ದಾವಣಗೆರೆ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಮಂಜುಳಾ ಟಿ.ವಿ. ರಾಜು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಅಶ್ವತಿ ಪರಸ್ಪರ ನೇರ ವಾಗ್ಧಾಳಿ, ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ, ವಾದ- ಪ್ರತಿವಾದ, ಕಾಂಗ್ರೆಸ್ ಸದಸ್ಯರ ಸಭಾತ್ಯಾಗ, ಗೊಂದಲದ ಗೂಡಾಗಿತ್ತು.
ಕೃಷಿ ಇಲಾಖೆಗೆ ಸಂಬಂಧಿಸಿದ ಚರ್ಚೆ ವೇಳೆ ಬೇಲಿಮಲ್ಲೂರು ಕ್ಷೇತ್ರದ ಬಿಜೆಪಿ ಸದಸ್ಯ ಸಿ. ಸುರೇಂದ್ರನಾಯ್ಕ, 2015-16ನೇ ಸಾಲಿನಲ್ಲಿ ಹೊನ್ನಾಳಿ ತಾಲೂಕಿನ ಅರಕೆರೆ, ನರಸಾಪುರ ಸುತ್ತಮುತ್ತಲ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಬಾಳೆ ಹಾಳಾಗಿ ಎರಡು ವರ್ಷ ಕಳೆದರೂ ಪರಿಹಾರ ಬಂದಿಲ್ಲ. ಮೊದಲೇ ರೈತರು ಸಾಲ-ಸೋಲದಿಂದ ತೋಟ ಮಾಡಿರುತ್ತಾರೆ. ಒಂದು ಕಡೆ ಬೆಳೆ ಇಲ್ಲ ಮತ್ತೂಂದು ಕಡೆ ಪರಿಹಾರವೂ ಇಲ್ಲ ಎಂದರೆ ರೈತರು ಏನು ಮಾಡಬೇಕು. ಪರಿಹಾರ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು.
ಸಂಸದ ಸಿದ್ದೇಶ್ವರ್, ಆಗಿನ ಶಾಸಕರಾದಿಯಾಗಿ ಅರಕೆರೆ, ನರಸಾಪುರ ಸುತ್ತಮುತ್ತಲ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಬಾಳೆ ಹಾಳಾದ ಪ್ರದೇಶಕ್ಕೆ ಭೇಟಿ ನೀಡಿದ್ದು ನಿಜ. ಎರಡು ವರ್ಷವಾದರೂ ಪರಿಹಾರ ಬಂದಿಲ್ಲ. ಜಿಲ್ಲಾಧಿಕಾರಿಗಳು ಪರಿಹಾರಕ್ಕೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಜಿಪಂ ಅಧಿಕಾರಿಗಳು ಕೇಂದ್ರದೊಂದಿಗೆ ನೇರ ಸಂಪರ್ಕ ಮಾಡುವಂತಿಲ್ಲ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಟಿ.ಆರ್. ವೇದಮೂರ್ತಿ ಸಮಜಾಯಿಷಿ ನೀಡಿದರು.ಆಗ, ಕೇಂದ್ರ ಸರ್ಕಾರ ಪರಿಹಾರ ಕೊಡಬೇಕು. ಕೊಟ್ಟಿಲ್ಲ…. ಎಂಬುದಾಗಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಅಶ್ವತಿ ಹೇಳಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಸಿಇಒ ನೇರವಾಗಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವುದು ಸರಿ ಅಲ್ಲ ಎಂದು ಜೋರು ಧ್ವನಿಯಲ್ಲಿ ಹೇಳಿದರು. ಕೇಂದ್ರ ಸರ್ಕಾರದ ಮೇಲೆ ನೇರ ಆರೋಪ ಮಾಡಿಲ್ಲ. ಇರುವ ಸತ್ಯವನ್ನು ಹೇಳಿದ್ದೇನೆ ಎಂದು ಅಶ್ವತಿ ಸಮಜಾಯಿಷಿ ನೀಡಿದರು.
