Advertisement

ಸ್ಥಳೀಯಾಡಳಿತ ಸಂಸ್ಥೆಗಳಿಗೆ “ಹೋಂ ಕ್ವಾರಂಟೈನ್‌’ನಿಗಾ ಕರ್ತವ್ಯದ ಒತ್ತಡ

12:25 AM Jun 30, 2020 | Sriram |

ಮಹಾನಗರ: ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾ ಇಡುವ, ಅವರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡುವ ಕರ್ತವ್ಯದ ಒತ್ತಡ ಈಗ ಸ್ಥಳೀಯಾಡಳಿತ ಸಂಸ್ಥೆಗಳ ಮೇಲೆ ಬಿದ್ದಿದೆ. ಇದು ಆಡಳಿತ ವ್ಯವಸ್ಥೆಯ ಒಟ್ಟು ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದೇ ಎಂಬ ಆತಂಕ ಮೂಡಿದೆ.

Advertisement

ಇತ್ತೀಚಿನವರೆಗೆ ಜಿಲ್ಲಾಡಳಿತವೇ ತನ್ನ ವಿವಿಧ ತಂಡಗಳ ಮೂಲಕ ನೇರವಾಗಿ ಸಾಂಸ್ಥಿಕ ಕ್ವಾರಂಟೈನ್‌, ಹೋಂ ಕ್ವಾರಂಟೈನ್‌ ಮೇಲೆ ನಿಗಾ ವಹಿಸುತ್ತಿತ್ತು. ಸ್ಥಳೀಯಾಡಳಿತ ಸಂಸ್ಥೆಗಳು ಸಹಕಾರ ನೀಡುತ್ತಿದ್ದವು. ಆದರೆ ಪ್ರಸ್ತುತ ಸ್ಥಳೀಯಾಡಳಿತ ಸಂಸ್ಥೆಗಳಾದ ಗ್ರಾ.ಪಂ., ಪಾಲಿಕೆ, ಪುರಸಭೆ, ಪಟ್ಟಣ ಪಂ.ಗಳಿಗೆ ಹೆಚ್ಚಿನ ಜವಾಬ್ದಾರಿವಹಿಸಲಾಗಿದೆ.

ಇದರಿಂದಾಗಿ ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ದಿನನಿತ್ಯದ ಆಡಳಿತಾತ್ಮಕ ಕೆಲಸದ ಜತೆಗೆ ಹೋಂ ಕ್ವಾರಂಟೈನ್‌ ಕರ್ತವ್ಯವನ್ನು ಕೂಡ ಮಾಡುತ್ತಿವೆ. ಹೋಂ ಕ್ವಾರಂಟೈನ್‌ಗೊಳಗಾಗುವವರ ಸಂಖ್ಯೆ ಹೆಚ್ಚಾದರೆ ಕೆಲವು ಗ್ರಾ.ಪಂ.ಗಳಲ್ಲಿ ಪಿಡಿಒ, ವಿ.ಎ.ಗಳು ಕೆಲಸದ ಒತ್ತಡದಿಂದಾಗಿ ಸಾರ್ವಜನಿಕರಿಗೆ ಲಭ್ಯವಾಗುವುದು ಕೂಡ ಅಪರೂಪವಾಗುವ ಸಾಧ್ಯತೆಗಳಿವೆ.

ಪ್ರತಿದಿನ ಭೇಟಿ ಕಡ್ಡಾಯ
ಗ್ರಾ.ಪಂ.ವ್ಯಾಪ್ತಿಯಲ್ಲಿ ಪಿಡಿಒ ಅಥವಾ ವಿ.ಎ.ಗಳು ತಮ್ಮ ವ್ಯಾಪ್ತಿಯ ಹೋಂ ಕ್ವಾರಂಟೈನ್‌ ಮನೆಗಳಿಗೆ ಪ್ರತಿದಿನವೂ ಭೇಟಿ ನೀಡುವುದನ್ನು ಸರಕಾರ ಕಡ್ಡಾಯಗೊಳಿಸಿದೆ. ಅವರಿಗೆ ಅಸಾಧ್ಯವಾದರೆ ಪಂಚಾಯತ್‌ನ ಸಿಬಂದಿಯನ್ನು ಕಳುಹಿಸಿಕೊಡುತ್ತಿದ್ದಾರೆ.

