ರಷ್ಯಾ ಮತ್ತು ಉಕ್ರೇನ್ ನಡುವೆ ಕಳೆದ ಐದಾರು ದಿನಗಳಿಂದ ನಡೆಯುತ್ತಿರುವ ಯುದ್ಧ ಜಾಗತಿಕವಾಗಿ ಎಲ್ಲ ಮಾರುಕಟ್ಟೆಗಳನ್ನು ಅಂಗಾತ ಮಲಗಿಸಿದೆ. ಅದರಲ್ಲೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗಗನಮುಖೀಯಾಗಿದೆ. ಗುರುವಾರ ಅಮೆರಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 119 ಡಾಲರ್ ಆಗಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡದೇ ವಿಧಿಯಿಲ್ಲ ಎಂಬ ಪರಿಸ್ಥಿತಿ ಉದ್ಭವವಾಗಿದೆ ಎಂಬುದು ತೈಲ ಕಂಪೆನಿಗಳ ಅಂಬೋಣ.
ಯುದ್ಧವೆಂಬುದು ಯಾರಿಗೂ ಬೇಕಾಗಿಲ್ಲವೆಂಬುದು ಸಾರ್ವಕಾಲಿಕ ಸತ್ಯ. ಇದು ಕೇವಲ ಜನರ ಜೀವಗಳನ್ನು ತೆಗೆಯುವುದಷ್ಟೇ ಅಲ್ಲ, ಬದುಕಿರುವವರನ್ನೂ ಜೀವಂತ ಶವವನ್ನಾಗಿ ಮಾಡಿಬಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ದೇಶವೂ ವ್ಯಾಪಾರ-ವಹಿವಾಟಿಗೆ ಪರಸ್ಪರ ಅವಲಂಬಿತವಾಗಿರುವುದರಿಂದ ಎಲ್ಲೋ ನಡೆಯುವ ಯುದ್ಧವೂ ಮತ್ತೆಲ್ಲೋ ಇನ್ನೊಂದು ದೇಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದಕ್ಕೆ ಪ್ರತ್ಯಕ್ಷ ಸಾಕ್ಷಿ, ಈಗ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ.
ಫೆ.27ರಂದು ಆರಂಭವಾಗಿರುವ ಈ ಯುದ್ಧದಿಂದಾಗಿ ಭಾರತದ ಷೇರುಮಾರುಕಟ್ಟೆಯಲ್ಲಿ ಈಗಾಗಲೇ ಅಲ್ಲೋಲಕಲ್ಲೋಲವಾಗಿದೆ. ಇನ್ನು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೂ, ಪ್ರತಿ ಬ್ಯಾರೆಲ್‌ಗೆ 100 ಡಾಲರ್ ದಾಟಿರುವುದರಿಂದ ತೈಲ ಕಂಪೆನಿಗಳಿಗೂ ಅಪಾರ ಪ್ರಮಾಣದ ನಷ್ಟವಾಗುತ್ತಿದೆ. ಬುಧವಾರದ ಮಾಧ್ಯಮ ವರದಿಗಳ ಪ್ರಕಾರ, ದೇಶೀಯ ತೈಲ ಕಂಪೆನಿಗಳಿಗೆ ಪ್ರತೀ ಲೀ. ಪೆಟ್ರೋಲ್ ಮತ್ತು ಡೀಸೆಲ್‌ಗೆ 5 ರಿಂದ 6 ರೂ. ನಷ್ಟವಾಗುತ್ತಿದೆ. ಹೀಗಾಗಿ ಒಮ್ಮೆ ಈಗ ನಡೆಯುತ್ತಿರುವ ಪಂಚರಾಜ್ಯ ಚುನಾವಣೆ ಮುಗಿದ ಮೇಲೆ ಪ್ರತೀ ಪೆಟ್ರೋಲ್ ಮತ್ತು ಡೀಸೆಲ್‌ಗೆ 9 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ. ಈ ರೀತಿ ಮಾಡಿದಲ್ಲಿ ಜನಸಾಮಾನ್ಯರ ಮೇಲೆ ಅಪಾರ ಪ್ರಮಾಣದ ಪರಿಣಾಮ ಬೀರುವುದು ಖಂಡಿತ.
ಕಳೆದ ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡಿರುವ ಅದೃಶ್ಯ ಶತ್ರು, ಕೊರೊನಾದಿಂದಾಗಿ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಈಗ ನಡೆಯುತ್ತಿರುವ ಯುದ್ಧ ಅದಕ್ಕಿಂತ ಹೆಚ್ಚಿನ ಪರಿಣಾಮ ಬೀರುತ್ತಿರುವುದು ಈಗಾಗಲೇ ಗೋಚರವಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಸ್ಥಗಿತ ಮಾಡಲು ನಮ್ಮ ಕೈಯಿಂದ ಸಾಧ್ಯವಿಲ್ಲ. ಆದರೆ, ಜನರ ಮೇಲಾಗುವ ಅಡ್ಡಪರಿಣಾಮಗಳನ್ನು ತಡೆಯುವ ಸಾಮರ್ಥ್ಯ ಸರ್ಕಾರಗಳಿಗಂತೂ ಇದ್ದೇ ಇದೆ.
ಹೀಗಾಗಿ ಪಂಚರಾಜ್ಯಗಳ ಚುನಾವಣೆ ಮುಗಿದ ಅನಂತರ ತೈಲ ಕಂಪೆನಿಗಳು ದಿಢೀರನೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡದಂತೆ ಕೇಂದ್ರ ಸರಕಾರ ತಡೆಯಬೇಕು. ಇದಕ್ಕೆ ಬದಲಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಬಕಾರಿ ಸುಂಕ ಮತ್ತು ವ್ಯಾಟ್ ಅನ್ನು ಕಡಿತ ಮಾಡಿ ಜನರ ನೆರವಿಗೆ ಬರಬೇಕು. ಇಲ್ಲದಿದ್ದರೆ ಕೊರೊನಾ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಪರೋಕ್ಷ ಹೊಡೆತದಿಂದ ತತ್ತರಿಸಿರುವ ಜನರಿಗೆ ಆರ್ಥಿಕವಾಗಿ ದೊಡ್ಡ ಪೆಟ್ಟು ಬೀಳುವುದು ಖಂಡಿತ. ಯಾವುದೇ ಕಾರಣಕ್ಕೂ ಈ ಅವಕಾಶ ಮಾಡಿಕೊಡದಿರುವುದು ಸರಕಾರದ ಜವಾಬ್ದಾರಿಯಾಗಿದೆ.