Advertisement

ತರಕಾರಿ ಸೇರಿ ಅಗತ್ಯ ವಸ್ತುಗಳ ದರ ಇಳಿಕೆಯಾಗಲಿ

12:25 AM Jun 27, 2023 | Team Udayavani |

ರಾಜ್ಯದಲ್ಲಿ ಮುಂಗಾರು ಮಳೆಯೂ ಸರಿಯಾಗಿ ಸುರಿಯುತ್ತಿಲ್ಲ. ಇದರ ನಡುವೆಯೇ ಅಗತ್ಯ ವಸ್ತುಗಳ ದರ ಗಗನಮುಖೀಯಾಗಿದ್ದು, ಜನ ಪರದಾಡುವಂತಾಗಿದೆ. ಅದರಲ್ಲೂ ಕೋಲಾರದಲ್ಲಿ ಅತೀ ಹೆಚ್ಚಾಗಿ ಬೆಳೆಯುವ ಟೊಮೆಟೊ ದರ ಪ್ರತೀ ಕೆ.ಜಿ.ಗೆ 100 ರೂ. ದಾಟುವ ಹಂತಕ್ಕೆ ಬಂದಿದ್ದು, ಜನ ಆತಂಕಕ್ಕೀಡಾಗಿದ್ದಾರೆ.

Advertisement

ಸದ್ಯ ರಾಜ್ಯದಲ್ಲಿ ಸರಿಯಾಗಿ ಮಳೆ ಬಾರದೇ ಇರುವುದರಿಂದ ರೈತಾಪಿ ಜನ ಅಕ್ಷರಶಃ ಆತಂಕಕ್ಕೀಡಾಗಿದ್ದು, ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಇನ್ನು ವಾರ ಅಥವಾ 15 ದಿನದಲ್ಲಿ ಮಳೆ ಬರದಿದ್ದರೆ, ರೈತರ ಆತಂಕ ಇನ್ನಷ್ಟು ಹೆಚ್ಚಲಿದೆ. ಮುಂಗಾರು ಕೈಕೊಟ್ಟಿರುವುದರಿಂದ ರಾಜ್ಯದ 30 ಜಿಲ್ಲೆಗಳಲ್ಲಿ ಮಳೆ ಕೊರತೆ ಕಾಡಿದೆ. ಇದರಲ್ಲಿ 11 ಜಿಲ್ಲೆಗಳನ್ನು ಹಳದಿ ವಲಯ ಎಂದೂ ಗುರುತಿಸಲಾಗಿದೆ. ಈ ಬಾರಿ ಮುಂಗಾರು ಮಳೆ ಕೇರಳ ಪ್ರವೇಶಿಸಿದ್ದೇ ತಡವಾಗಿ. ಆದರೆಬಿಪರ್‌ಜಾಯ್‌ ಚಂಡಮಾರುತದ ಕಾರಣದಿಂದ ಆಗಮನ ಇನ್ನಷ್ಟು ತಡವಾಯಿತು. ಈಗಲೂ ರಾಜ್ಯದಲ್ಲಿ ಸರಿಯಾಗಿ ಮಳೆಯಾಗುತ್ತಲೇ ಇಲ್ಲ. ಈಗಿನ ಪ್ರಕಾರ ರಾಜ್ಯದಲ್ಲಿ ಶೇ.61ರಷ್ಟು ಮಳೆ ಕೊರತೆ ಇದೆ. 16 ಜಿಲ್ಲೆಗಳು ಕೆಂಪು ವಲಯ ಮತ್ತು 4 ಜಿಲ್ಲೆಗಳು ಶ್ವೇತವಲಯದ ವ್ಯಾಪ್ತಿಯಲ್ಲಿವೆ.

ಸದ್ಯ ತರಕಾರಿಗಳ ದರ ಹೆಚ್ಚಾಗಲು ಮಳೆ ಕೊರತೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿರುವ ಸಂಗತಿ. ಟೊಮೆಟೊವನ್ನು ಬಾಂಗ್ಲಾದೇಶ ಸೇರಿ ಬೇರೆ ಬೇರೆ ರಾಜ್ಯಗಳಿಗೆ ರಫ್ತು ಮಾಡುತ್ತಿರುವುದರಿಂದ ಹೆಚ್ಚಿನ ಬೇಡಿಕೆ ಸಿಕ್ಕಿದೆ. ಹೀಗಾಗಿ ಅದರ ಬೇಡಿಕೆ ಹೆಚ್ಚಾಗಿದೆ. ಉಳಿದಂತೆ ಬದನೆಕಾಯಿ, ಕ್ಯಾರೆಟ್‌, ನುಗ್ಗೇಕಾಯಿ, ಹುರುಳಿಕಾಯಿ, ಹಸಿ ಮೆಣಸಿನಕಾಯಿ, ಗೆಡ್ಡೆ ಕೋಸು, ಬೆಳ್ಳುಳ್ಳಿ, ಈರುಳ್ಳಿ, ಆಲೂಗೆಡ್ಡೆ, ಹೀರೇಕಾಯಿ ಸೇರಿದಂತೆ ಹಲವಾರು ತರಕಾರಿಗಳ ಬೆಲೆಯೂ ಬಹಳಷ್ಟು ಏರಿಕೆಯಾಗಿದೆ.

