿಗಿತ ಕಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next