Advertisement

ಅಕ್ರಮ ಮದ್ಯ ಮಾರಾಟ ತಡೆಯಿರಿ

04:24 PM Jan 29, 2018 | Team Udayavani |

ದೇವದುರ್ಗ: ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಎಎಸ್ಪಿ ಎಸ್‌.ಬಿ. ಪಾಟೀಲ ನೇತೃತ್ವದಲ್ಲಿ ರವಿವಾರ ದಲಿತರ
ಕುಂದು-ಕೊರತೆ ಸಭೆ ನಡೆಯಿತು. ಸಭೆಯಲ್ಲಿ ದಲಿತ ಮುಖಂಡರು ಅಕ್ರಮ ಮರಳು ಸಾಗಾಟ, ಮದ್ಯ ಮಾರಾಟ, ಮಹಾನ್‌ ನಾಯಕರ ಭಾವಚಿತ್ರಗಳಿಗೆ ಅಪಮಾನ ಮತ್ತು ಅಸ್ಪೃಶ್ಯತೆ ಜೀವಂತಿಕೆ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರು.

Advertisement

ಜಾಲಹಳ್ಳಿ ಪೊಲೀಸ್‌ ಠಾಣೆ ಪಕ್ಕದಲ್ಲೇ ಮದ್ಯದಂಗಡಿ ತೆರೆಯಲು ಪರವಾನಗಿ ನೀಡಲಾಗಿದೆ. ಅಮರಾಪುರ ಕ್ರಾಸ್‌ ಬಳಿ ಅಕ್ರಮ ಮರಳು ಸಾಗಣೆ ವಾಹನಗಳವರು ಹಾಡುಗಳನ್ನು ಹಾಕಿಕೊಂಡು ವೇಗವಾಗಿ ಚಲಿಸುವುದರಿಂದ ಜನರು ಭಯದಲ್ಲೇ ಸಂಚರಿಸುವಂತಾಗಿದೆ ಎಂದು ಮುಖಂಡ ರಂಗನಾಥ ಜಾಲಹಳ್ಳಿ, ಮರಿಲಿಂಗಪ್ಪ ವಕೀಲ ದೂರಿದರು.

ಯರಮಸಾಳ ಗ್ರಾಮದಲ್ಲಿ ಇತ್ತೀಚೆಗೆ ಡಾ| ಬಿ.ಆರ್‌. ಅಂಬೇಡ್ಕರ್‌ ನಾಮಫಲಕಕ್ಕೆ ಅಪಮಾನ ಮಾಡಿದ್ದು, ಇದಕ್ಕೆ
ಕಾರಣರಾದ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಎಸ್ಪಿ, ಅಂಬೇಡ್ಕರ್‌ ನಾಮಫಲಕಕ್ಕೆ ಅಪಮಾನ ಘಟನೆ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಆರೋಪಿಗಳು ಎಷ್ಟೇ ಪ್ರಭಾವಿ ಇದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

 ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಎಸ್‌ಸಿ, ಎಸ್‌ಟಿ ಜನಾಂಗದವರಿಗೆ ಸ್ಮಶಾನಕ್ಕೆ ಜಾಗವಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ್‌ ಸಭೆ ಗಮನಕ್ಕೆ ತಂದರು. ಈ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಶಾಲಾ-ಕಾಲೇಜು ಆವರಣದಲ್ಲಿ ಕಿಡಿಗೇಡಿಗಳು ರಾತ್ರಿ ಮದ್ಯ ಸೇವಿಸಿ ಬಾಟಲಿಗಳನ್ನು ಎಸೆದು ಹೋಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ಕೆಲ ಮುಖಂಡರು ಹೇಳಿದರು. ಈ ಕುರಿತು ಎಚ್ಚರ ವಹಿಸುವಂತೆ ಎಎಸ್ಪಿ ಪಾಟೀಲ್‌ ಸಿಪಿಐ ಹಾಗೂ ಪಿಎಸ್‌ಐಗೆ ಸೂಚಿಸಿದರು. ಚಿಂಚೋಡಿ, ಲಿಂಗದಹಳ್ಳಿ, ಅಮರಾಪುರ, ಜಾಲಹಳ್ಳಿ ಸೇರಿ ಇತರೆ ಗ್ರಾಮಗಳಲ್ಲಿ ದಲಿತರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. 

Advertisement

ಡಿವೈಎಸ್‌ಪಿ ಎಸ್‌.ಎಚ್‌. ಸುಭೇದಾರ, ಸಿಪಿಐ ಟಿ.ಸಂಜೀವಕುಮಾರ, ಪಿಎಸ್‌ಐ ಎಸ್‌.ಬಿ. ಹೊಸಳ್ಳಿ, ಮುಖಂಡರಾದ ಮಾನಪ್ಪ ಮೇಸ್ತ್ರಿ, ಶಿವಪ್ಪ ಬಲ್ಲಿದವ, ಮಲ್ಲಯ್ಯ ಕಟ್ಟಿಮನಿ, ರವಿ ಅಕ್ಕರಕಿ, ರಮೇಶ ರಾಮನಾಳ, ಮೇಲಪ್ಪ ಜಾಲಹಳ್ಳಿ, ಮರಿಯಪ್ಪ ಬಾಗೂರು, ಲಿಂಗಪ್ಪ ಬಲ್ಲಿದ, ದುರಗಪ್ಪ ಚಿಂಚೋಡಿ, ನಾಗರಾಜ ಶಾವಂತಗೇರಾ ಇತರರು ಇದ್ದರು.

ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಘಟನೆ ಸಮಸ್ಯೆ ಕುರಿತು ತಿಂಗಳ ಕೊನೆ ರವಿವಾರ ದಲಿತರ ಕುಂದು ಕೊರತೆ ಸಭೆ ನಡೆಸಲಾಗುತ್ತದೆ. ಮಹಾನ್‌ ನಾಯಕರ ನಾಮಫಲಕಗಳ ರಕ್ಷಣೆಗೆ ಪೊಲೀಸರ ಜೊತೆ ಸಮಾಜದ ಮುಖಂಡರು ಕೈಜೋಡಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು.
 ಎಸ್‌.ಬಿ. ಪಾಟೀಲ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಯಚೂರು.

Advertisement

Udayavani is now on Telegram. Click here to join our channel and stay updated with the latest news.

Next