Advertisement

ಕರ್ನಾಟಕದಲ್ಲಿ ಮುನ್ನೆಚ್ಚರಿಕೆ ವ್ಯವಸ್ಥೆ ಕಳಪೆ

11:33 PM Jul 13, 2023 | Team Udayavani |

ಹೊಸದಿಲ್ಲಿ: ಮುಂಗಾರು ಮಳೆಯ ಪರಿಣಾಮ ದೇಶದ ಹಲವು ರಾಜ್ಯಗಳಲ್ಲಿ ಜಲಪ್ರವಾಹ ಕಾಣಿಸಿಕೊಂಡಿದೆ. ಉತ್ತರಭಾರತಕ್ಕೆ ಮಳೆಯ ಹೊಡೆತ ತೀವ್ರವಾಗಿ ಬಾಧಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ, ಹಿಮಾಚಲಪ್ರದೇಶ, ಉತ್ತರಾ­ಖಂಡ, ಹರಿಯಾಣ, ಪಂಜಾಬ್‌ ರಾಜ್ಯಗಳಲ್ಲಿ ಗರಿಷ್ಠ ಹಾನಿಯಾಗಿದೆ. ಸದ್ಯ ಮಳೆಯ ಪ್ರಮಾಣ ಕಡಿಮೆ­ಯಾಗಿದ್ದರೂ, ನೀರಿನ ಹರಿವು ಇನ್ನೂ ಕಡಿಮೆಯಾಗಿಲ್ಲ.

Advertisement

ಗಮನಾರ್ಹ ಸಂಗತಿಯೆಂದರೆ ದೇಶದ ಶೇ.72 ಜಿಲ್ಲೆಗಳು ಪ್ರವಾಹಕ್ಕೆ ಮುಖಾಮುಖೀಯಾಗುವ ಅಪಾಯ ಹೊಂದಿವೆ. ಆದರೆ ಈ ಪೈಕಿ ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ನೀಡುವ ಕೇಂದ್ರಗಳನ್ನು ಹೊಂದಿರುವ ಜಿಲ್ಲೆಗಳ ಪ್ರಮಾಣ ಶೇ.25 ಮಾತ್ರ. ಹಿಂದೆಯೂ ಪ್ರವಾಹವನ್ನೆದುರಿಸಿ ಅನುಭವವಿರುವ ಕರ್ನಾಟಕದಲ್ಲೂ ಇಂತಹ ಮುನ್ನೆಚ್ಚರಿಕೆ ವ್ಯವಸ್ಥೆಯಿಲ್ಲ ಎಂದು ಸಿಇಇಡಬ್ಲ್ಯು (ಕೌನ್ಸಿಲ್‌ ಆನ್‌ ಎನರ್ಜಿ ಎನ್ವಿರಾನ್‌ಮೆಂಟ್‌ ಆ್ಯಂಡ್‌ ವಾಟರ್‌) ತನ್ನ ವರದಿಯಲ್ಲಿ ಹೇಳಿದೆ. ಜನಸಂಖ್ಯೆಯ ಆಧಾರದಲ್ಲೇ ಹೇಳುವುದಾದರೆ ಭಾರತದ ಶೇ.66 ಮಂದಿ ಪ್ರವಾಹದ ವೇಳೆ ಮುನ್ನೆಚ್ಚರಿಕೆ ಪಡೆಯುವ ಸ್ಥಿತಿಯಲ್ಲಿಲ್ಲ, ಬರೀ ಶೇ.33 ಮಂದಿಗೆ ಇಂತಹದ್ದೊಂದು ಸೌಲಭ್ಯವಿದೆ.

ಯಾವ ರಾಜ್ಯಗಳಲ್ಲಿ ಹೇಗಿದೆ?: ಪ್ರಸ್ತುತ ಅತ್ಯಂತ ಅಪಾಯಕ್ಕೆ ತುತ್ತಾಗಿರುವ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಈ ವ್ಯವಸ್ಥೆ ಸರಿಯಾಗಿಲ್ಲ ಎನ್ನುವುದು ವಿಪರ್ಯಾಸವಾಗಿದೆ! ಅದೇ ಉತ್ತರಾಖಂಡದಲ್ಲಿ ಅತ್ಯುತ್ತಮ ವ್ಯವಸ್ಥೆಯಿದೆ. ಉತ್ತರಪ್ರದೇಶ, ಹಿಮಾಚಲಪ್ರದೇಶ, ಅಸ್ಸಾಂ, ಝಾರ್ಖಂಡ್‌, ಒಡಿಶಾ, ಪ.ಬಂಗಾಲ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಗೋವಾ, ಬಿಹಾರಕ್ಕೆ ಪ್ರವಾಹದ ಗರಿಷ್ಠ ಭೀತಿಯಿದೆ. ಬೇಸರದ ಸಂಗತಿಯೆಂದರೆ ಕರ್ನಾಟಕದಲ್ಲಿ ಕನಿಷ್ಠ ದರ್ಜೆಯ ಮುನ್ನೆಚ್ಚರಿಕೆ ವ್ಯವಸ್ಥೆಯಿದೆ. ಸಂತೋಷದ ಸಂಗತಿಯೆಂದರೆ ಈ ವ್ಯವಸ್ಥೆಯನ್ನು ಬಲಪಡಿಸಲು ಕರ್ನಾಟಕ ಬಲವಾದ ಹೆಜ್ಜೆಯನ್ನಿಟ್ಟಿದೆ ಎಂದು ವರದಿ ಹೇಳಿದೆ. ಇನ್ನು ತಮಿಳು­ನಾಡು ಕೂಡ ಉತ್ತಮ ವ್ಯವಸ್ಥೆ ಹೊಂದಿಲ್ಲ. ನೆರೆಯ ಕೇರಳ ಯಾವಾಗಲೂ ಪ್ರವಾಹದ ಭೀತಿಯನ್ನು ಎದುರಿಸುತ್ತದೆ. ಆದ್ದರಿಂದ ತನ್ನ ವ್ಯವಸ್ಥೆಯನ್ನೂ ಬಲವಾಗಿಟ್ಟುಕೊಂಡಿದೆ.

ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆ
ದೇಶದ ಉತ್ತರದ ರಾಜ್ಯಗಳಲ್ಲಿ ವಿಪರೀತ ಮಳೆ ಸುರಿಯುತ್ತಿದ್ದರೂ, ಕರ್ನಾಟಕದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಕರ್ನಾಟಕದ ಕೆಲವು ಭಾಗಗಳಲ್ಲಿ ಚೆನ್ನಾಗಿಯೇ ಮಳೆಯಾಗಿದೆ. ಒಟ್ಟಾರೆ ರಾಜ್ಯವನ್ನು ನೋಡಿದರೆ, ಕೊರತೆಯೇ ಇದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಗಾಗಿ ಜನ ಇನ್ನೂ ಕಾಯುತ್ತಿದ್ದಾರೆ.

ಹಿ.ಪ್ರದಲ್ಲಿ 256 ಮಂದಿಯ ರಕ್ಷಣೆ

Advertisement

ಹಿಮಾಚಲ ಪ್ರದೇಶದಲ್ಲಿ ಪ್ರವಾಸಿಗರ ರಕ್ಷಣ ಕಾರ್ಯ ಮುಂದು­ವರಿದಿದೆ. ಗುರುವಾರ ಚಂದೇರ್‌ತಾಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಎಲ್ಲ 256 ಮಂದಿಯನ್ನು ರಕ್ಷಿಸಲಾಗಿದೆ. ಇದುವರೆಗೆ 60 ಸಾವಿರ ಮಂದಿ­ಯನ್ನು ರಕ್ಷಿಸಲಾಗಿದೆ ಎಂದು ರಾಜ್ಯ ಸರಕಾರ ಹೇಳಿಕೊಂಡಿದೆ. ಇದರ ಹೊರತಾಗಿಯೂ ಕಸೋಲ್‌, ಖೀರ್‌ಗಂಗಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ 10 ಸಾವಿರ ಮಂದಿ ಸಿಕ್ಕಿಹಾಕಿಕೊಂಡಿದ್ದು, ಅವರನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ.

ಶಿಕ್ಷಣ ಸಂಸ್ಥೆಗಳಿಗೆ ರಜೆ ವಿಸ್ತರಣೆ

ಪಂಜಾಬ್‌ ಮತ್ತು ಹರಿಯಾಣಗಳಲ್ಲಿ ಕೂಡ ಪ್ರವಾಹದಿಂದ ಬಾಧಿತ­ವಾಗಿ­ರುವ ಪ್ರದೇಶಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ. ಜು.16ರವರೆಗೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಪಂಜಾಬ್‌ನಲ್ಲಿ 14, ಹರಿಯಾಣದಲ್ಲಿ 7 ಜಿಲ್ಲೆಗಳು ಪ್ರವಾಹದಿಂದ ತೊಂದರೆಗೆ ಒಳಗಾಗಿವೆ.

50 ಸಾವಿರ ಮಂದಿಗೆ ತೊಂದರೆ
ಉತ್ತರಾಖಂಡದಲ್ಲಿ ಮಳೆಯಿಂದಾಗಿ ಪ್ರಮುಖ ನದಿಗಳು ಉಕ್ಕೇರಿ ಹರಿಯುತ್ತಿದೆ. ಆ ರಾಜ್ಯದಲ್ಲಿ ಪ್ರವಾಹ ಸಂಬಂಧಿ ದುರಂತಗಳಿಗೆ ಐವರು ಅಸುನೀಗಿದ್ದಾರೆ. ಕೊಟದ್ವಾರ್‌ ಸಿಗದ್ದಿ ಎಂಬ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಹೋಗಿದೆ. ಇದರಿಂದಾಗಿ 50 ಸಾವಿರ ಮಂದಿಗೆ ತೊಂದರೆ ಉಂಟಾಗಿದೆ. ಈ ಸೇತುವೆ ಹರಿದ್ವಾರ, ಲಾಲ್‌ದಂಗ್‌ ಎಂಬ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖ ದಾರಿಯಾಗಿದೆ. ಚಮೋಲಿ ಜಿಲ್ಲೆಯಲ್ಲಿ ಬದರಿನಾಥಕ್ಕೆ ತೆರಳುವ ಹೆದ್ದಾರಿಯೂ ಭೂಕುಸಿತದಿಂದ ಬಂದ್‌ ಆಗಿತ್ತು.

300 ಮೈಲ್‌, 406 ಪ್ರಯಾಣಿಕ ರೈಲು ರದ್ದು

ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮಳೆ, ಪ್ರವಾಹದಿಂದಾಗಿ ಜು.7ರಿಂದ ಜು.15ರ ನಡುವೆ 300ಕ್ಕೂ ಅಧಿಕ ಮೈಲ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳನ್ನು ರದ್ದುಗೊಳಿಸಲಾಗಿದೆ. ಇದರ ಜತೆಗೆ 406 ಪ್ರಯಾಣಿಕ ರೈಲುಗಳನ್ನು ತಡೆಹಿಡಿಯಲಾಗಿದೆ. ಜತೆಗೆ ಕೆಲವೊಂದು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿರು­ವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next