Advertisement

ಪ್ರತಿಷ್ಠೆ, ಸೇಡು, ಮೈತ್ರಿ: ಕೈ ಸೋಲಿಗೆ ಕಾರಣ

10:57 PM Oct 01, 2019 | Lakshmi GovindaRaju |

ಬೆಂಗಳೂರು: ಕಾಂಗ್ರೆಸ್‌ ಪಕ್ಷದಲ್ಲಿನ ನಾಯಕರ ಪ್ರತಿಷ್ಠೆ, ವೈಯಕ್ತಿಕ ದ್ವೇಷ, ವಿರೋಧಿಗಳ ಜತೆ ಹೊಂದಾಣಿಕೆ ಮಾಡಿಕೊಂಡಿರುವುದು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋಲಲು ಕಾರಣವಾಯಿತು ಎಂದು ಕಾಂಗ್ರೆಸ್‌ ಸತ್ಯ ಶೋಧನಾ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

Advertisement

ಮಾಜಿ ಸಚಿವ ಬಸವರಾಜ್‌ ರಾಯರಡ್ಡಿ ನೇತೃತ್ವದ ಸತ್ಯ ಶೋಧನಾ ಸಮಿತಿ, ಮಂಗಳವಾರ ಪಕ್ಷದ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ಗೆ ವರದಿ ಸಲ್ಲಿಸಿದೆ. ಮೂರು ತಿಂಗಳು ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಜಿಲ್ಲಾಮಟ್ಟದ ಕಾರ್ಯಕರ್ತರು, ಬ್ಲಾಕ್‌ ಅಧ್ಯಕ್ಷರು, ಕೆಪಿಸಿಸಿ ಸದಸ್ಯರು, ಜಿಲ್ಲಾ ಮುಖಂಡರ ಅಭಿಪ್ರಾಯ ಸಂಗ್ರಹಿಸಿ 63 ಪುಟಗಳ 24 ವಿಷಯಗಳನ್ನೊಳಗೊಂಡ ವರದಿಯನ್ನು ಸಲ್ಲಿಕೆ ಮಾಡಿದೆ.

ಮೃದು ಧೋರಣೆ: ಕೋಲಾರದಲ್ಲಿ ಮುನಿಯಪ್ಪ ತಮ್ಮ ಸೋಲಿಗೆ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹಾಗೂ ಜಿಲ್ಲೆಯ ಪಕ್ಷದ ಶಾಸಕರು ಕಾರಣ ಎಂದು ದೂರು ಸಲ್ಲಿಸಿದ್ದಾರೆ. ಮುನಿಯಪ್ಪ ವಿರುದ್ಧ ರಮೇಶ್‌ ಕುಮಾರ್‌ ಹಾಗೂ ಕೋಲಾರ ಜಿಲ್ಲಾ ಕಾಂಗ್ರೆಸ್‌ ಸಮಿತಿಯವರು ದೂರು ನೀಡಿದ್ದು, ಹಿಂದಿನ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಮುನಿಯಪ್ಪ ಕಾರಣ ಎಂದಿದ್ದಾರೆ. ಹೀಗಾಗಿ, ಪಕ್ಷ ವಿರೋಧಿ ಚಟುವಟಿಕೆ ಆರೋಪ ಕೇಳಿ ಬಂದಿರುವ ನಾಯಕರನ್ನು ಕರೆದು ಮಾತುಕತೆ ನಡೆಸುವಂತೆ ಸಮಿತಿ ಸಲಹೆ ನೀಡಿದೆ.

ಸಿದ್ದರಾಮಯ್ಯಗೆ ಕ್ಲೀನ್‌ಚಿಟ್‌: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಬೆಂಬಲ ನೀಡಿರುವುದೇ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಸೋಲಿಗೆ ಕಾರಣ ಎಂಬ ಆರೋಪವನ್ನು ಸಮಿತಿ ತಳ್ಳಿ ಹಾಕಿದೆ. ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಸಮಿತಿ ವರದಿಯಂತೆ ಸಿದ್ದರಾಮಯ್ಯನವರು ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವರದಿಯ ಮುಖ್ಯಾಂಶಗಳು
* ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿಗಿಂತ ಶೇಕಡಾವಾರು ಹೆಚ್ಚಿನ ಮತಗಳನ್ನು ಪಡೆದಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆಲ್ಲಲು ವಿಫ‌ಲವಾಗಿದೆ. ಅದಕ್ಕೆ ಪಕ್ಷದ ನಾಯಕರಲ್ಲಿನ ಒಣ ಪ್ರತಿಷ್ಠೆ ಹಾಗೂ ಆಂತರಿಕ ತಿಕ್ಕಾಟವೇ ಕಾರಣ.