ಅಂದರೆ ಇವುಗಳ ಬೆಲೆ ಹೆಚ್ಚು ಕಡಿಮೆ ಪ್ರತೀ ಕೆ.ಜಿ.ಗೆ 100 ರೂ.ಗಳ ಆಸುಪಾಸಿನಲ್ಲೇ ಇದೆ. ಇದಷ್ಟೇ ಅಲ್ಲ, ಅಕ್ಕಿ, ಬೇಳೆ ದರವೂ ಹೆಚ್ಚಾಗಿದೆ. ತೊಗರಿ ಬೇಳೆ, ಹೆಸರು ಬೇಳೆ, ಅಲಸಂದೆ, ಉದ್ದಿನ ಬೇಳೆ, ಜೀರಿಗೆ, ಮೆಣಸಿನಪುಡಿ, ದನಿಯಾ, ಕಾಳು ಮೆಣಸಿನ ಪುಡಿಯ ದರವೂ ಹೆಚ್ಚಾಗಿದೆ.

ಇನ್ನು ಸೋನಾಮಸೂರಿ ಸೇರಿದಂತೆ ಅಕ್ಕಿ ದರವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಒಟ್ಟಾರೆಯಾಗಿ ಈ ದರ ಏರಿಕೆಯ ದುನಿಯಾದಿಂದಾಗಿ ಜನಸಾಮಾನ್ಯರ ಬದುಕು ಅತಂತ್ರವಾಗಿದೆ.

Advertisement

ಮಳೆ ಸುರಿಯುವವರೆಗೆ ಈ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಸರಕಾರ ಬೇಳೆ ಕಾಳುಗಳು, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನು ಕಾಳಸಂತೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಲು ಬಿಡಬಾರದು. ಇಂಥವರ ಮೇಲೆ ನಿಗಾ ಇರಿಸಿ, ಬೇಡಿಕೆಗೆ ತಕ್ಕಂತೆ ಪೂರೈಕೆಯ ವ್ಯವಸ್ಥೆ ಮಾಡಬೇಕು. ಸಾಧ್ಯವಾದರೆ  ನೆರೆಯ  ರಾಜ್ಯಗಳಿಂದ ತರಿಸಿಕೊಳ್ಳವ ಬಗ್ಗೆಯೂ ಚಿಂತನೆ ನಡೆಸಬೇಕು. ಹಾಗೆಯೇ ತರಕಾರಿಯ ಬೆಲೆ ನಿಯಂತ್ರಣಕ್ಕಾಗಿ ನೆರೆ ರಾಜ್ಯಗಳಿಂದ ತರಿಸಿಕೊಳ್ಳಬಹುದು. ರಾಜ್ಯದಿಂದ ರಫ್ತಾಗುತ್ತಿರುವ ತರಕಾರಿ ಪ್ರಮಾಣವನ್ನು ಕಡಿಮೆ ಮಾಡುವತ್ತ ಗಮನ ಹರಿಸಬೇಕು.

ಈಗಾಗಲೇ ಬೇರೆ ಬೇರೆ ವಸ್ತುಗಳ ದರ ಹೆಚ್ಚಳದಿಂದ ಬಸವಳಿದಿರುವ ಜನರಿಗೆ ರಾಜ್ಯ ಸರಕಾರವೇ ಪರಿಹಾರ ಒದಗಿಸಬೇಕು.ದುಡಿದಿದ್ದನ್ನು ಕೇವಲ ಈ ವಸ್ತುಗಳ ಖರೀದಿಗಾಗಿಯೇ ವೆಚ್ಚ ಮಾಡುವಂಥ ಸ್ಥಿತಿ ತರಬಾರದು.

Advertisement

Udayavani is now on Telegram. Click here to join our channel and stay updated with the latest news.

Next