ಹೊಸದಿಲ್ಲಿ : ಉಗ್ರ ನಿಗ್ರಹಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಪಾಕಿಸ್ತಾನವನ್ನು ಜಾಗತಿಕ ಹಣಕಾಸು ಕಾರ್ಯಪಡೆ (ಎಫ್ಎಟಿಎಫ್) ಕಟು ಎಚ್ಚರಿಕೆ ರವಾನಿಸಿದ ಬೆನ್ನಲ್ಲೇ, ಪಾಕಿಸ್ತಾನ ಈಗ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾಗಿದೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ತಿಳಿಸಿದ್ದಾರೆ.
ಭಯೋತ್ಪಾದಕರ ವಿರುದ್ಧ ಪಾಕಿಸ್ತಾನ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಮೂಲಕ ಶಾಂತಿಯನ್ನು ಪುನಃಸ್ಥಾಪಿಸಲು ಕೆಲಸ ಮಾಡಬೇಕು, ಇಲ್ಲವಾದಲ್ಲಿ ಮುಂದೆ ಬಿಕ್ಕಟಿನ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ರಾವತ್, ಸದ್ಯ ಪಾಕಿಸ್ತಾನ “ಗ್ರೇ ಲಿಸ್ಟ್’ನಲ್ಲಿ ಗುರುತಿಸಿಕೊಂಡಿದ್ದು, ಜಾಗತಿಕ ಮಟ್ಟದಲ್ಲಿಯೂ ಹಿನ್ನಡೆ ಅನುಭವಿಸುತ್ತಿದೆ ಎಂದರು.
ಭಯೋತ್ಪಾದನಾ ನಿಗ್ರಹ ಹಣಕಾಸು ನಿರ್ವಹಣೆ ಕುರಿತು ಮುಂದಿನ ಫೆಬ್ರುವರಿಯೊಳಗೆ ಸೂಕ್ತ ನಿಲುವು ತೆಗೆದುಕೊಳ್ಳಬೇಕು , ಇಲ್ಲದಿದ್ದಲ್ಲಿ ಅಂತರಾಷ್ಟ್ರೀಯ ಮಟ್ಟದ ಕಠಿಣ ಕ್ರಮವನ್ನು ಎದುರಿಸ ಬೇಕಾಗುತ್ತದೆ ಎಂದು ಜಾಗತಿಕ ಹಣಕಾಸು ಕಾವಲು ಸಂಸ್ಥೆ ಇಸ್ಲಾಮಾಬಾದ್‌ಗೆ ಎಚ್ಚರಿಕೆ ನೀಡಿದೆ.
ಅಲ್ಲದೇ 2018 ರ ಜೂನ್‌ನಲ್ಲಿ ಪಾಕ್ ದೇಶವನ್ನು ಬೂದು ಪಟ್ಟಿಯಲ್ಲಿ ಸೇರಿಸಿದ ನಂತರ ರಚಿಸಲಾದ ಕ್ರಿಯಾ ಯೋಜನೆಯಲ್ಲಿ ಹೆಸರಿಸಿದ 27 ಕಾರ್ಯಗಳ ಪೈಕಿ ಪಾಕ್ ಕೇವಲ 5 ಕೆಲಸಗಳನ್ನು ಮಾತ್ರ ಮಾಡಿದ್ದು, ಅಲ್ಲಿಯೂ ವಿಫಲತೆ ಸಾಧಿಸಿದೆ.
ಇದೀಗ ಪಾಕ್‌ಗೆ ತೀವ್ರ ಬಿಕ್ಕಟಿನ ಪರಿಸ್ಥಿತಿ ಎದುರಾಗಿದ್ದು, ಯುಎನ್ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕರಾದ ಲಷ್ಕರ್-ಎ -ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಭಯೋತ್ಪಾದನಾ ಜೈಶ್- ಎ -ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾವತ್ ಹೇಳಿದ್ದಾರೆ.