Advertisement

* ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜತೆಗಿನ ಮೈತ್ರಿ ಯಾವುದೇ ರೀತಿಯಿಂದ ಲಾಭವಾಗಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಶೇ.38, ಜೆಡಿಎಸ್‌ ಶೇ. 17, ಬಿಜೆಪಿ ಶೇ.36 ರಷ್ಟು ಮತ ಪಡೆದಿದ್ದವು. ಆದರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡರೂ ಬಿಜೆಪಿ ಶೇ. 51ರಷ್ಟು ಮತ ಪಡೆದಿದ್ದು, ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಶೇ. 17ರಷ್ಟು ಮತಗಳು ಬಿಜೆಪಿ ಪಾಲಾಗಿವೆ. ಜೆಡಿಎಸ್‌ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟವಾಗಿದೆ.

* ಒಂದೇ ಕುಟುಂಬದ ಇಬ್ಬರು, ಮೂವರಿಗೆ ಟಿಕೆಟ್‌ ನೀಡುವ ಬಗ್ಗೆ, ಸರ್ಕಾರಿ ನಿವೃತ್ತ ಅಧಿಕಾರಿಗಳಿಗೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡುವ ಬಗ್ಗೆ ಕಾರ್ಯಕರ್ತರ ವಲಯದಲ್ಲಿ ವಿರೋಧ ವ್ಯಕ್ತವಾಗಿದ್ದು, ಇದನ್ನು ಪರಿಗಣಿಸಬೇಕು.

* ಪಕ್ಷ ಪ್ರಸಕ್ತ ಸನ್ನಿವೇಶಕ್ಕೆ ಬದಲಾವಣೆ ಮಾಡಿಕೊಳ್ಳುವ ಅಗತ್ಯತೆ ಇದೆ. ಪಕ್ಷದ ಎನ್‌ಎಸ್‌ಯುಐ, ಯುವ ಘಟಕ, ಸೇವಾದಳ, ಸಾಮಾಜಿಕ ಜಾಲತಾಣ ಘಟಕಗಳ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎನ್‌ಎಸ್‌ಯುಐಯನ್ನು ಬಿಜೆಪಿಯ ಅಂಗವಾಗಿರುವ ಎಬಿವಿಪಿ ಮಾದರಿಯಲ್ಲಿ ಬಲಪಡಿಸಬೇಕು. ಸಾಮಾಜಿಕ ಜಾಲತಾಣ ಬಳಕೆಗೂ ಬಿಜೆಪಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಬೇಕು.

* ಯುವ ಕಾಂಗ್ರೆಸ್‌ ಘಟಕದ ಚುನಾವಣೆ ಪ್ರಕ್ರಿಯೆಯನ್ನು ಕೈ ಬಿಟ್ಟು ನೇರ ನೇಮಕ ಪ್ರಕ್ರಿಯೆ ನಡೆಸಬೇಕು. ಪಕ್ಷದ ಪದಾಧಿಕಾರಿಗಳ ನೇಮಕ ವಿಷಯದಲ್ಲಿ ಶಿಫಾರಸ್ಸುಗಳಿಗೆ ಪ್ರಾಧಾನ್ಯತೆ ನೀಡದೆ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಿದರೆ, ಪಕ್ಷ ಸಂಘಟಿಸಲು ಹೆಚ್ಚು ಅನುಕೂಲವಾಗುತ್ತದೆ.

* ಸದಾಶಿವ ಆಯೋಗದ ವರದಿ ಜಾರಿಯಾಗದ ಹಿನ್ನೆಲೆಯಲ್ಲಿ ದಲಿತರ ನಡುವೆ ಗೊಂದಲ ಉಂಟಾಗಿದ್ದು, ಅದು ಕಾಂಗ್ರೆಸ್‌ ಸೋಲಿಗೂ ಕಾರಣವಾಗಿದೆ. ಅಲ್ಪಸಂಖ್ಯಾತರು ಕಾಂಗ್ರೆಸ್‌ ಪರವಾಗಿಯೇ ಮತ ಚಲಾಯಿಸಿದ್ದರೂ, ಅವರಿಗೆ ಜನಸಂಖ್ಯಾ ಆಧಾರದಲ್ಲಿ ಟಿಕೆಟ್‌ ನೀಡುವ ಕಡೆಗೆ ಗಮನ ಹರಿಸಬೇಕು.

* ಒಕ್ಕಲಿಗರ ವಿಷಯದಲ್ಲಿ ಪಕ್ಷ ನಿರ್ಲಕ್ಷ್ಯ ಮಾಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಿರುವುದು ಕಾಂಗ್ರೆಸ್‌ ಪಕ್ಷ. ಆದರೆ, ಅದನ್ನು ಸರಿಯಾಗಿ ಪ್ರೊಜೆಕ್ಟ್ ಮಾಡಿಕೊಂಡಿಲ್ಲ. ಬ್ರಾಹ್ಮಣ ಅಭಿವೃದ್ದಿ ನಿಗಮವನ್ನು ಕಾಂಗ್ರೆಸ್‌ ಮಾಡಿದ್ದರೂ, ಸರಿಯಾಗಿ ಪ್ರಚಾರ ಮಾಡಿಕೊಳ್ಳಲು ವಿಫ‌ಲವಾಗಿದೆ.