ಒಬ್ಬ ಶಾಸಕರು ಮಾತನಾಡುವಾಗ ಮಧ್ಯೆ ಮಾತನಾಡುವುದು ಸರಿ ಅಲ್ಲ. ಜನಪ್ರತಿನಿಧಿಗಳಿಗೆ ಮೊದಲು ಗೌರವ ಕೊಡುವುದು ಕಲಿಯಿರಿ. ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೇ ಯಾವ ರೀತಿ ಮಾತನಾಡುತ್ತೀರಾ…., ಸದಸ್ಯರಿಗೆ ಹೇಗೆ ಮಾತನಾಡುತ್ತೀರಿ…. ಒಂದು ಫೈಲ್ ಕ್ಲಿಯರ್ ಆಗಲು ಗ್ರಾಮ ಪಂಚಾಯತ್ ಸದಸ್ಯರು ಎಷ್ಟು ಬಾರಿ ಅಲೆಯಬೇಕು…. ಮೇಲಾಗಿ ನೀವು ಕಚೇರಿಯಲ್ಲಿ ಇರುವುದೇ ಇಲ್ಲ ಎಂಬುದು ಸೇರಿ ಎಲ್ಲವೂ ಗೊತ್ತು. ಮೊದಲು ಜನಪ್ರತಿನಿಧಿಗಳಿಗೆ ಗೌರವ ಕೊಡುವುದನ್ನು, ಹೇಗೆ ಮಾತನಾಡಬೇಕು ಎಂಬುದನ್ನು ಕಲಿಯಿರಿ ಎಂದು ರೇಣುಕಾಚಾರ್ಯ ಹೇಳಿದರು.
ಅಧ್ಯಕ್ಷರಿಗೆ ಗೌರವ ನೀಡುತ್ತೇನೆ. ಎಲ್ಲರೊಂದಿಗೆ ಗೌರವದಿಂದಲೇ ಮಾತನಾಡುತ್ತೇನೆ. ಗೌರವ ಎಂಬುದು ಎರಡೂ ಕಡೆಯಿಂದ ಬರಬೇಕು. ತಾವು ಸಹ ಒಬ್ಬ ಅಧಿಕಾರಿಯೊಂದಿಗೆ ಗೌರವದಿಂದ ಮಾತನಾಡಬೇಕು. ಎಲ್ಲದರಂತೆ ಆರೋಪ ಮಾಡುವುದು ಸರಿಯಲ್ಲ. ನಿರ್ದಿಷ್ಟವಾಗಿ ಹೇಳಿದರೆ ಉತ್ತರ ನೀಡುತ್ತೇನೆ ಎಂದು ಸಿಇಒ ಅಶ್ವತಿ ಹೇಳಿದರು.
ಜನರು ನಮಗೆ ಕೆಲಸ ಮಾಡಲು ಆಯ್ಕೆ ಮಾಡಿದ್ದಾರೆ. ನಾವು ದರ್ಪ ಮಾಡುವರಲ್ಲ. ಜನರ ಸೇವೆ ಮಾಡುವರು. ಜನರ ಸಂಕಷ್ಟದ ಬಗ್ಗೆ ಹೇಳುತ್ತೇವೆ. ಅದಕ್ಕೆ ನೇರವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿ ಅಲ್ಲ. ರಾಜ್ಯ ಸರ್ಕಾರ ಕೇಂದ್ರಕ್ಕೆ ಫೈಲ್ ಕಳಿಸಿರುವುದನ್ನು ನೀವೇನಾದರೂ ನೋಡಿದ್ದೀರಾ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.
ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ಇರುತ್ತದೆ. ಇದೇ ಜಿಲ್ಲೆಯವರು ತೋಟಗಾರಿಕಾ ಇಲಾಖೆ ಸಚಿವರೂ ಆಗಿದ್ದರು. ಪರಿಹಾರ ಕೊಡಿಸಬಹುದಿತ್ತು. ರಾಜ್ಯ ಸರ್ಕಾರ ನೇರವಾಗಿ ಕೇಂದ್ರಕ್ಕೆ ಯಾವುದೇ ಕಡತ ಕಳಿಸಿಕೊಡುವಂತಿಲ್ಲ ಎಂಬುದು ಸಚಿವರಾಗಿ ಕೆಲಸ ಮಾಡಿರುವ ನನಗೆ ಚೆನ್ನಾಗಿ ಗೊತ್ತು ಎಂದು ರೇಣುಕಾಚಾರ್ಯ ಹೇಳಿದ್ದಕ್ಕೆ ಹದಡಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಜಿ.ಸಿ. ನಿಂಗಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಇಲ್ಲಿ ಪಕ್ಷ ರಾಜಕೀಯ ಬೇಡ ಎಂದು ಏರುಧ್ವನಿಯಲ್ಲಿ ಹೇಳಿದರು. ಬಿಜೆಪಿ ಸದಸ್ಯರು ರೇಣುಕಾಚಾರ್ಯ ಪರ ನಿಂತರು. ಆಗ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಗೊತ್ತಾಗದಷ್ಟು ಗೊಂದಲಮಯ ವಾತಾವರಣ ನಿರ್ಮಾಣವಾಯಿತು.
