ಧಾರವಾಡ: ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಸಮಸ್ತ ಪ್ರೌಢಶಾಲಾ ಗುರುಬಳಗದ ಪ್ರತಿಭಾ ಪುರಸ್ಕಾರ ಸಮಿತಿ ಹಾಗೂ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಅಭಿನಂದನಾ ಸಮಾರಂಭ ಜರುಗಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಸಮರ್ಥರಾಗಿ ಮುಗಿಸಿ, ಸಮಾಜ ಸೇವೆ ಮಾಡುವ ಜವಾಬ್ದಾರಿಯುತ ವ್ಯಕ್ತಿಗಳಾಗಬೇಕು. ವಿದ್ಯಾರ್ಥಿಗಳನ್ನು ದೇಶದ ಆಸ್ತಿಯನ್ನಾಗಿಸಬೇಕು. ವಿದ್ಯಾರ್ಥಿಗಳಿಗೆ ಕೀಳರಿಮೆ ಬರದಂತೆ ತಡೆಯಬೇಕು ಎಂದರು.
ಸೇವಾದಳದ ತಾಲೂಕಾಧ್ಯಕ್ಷ ಮಂಜುನಾಥ ತಿರ್ಲಾಪುರ ಮಾತನಾಡಿದರು. 2022ರ ಎಸ್ಸೆಸ್ಸೆಲ್ಸಿ ಸಮಗ್ರ ಫಲಿತಾಂಶ ಆಧರಿಸಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಐದು ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ವಿವಿಧ ಪ್ರೌಢಶಾಲೆಗಳ 49 ವಿದ್ಯಾರ್ಥಿಗಳಿಗೆ ಮತ್ತು ಫಲಿತಾಂಶದಲ್ಲಿ ಶೇ.100 ಸಾಧನೆ ಮಾಡಿದ 12 ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಹಾಗೂ ಪ್ರತಿ ವಿಷಯದಲ್ಲಿ ಶೇ.100 ಸಾಧನೆ ಮಾಡಿದ ವಿಷಯವಾರು ಶಿಕ್ಷಕರಿಗೆ ಹೀಗೆ ಒಟ್ಟು 154 ಪ್ರತಿಭೆಗಳನ್ನು ಗುರುತಿಸಿ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಅಳ್ನಾವರ ಎಜುಕೇಶನ್ ಸೊಸೈಟಿ ಅಧ್ಯಕ್ಷ ಎಂ.ಸಿ. ಹಿರೇಮಠ, ಪ್ರತಿಭಾ ಪುರಸ್ಕಾರ ಸಮಿತಿ ಸದಸ್ಯರು ಹಾಗೂ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷರರು, ವಿಷಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎಮ್. ಶೇಖ, ಶಿಕ್ಷಣ ಸಂಯೋಜಕ ಟಿ.ಎನ್. ಸೈಯದ್ ಹಾಗೂ ಸಮಿತಿ ಕಾರ್ಯದರ್ಶಿ ರೇವಣಸಿದ್ಧಪ್ಪ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಲೋಕೇಶಪ್ಪ ಇನ್ನಿತರರಿದ್ದರು.