Advertisement

ವಿಶೇಷ ಅಧಿವೇಶನಕ್ಕೆ ಪ್ರತಿಷ್ಠೆಯ ಅಡ್ಡಗಾಲು

06:00 AM Oct 12, 2017 | Team Udayavani |

ಬೆಂಗಳೂರು: ವಿಧಾನಸಭೆ ವಜ್ರಮಹೋತ್ಸವ ವಿಶೇಷ ಅಧಿವೇಶನದ ದಿನಾಂಕ ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರ
ಮತ್ತು ವಿಧಾನಸಭೆ ಸಚಿವಾಲಯದ ನಡುವೆ ತಿಕ್ಕಾಟ ಆರಂಭವಾಗಿದೆ.

Advertisement

ವಿಶೇಷ ಅಧಿವೇಶನ ಹಾಗೂ ಕಾರ್ಯಕ್ರಮ ನಡೆಸುವ ಬಗ್ಗೆ ಅನುಮೋದನೆ ಕೋರಿ ವಿಧಾನಸಭೆ ಸಚಿವಾಲಯ ಕೊಟ್ಟಿದ್ದ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ತಡೆ ಹಿಡಿದಿದೆ. ಸರ್ಕಾರದ ಗಮನಕ್ಕೆ ತಾರದೇ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ದಿನಾಂಕವನ್ನು ನಿಗದಿ ಮಾಡಿರುವ ವಿಧಾನಸಭೆ ಸ್ಪೀಕರ್‌ ಮತ್ತು ಮೇಲ್ಮನೆ ಸಭಾಪತಿಗಳ ವಿರುದ್ಧ ಅಸಮಾಧಾನಗೊಂಡು ಸಂಪುಟ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್‌ ಕೋಳಿವಾಡ ಅವರು, ಸರ್ಕಾರವೇ ತೀರ್ಮಾನ ಮಾಡುತ್ತದೆ ಎನ್ನುವುದಾದರೆ ಅವರೇ
ಬಂದು ಅಧಿವೇಶನ ನಡೆಸಲಿ. ಯಾರೋ ಏನೋ ಹೇಳಿದ್ದಕ್ಕೆ ನಾನು ಉತ್ತರ ಕೊಡಲ್ಲ. ಮುಖ್ಯಮಂತ್ರಿಗೆ ಗೊತ್ತಿಲ್ಲ ಅಂದ್ರೆ,
ಅವರೇ ಅಧಿವೇಶನ ಕ್ಯಾನ್ಸಲ್‌ ಮಾಡಲಿ ಎಂದು ಹೇಳಿದ್ದಾರೆ.

 ನ.13ರಿಂದ ಬೆಳಗಾವಿ ಅಧಿವೇಶನ: ಈ ಮಧ್ಯೆ, ವಿಧಾನಸೌಧ ವಜ್ರ ಮಹೋತ್ಸವ ಮತ್ತು ಎರಡು ದಿನದ ವಿಶೇಷ ಅಧಿವೇಶನದ ಖರ್ಚಿನ ಬಾಬ್ತು 28 ಕೋಟಿ ರೂ. ಅನುಮೋದನೆಗಾಗಿ ಸಲ್ಲಿಸಿದ್ದ ಕಡತಕ್ಕೆ ಒಪ್ಪಿಗೆ ನೀಡದೇ ಸಂಪುಟ ಸಭೆ ತಡೆ ಹಿಡಿದು ನ. 13 ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ನಿರ್ಣಯ ಕೈಗೊಂಡಿತು.

ಅ. 25, 26 ರಂದು ಎರಡು ದಿನ ವಿಶೇಷ ಅಧಿವೇಶನ ನಡೆಸಲು ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹಾಗೂ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರ ಮೂರ್ತಿ ದಿನಾಂಕ ನಿಗದಿ ಮಾಡಿ ರಾಷ್ಟ್ರಪತಿಗೆ ಆಹ್ವಾನ ನೀಡಿದ್ದು, ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ 28 ಕೋಟಿ ರೂ. ವೆಚ್ಚದ ಔಚಿತ್ಯವನ್ನು ಪ್ರಶ್ನಿಸಿದರು ಎಂದು ಹೇಳಲಾಗಿದೆ.