ಇದ್ದಕ್ಕಿದ್ದಂತೆ ಸಿಇಒ ಅಶ್ವತಿ ಮೌನಕ್ಕೆ ಶರಣಾದರು. ಇಷ್ಟೆಲ್ಲಾ ಹೇಳಿದರೂ ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂಬುದಾಗಿ ಒಂದು ಮಾತು ಹೇಳುತ್ತಿಲ್ಲ ಎಂದು ರೇಣುಕಾಚಾರ್ಯ ಹರಿಹಾಯ್ದರು. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್. ಮಹೇಶ್, ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ
ಎಂದು ಹೇಳಿ ಮೇಡಂ ಎಂದು ಒತ್ತಾಯಿಸಿದರೂ ಸಿಇಒ ಜಪ್ಪಯ್ಯ ಅನ್ನಲಿಲ್ಲ.
ವಾದ- ಪ್ರತಿವಾದ ತಾರಕಕ್ಕೇರುವ ಹಂತದಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಶಾಸಕ ಎಸ್. ಎ. ರವೀಂದ್ರನಾಥ್ ಸಭೆಗೆ ಆಗಮಿಸುತ್ತಿದ್ದಂತೆ ಸದಸ್ಯರು ಸುಮ್ಮನಾದರು.
ಕಾಂಗ್ರೆಸ್ ಸದಸ್ಯರ ಸಭಾತ್ಯಾಗ: ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್. ಮಹೇಶ್ ಮಾತನಾಡಿ, ರೈತರು ಸಂಕಷ್ಟದಲ್ಲಿರುವಾಗ 24 ಕೋಟಿ ವೆಚ್ಚದ ಗಾಜಿನಮನೆಯ ಅವಶ್ಯಕತೆ ಇತ್ತಾ?. ಅದನ್ನ ಕಟ್ಟಿ ಒಂದು ವರ್ಷವೂ ಆಗಿಲ್ಲ. ಆಗಲೇ ಸೋರುತ್ತಿದೆ ಎನ್ನುತ್ತಿದ್ದಂತೆ ಕಾಂಗ್ರೆಸ್ ಸದಸ್ಯರಾದ ಜಿ.ಸಿ. ನಿಂಗಪ್ಪ, ಕೆ.ಎಚ್. ಓಬಳಪ್ಪ, ಕೆ.ಎಚ್. ಪರಶುರಾಮಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಾಮಾನ್ಯಸಭೆಯಲ್ಲಿ ಪಕ್ಷ ರಾಜಕಾರಣ ಮಾಡಲಾಗುತ್ತದೆ. ರವೀಂದ್ರನಾಥ್ ತೋಟಗಾರಿಕಾ ಸಚಿವರಾಗಿದ್ದಾಗ ಪಾರ್ಕ್‌ಗೆ ಬೇಲಿ ಹಾಕಿಸಿದ್ದರು. ಅದಕ್ಕೆ ಯಾರೂ ಬೇಡ ಎನ್ನಲಿಲ್ಲ. ಈಗ ಅಭಿವೃದ್ಧಿ ಕೆಲಸಕ್ಕೆ ವಿರೋಧ ಮಾಡುವಿರಾ ಎಂದು ಹೇಳುತ್ತಾ ಎಲ್ಲ ಸದಸ್ಯರು ಸಭಾತ್ಯಾಗಕ್ಕೆ ಮುಂದಾದರು. ಸಭೆಯಿಂದ ಹೊರ ನಡೆಯುವಾಗ ಶಾಸಕ ರೇಣುಕಾಚಾರ್ಯ ಅವರೊಂದಿಗೆ ವಾಗ್ವಾದಕ್ಕಿಳಿದ ಕಾಂಗ್ರೆಸ್ ಸದಸ್ಯರು, ಮೇಜು ಕುಟ್ಟಿ ಮಾತನಾಡಿದ್ದನ್ನು ರೇಣುಕಾಚಾರ್ಯ ಆಕ್ಷೇಪಿಸಿದರು. ಕಾಂಗ್ರೆಸ್ ಸದಸ್ಯರು ಮಾತನಾಡುತ್ತಲೇ ಸಭಾತ್ಯಾಗ ಮಾಡಿದರು.
ಸಭಾತ್ಯಾಗ ಮಾಡಿದವರನ್ನು ಕರೆ ತರಲು ತೇಜಸ್ವಿ ಪಟೇಲ್ ಯತ್ನಿಸಿದರು. ಆದರೆ, ಆ ವೇಳೆಗೆ ಎಲ್ಲಾ ಸದಸ್ಯರು ಜಿಲ್ಲಾ ಪಂಚಾಯತಿಯಿಂದ ಹೊರ ನಡೆದಿದ್ದರು. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಎಂ.ಆರ್. ಮಹೇಶ್ ಮಾತಿಗೆ ಅವರ ಪಕ್ಷದ ಸದಸ್ಯರೇ ಆಕ್ಷೇಪಿಸಿದ್ದು ಕೇಳಿಸಿತು.