Advertisement

ಹಿಂದಿನ ಸರ್ಕಾರದ ಟೆಂಡರ್‌ ಸ್ಥಗಿತಗೊಳಿಸಿಲ್ಲ: ಸತೀಶ ಜಾರಕಿಹೊಳಿ

09:28 PM Jul 17, 2023 | Team Udayavani |

ವಿಧಾನ ಪರಿಷತ್ತು: ಹಿಂದಿನ ಸರ್ಕಾರದ ಅವಧಿಯಲ್ಲಾದ ಯಾವುದೇ ಟೆಂಡರ್‌ಗಳನ್ನು ಸ್ಥಗಿತಗೊಳಿಸಿಲ್ಲ. ಇನ್ನೂ ಟೆಂಡರ್‌ ಆಗದೆ ಇರುವ ಕಾಮಗಾರಿಗಳನ್ನು ಮಾತ್ರ ನಿಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು.

Advertisement

ಸೋಮವಾರ ನಿಯಮ 72ರಡಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಗೋವಿಂದರಾಜು, “ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲೇ ಹಿಂದಿನ ಅವಧಿಯಲ್ಲಿ ಟೆಂಡರ್‌ ಆಗಿದ್ದ ಆರು ಕಾಮಗಾರಿಗಳನ್ನು ತಡೆಹಿಡಿಯಲಾಗಿದೆ’ ಎಂದು ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಹಿಂದಿನ ಸರ್ಕಾರದ ಅವಧಿಯಲ್ಲಿ ಟೆಂಡರ್‌ ಪೂರ್ಣಗೊಂಡ ಯಾವ ಕಾಮಗಾರಿಗಳನ್ನೂ ಸ್ಥಗಿತಗೊಳಿಸಿಲ್ಲ. ಇನ್ನೂ ಟೆಂಡರ್‌ ಆಗದೆ ಉಳಿದಿರುವ ಯೋಜನೆಗಳನ್ನು ಮಾತ್ರ ತಡೆಹಿಡಿಯಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಸತೀಶ್‌ ಜಾರಕಿಹೊಳಿ, “ಸಾಮಾನ್ಯವಾಗಿ ಅನುದಾನ ಮತ್ತು ಕಾಮಗಾರಿಗಳ ನಡುವಿನ ಅಂತರದಿಂದ ಕಾಮಗಾರಿ ಪೂರ್ಣಗೊಂಡ ನಂತರವೂ ಬಿಲ್‌ ಬಾಕಿ ಪಾವತಿ ಬಾಕಿ ಉಳಿಯುತ್ತಿದೆ.
ಉದಾಹರಣೆಗೆ ಸಾವಿರ ಕೋಟಿ ಅನುದಾನ ಇದ್ದರೆ, ಕಾಮಗಾರಿ ಮೂರು ಸಾವಿರ ಕೋಟಿ ಮೊತ್ತದ್ದಾಗಿರುತ್ತದೆ. ಈ ಅಂತರವೇ ಸಮಸ್ಯೆಗೆ ಕಾರಣವಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಇನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳಿಗೆ 2023ರ ಮೇ ಅಂತ್ಯಕ್ಕೆ ಒಟ್ಟಾರೆ 8,506 ಕೋಟಿ ಮೊತ್ತದ ಬಿಲ್‌ ಪಾವತಿಗೆ ಬಾಕಿ ಇದೆ. 2023-24ನೇ ಸಾಲಿನ ಆಯವ್ಯಯದಲ್ಲಿ 9,111.20 ಕೋಟಿ ಅನುದಾನ ಒದಗಿಸಲಾಗಿದೆ. ಇದನ್ನು ಆಯಾ ವಲಯಗಳಲ್ಲಿ ಬಾಕಿ ಇರುವ ಬಿಲ್‌ಗ‌ಳನ್ನು ಆಧರಿಸಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ ಅವರು, ಕೋಲಾರದಲ್ಲಿ ವಿಭಾಗದಲ್ಲಿ 127 ಕೋಟಿ ಬಾಕಿ ಮೊತ್ತವನ್ನು ಪ್ರತಿ ತಿಂಗಳು ಹಂತ ಹಂತವಾಗಿ ತೀರುವಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ, ಯಾವೊಂದು ಕಾಮಗಾರಿ ಕೈಗೆತ್ತಿಕೊಂಡಾದ ಬರೀ ಗುತ್ತಿಗೆದಾರರು ಬರುವುದಿಲ್ಲ. ಅದರೊಂದಿಗೆ ಕಬ್ಬಿಣ, ಬಿಟುಮಿನ್‌ ಸೇರಿದಂತೆ ವಿವಿಧ ಪೂರೈಕೆದಾರರು, ಏಜೆನ್ಸಿಗಳು ಕೂಡ ಬರುತ್ತವೆ. ಅವರೆಲ್ಲರಿಗೂ ಪಾವತಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಬಾಕಿ ಉಳಿಸಿಕೊಳ್ಳದೆ, ಕಾಲ ಕಾಲಕ್ಕೆ ಪಾವತಿ ಮಾಡಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next