Advertisement

ಆದರೆ, ಈಗಾಗಲೇ ದಿನಾಂಕ ನಿಗದಿ ಮಾಡಿ ರಾಷ್ಟ್ರಪತಿಯವರಿಗೆ ಅಹ್ವಾನ ನೀಡಿದ್ದು, ಅವರೂ ಕೂಡ ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿಕೊಂಡಿರುವುದರಿಂದ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ವಿಶೇಷ ಅಧಿವೇಶನ ರದ್ದುಗೊಳಿಸುವ ಬದಲು ಈಗಾಗಲೇ ನಿಗದಿಯಾಗಿರುವ ದಿನಾಂಕದಂತೆ ವಜ್ರಮಹೋತ್ಸವ ಕಾರ್ಯಕ್ರಮ ನಡೆಸುವ ಕುರಿತಂತೆ ಮತ್ತೂಂದು ಸಂಪುಟ ಸಭೆ ನಡೆದಾಗ ಅದಕ್ಕೆ ಒಪ್ಪಿಗೆ ನೀಡಲು ಸರ್ಕಾರ ಆಲೋಚಿಸಿದೆ ಎಂದು ತಿಳಿದು ಬಂದಿದೆ.

ಆದರೆ, ಇದಕ್ಕೂ ಮೊದಲು ಖರ್ಚು ವೆಚ್ಚದ ಕುರಿತಂತೆ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹಾಗೂ ಸಭಾಪತಿ ಡಿ.ಎಚ್‌. ಶಂಕರ ಮೂರ್ತಿಯೊಂದಿಗೆ ಮಾತುಕತೆ ನಡೆಸಲು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

ಸರ್ಕಾರದ ಗಮನಕ್ಕೆ ತಾರದೇ ನಿರ್ಧರಿಸಿದ್ದೇವೆ ಎಂಬ ಬಗ್ಗೆ ಮುಖ್ಯಮಂತ್ರಿಗೆ ಕೇಳಿ ಅವರೇ ಹೇಳುತ್ತಾರೆ. ಸರ್ಕಾರವೇ ತೀರ್ಮಾನ ಮಾಡುತ್ತದೆ ಎನ್ನುವುದಾದರೆ ಅವರೇ ಬಂದು ಅಧಿವೇಶನ ನಡೆಸಲಿ. ಯಾರೋ ಏನೋ ಹೇಳಿದ್ದಕ್ಕೆ ನಾನು ಉತ್ತರ ಕೊಡಲ್ಲ. ಮುಖ್ಯಮಂತ್ರಿಗೆ ಗೊತ್ತಿಲ್ಲ ಅಂದ್ರೆ, ಅವರೇ ಅಧಿವೇಶನ ಕ್ಯಾನ್ಸಲ್‌ ಮಾಡಲಿ.
– ಕೆ.ಬಿ. ಕೋಳಿವಾಡ, ವಿಧಾನಸಭಾಧ್ಯಕ್ಷ

ಅಕ್ಟೋಬರ್‌ 25, 26 ರಂದು ವಿಶೇಷ ಅಧಿವೇಶನ ಕರೆಯುವ ಕುರಿತು ಇನ್ನೂ ಸಂಪುಟದಲ್ಲಿ ತೀರ್ಮಾನ ಆಗಿಲ್ಲ. ಸಭಾಧ್ಯಕ್ಷರು ಈಗಾಗಲೇ ದಿನಾಂಕ ನಿಗದಿ ಮಾಡಿ ರಾಷ್ಟ್ರಪತಿಯವರಿಗೂ ಆಹ್ವಾನ ನೀಡಿದ್ದಾರೆ. ಸಂಪುಟದಲ್ಲಿ ತೀರ್ಮಾನವಾದ ನಂತರ ಅಧಿಕೃತವಾಗುತ್ತದೆ. ಹೀಗಾಗಿ ಪ್ರಸ್ತಾವನೆ ಸಲ್ಲಿಸಲು ವಿಧಾನಸಭಾ ಕಾರ್ಯದರ್ಶಿಗೆ ಸೂಚಿಸಲಾಗುವುದು.
–  ಟಿ.ಬಿ. ಜಯಚಂದ್ರ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next