ಕಲಬುರಗಿ: ದೇಶದಲ್ಲಿ ದಿನವೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದನ್ನು ಖಂಡಿಸಿ ಮತ್ತು ಬೆಲೆ ಏರಿಕೆಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ವೀರ ಕನ್ನಡಿಗೆ ಸೇನೆ ನೇತೃತ್ವದಲ್ಲಿ ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಡುಗೆ ಅನಿಲ ಸಿಲಿಂಡರ್ ಹೊತ್ತು ಪ್ರತಿಭಟನೆ ನಡೆಸಲಾಯಿತು.
ಪ್ರತಿ ನಿತ್ಯ ಕೂಡ ಅಡುಗೆ ಅನಿಲ ಬೆಲೆ, ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಇದರಿಂದ ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಪ್ರತಿಭಟನಾನಿತರರು ಆಕ್ರೋಶ ವ್ಯಕ್ತಪಡಿಸಿದರು.
ದುಡಿದು ತಿನ್ನುವ ಬಡವರು ಮತ್ತು ಮಾಧ್ಯಮ ವರ್ಗದವರು ಅಗತ್ಯ ವಸ್ತುಗಳಿಂದ ಸಾಕಷ್ಟು ಸಮಸ್ಯೆ ಎದುರಿಸುವಂತೆ ಆಗಿದೆ. ಆದ್ದರಿಂದ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ನಿಯಂತ್ರಿಸಿ ಜನರ ಮೇಲಾಗುತ್ತಿರುವ ಹೊರೆಯನ್ನು ತಪ್ಪಿಸಬೇಕೆಂದು ಘೋಷಣೆ ಕೂಗಿದರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದ ಪರಿಣಾಮ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ಹಾಳಾಗಿವೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ಪ್ರತಿ ಎಕರೆಗೆ 25 ಸಾವಿರ ರೂ.ಗಳ ಬೆಳೆ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು, ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಕೋರಿ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಬೈಕಲ್ಲಿ ಮಕ್ಕಳ ಬೆಲ್ಟ್ ಕಡ್ಡಾಯ?
ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಅಮೃತ ಪಾಟೀಲ ಸಿರನೂರ, ಮುಖಂಡರಾದ ಅನಿಲ ತಳವಾರ, ರವಿ ಒಂಟಿ, ಶಿವಾಜಿ ಚವ್ಹಾಣ, ಅರುಣ ಪಾಟೀಲ, ಸಿದ್ದು ಕಂದಗಲ, ಭರತ ಸಿಂಧೆ, ಮೊಹಮ್ಮದ್ ಮುಸ್ತಾಫಾ, ಮಹಾಂತಪ್ಪ ಹೂಗಾರ, ಶಿವಾನಂದ ಚಿಕ್ಕಾಣಿ, ಸುದೀಂದ್ರ ಯಂಕಂಚಿ, ವೆಂಕಟೇಶ ಯಾದವ, ರುಕ್ಮಣ್ಣ ರೆಡ್ಡಿ, ಸುಶೀಲ ಬಾಯಿ, ಸಂಜನಾ, ಪೂಜಾ, ಭಾಗ್ಯಶ್ರೀ, ಶಾಹೀನ್, ಮಂಜುನಾಥ, ಅಣವೀರ ಮತ್ತಿತರರು ಭಾಗವಹಿಸಿದ್ದರು.