* ಪ್ರತಿ ಚುನಾವಣೆಗೂ ಕೋಟ್ಯಂತರ ರೂ.ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂವಿಧಾನ ಪರಿಣಿತರ ಜೊತೆ ಚರ್ಚಿಸಿ ಚುನಾವಣಾ ವ್ಯವಸ್ಥೆಯಲ್ಲಿ ಆರೋಗ್ಯಕರ ಬದಲಾವಣೆ ತರಲು ಶ್ರಮಿಸಬೇಕು.

* ಮೈತ್ರಿ ಇದ್ದಾಗ್ಯೂ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಸಂಘಟಿತ ಹೋರಾಟ ಮಾಡಲಿಲ್ಲ.

* ಸರ್ಕಾರವಿದ್ದಾಗ ನಿಗಮ, ಮಂಡಳಿಗಳಲ್ಲಿ ಹಿಂಬಾಲಕರಿಗೆ ಆದ್ಯತೆ ನೀಡಲಾಯಿತು.

* ಯುವ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್‌, ವಿದ್ಯಾರ್ಥಿ ಕಾಂಗ್ರೆಸ್‌ಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ.

* ಸಂಸತ್‌ ಸದಸ್ಯರು, ಶಾಸಕರು ಪ್ರತಿ ತಿಂಗಳೂ ಕೆಪಿಸಿಸಿಗೆ ದೇಣಿಗೆ ನೀಡುವುದನ್ನು ಕಡ್ಡಾಯಗೊಳಿಸಬೇಕು.

* ಕೆಲವು ನಾಯಕರು ರಿಪಬ್ಲಿಕ್‌ ಧೋರಣೆ ತೋರಿಸುತ್ತಿರುವುದು ಪಕ್ಷಕ್ಕೆ ಹೊಡೆತ ನೀಡಿತು.

* ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರ ಕೊರತೆ ಕಾಣುತ್ತಿದ್ದು, ಬೂತ್‌ ಮಟ್ಟದಲ್ಲಿ ಸಂಘಟನೆ ಸರಿಯಾಗಿ ಇಲ್ಲ.

* ಹಲವಾರು ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರು ವಿರೋಧಿಗಳೊಂದಿಗೆ ಕೈ ಜೋಡಿಸಿದ್ದು, ಸೋಲಿಗೆ ಕಾರಣವಾಯಿತು.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಮತ ಗಳಿಕೆ
ಕಾಂಗ್ರೆಸ್‌  - 38.14%
ಬಿಜೆಪಿ – 36.34%
ಜೆಡಿಎಸ್‌ -18.3 % ಮತ

ಲೋಕಸಭೆ ಚುನಾವಣೆಯಲ್ಲಿ ಪಡೆದ ಮತ
ಕಾಂಗ್ರೆಸ್‌ – 31.88%
ಬಿಜೆಪಿ – 51.40%
ಜೆಡಿಎಸ್‌ – 9.68%
ಇತರರು – 6.83%

ರಾಹುಲ್ ರಾಜೀನಾಮೆ, ಕುಟುಂಬ ರಾಜಕಾರಣ, ನಿವೃತ್ತ ಅಧಿಕಾರಿಗಳನ್ನು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಕಾರ್ಯಕರ್ತರಿಂದ ಅಭಿಪ್ರಾಯ ಬಂದಿದೆ. ಸೊಲಿನ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ಸಂಪಾದಕೀಯವನ್ನು ಗಂಭೀರವಾಗಿ ಪರಿಗಣಿಸಿ ವರದಿಯಲ್ಲಿ ಅಳವಡಿಸಲಾಗಿದೆ.
-ವಿ.ಆರ್‌.ಸುದರ್ಶನ್‌, ಸತ್ಯ ಶೋಧನಾ ಸಮಿತಿ ಸದಸ್ಯ

ಪಕ್ಷದ ಸೋಲಿಗೆ ಮೈತ್ರಿ, ಲಿಂಗಾಯತ ಧರ್ಮ ವಿಚಾರ, ಪಕ್ಷದ ವಿವಿಧ ಘಟಕಗಳು ಸಕ್ರೀಯವಾಗಿ ಕಾರ್ಯ ನಿರ್ವಹಿಸದಿರುವುದು ಕಂಡು ಬಂದಿದೆ. ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಕಾಂಗ್ರೆಸ್‌ ಬದಲಾಗಲು ಶಿಫಾರಸ್ಸುಗಳನ್ನು ಮಾಡಿದ್ದೇವೆ.
-ಬಸವರಾಜ್‌ ರಾಯರಡ್ಡಿ, ಸತ್ಯ ಶೋಧನಾ ಸಮಿತಿ ಸಂಚಾಲಕ

ಸಮಿತಿ ಚುನಾವಣಾ ಸೋಲಿಗೆ ಕಾರಣಗಳೇನು ಎಂದು ಗಂಭೀರವಾಗಿ ಅಧ್ಯಯನ ಮಾಡಿ ವರದಿ ನೀಡಿದೆ. ವರದಿಯ ಶಿಫಾರಸುಗಳ ಕುರಿತು ಹಿರಿಯ ನಾಯಕರ ಜತೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next