ಮಹಾನಗರ ಪಾಲಿಕೆಯ ಉಪ ಆಯುಕ್ತರು, ಪುರಸಭೆ, ಪಟ್ಟಣ ಪಂಚಾಯತ್‌ ವ್ಯಾಪ್ತಿಗಳಲ್ಲಿ ಮುಖ್ಯಾಧಿಕಾರಿಯವರು ಹೋಂ ಕ್ವಾರಂಟೈನ್‌ನ ಒಟ್ಟು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

Advertisement

ಪಾಲಿಕೆಯಿಂದ 80 ಸಿಬಂದಿ ಮಹಾನಗರ ಪಾಲಿಕೆವ್ಯಾಪ್ತಿಯಲ್ಲಿ ಹೋಂ ಕ್ವಾರಂಟೈನ್‌ಗಳ ಮೇಲೆ ನಿಗಾ ಇಡುವುದಕ್ಕಾಗಿ ಪಾಲಿಕೆಯ ವಿವಿಧ ಇಲಾಖೆಗಳ ಸುಮಾರು 80 ಮಂದಿಯನ್ನು ನಿಯೋಜಿಸಲಾಗಿದೆ. ಒಟ್ಟು ಮೇಲುಸ್ತುವಾರಿಯನ್ನು ಪಾಲಿಕೆ ಉಪಾಯುಕ್ತ ಸಂತೋಷ್‌ ಕುಮಾರ್‌ ಅವರು ನಿರ್ವಹಿಸುತ್ತಿದ್ದಾರೆ.

ಅಗತ್ಯವಿದ್ದರೆ ಊಟದ ವ್ಯವಸ್ಥೆ
ಸೀಲ್‌ಡೌನ್‌ ಮಾಡಲಾದ ಮನೆಯ ಅಕ್ಕಪಕ್ಕದವರಿಗೂ ಮಾಹಿತಿ ನೀಡಲಾಗುತ್ತದೆ. ಅವರ ಆರೋಗ್ಯದ ಬಗ್ಗೆ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ನಿಗಾ ವಹಿಸುತ್ತಾರೆ. ಹೆಚ್ಚಾಗಿ ಹೋಂ ಕ್ವಾರಂಟೈನ್‌ನಲ್ಲಿರುವವರಿಗೆ ಮನೆಯವರು ಅಥವಾ ಕುಟುಂಬಿಕರು ಊಟ ಒದಗಿಸಿಕೊಡುತ್ತಾರೆ. ಒಂದು ವೇಳೆಅಂತಹ ವ್ಯವಸ್ಥೆ ಇಲ್ಲದಿದ್ದರೆ ಸ್ಥಳೀಯ ಗ್ರಾ.ಪಂ. ಅಥವಾ ಇತರ ಸ್ಥಳೀಯಾಡಳಿತಗಳ ಮೂಲಕ ಊಟ,ಅಗತ್ಯ ವಸ್ತುಗಳಿಗೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ.

ಉಲ್ಲಂಘನೆ ಪ್ರಕರಣ ಕಡಿಮೆ
ಜಿಲ್ಲೆಯ ಹೆಚ್ಚಿನ ಗ್ರಾ.ಪಂ., ಇತರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವವರು ಇದ್ದಾರೆ. ಅವರ ಮೇಲೆ ಮನೆಯವರು, ಸ್ಥಳೀಯರು ಕೂಡ ನಿಗಾ ವಹಿಸುತ್ತಿದ್ದಾರೆ. ಸೋಂಕು ಹರಡುವ ಅಪಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಹಾಗಾಗಿ ಹೋಂ ಕ್ವಾರಂಟೈನ್‌ ಉಲ್ಲಂಘನೆಯ ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆ. ಹೋಂ ಕ್ವಾರಂಟೈನ್‌ ಮೇಲೆ ನಿಗಾ ಇಡುವುದು ಈಗ ನಮಗೆ ಹೆಚ್ಚುವರಿ ಕರ್ತವ್ಯ ಹೌದು. ಆದರೆ ಇದು ಅನಿವಾರ್ಯ. ಎಲ್ಲರ ಹಿತದೃಷ್ಟಿಯಿಂದಲೂ ಅಗತ್ಯ. ಇದನ್ನು ತುಂಬಾ ಜವಾಬ್ದಾರಿಯಿಂದಲೇ ನಿರ್ವಹಿಸುತ್ತಿದ್ದೇವೆ ಎನ್ನುತ್ತಾರೆ ದ.ಕ. ಜಿಲ್ಲೆಯ ಹಲವು ಮಂದಿ ಪಿಡಿಒಗಳು.

 ಪ್ರಕರಣ ದಾಖಲಿಸಲು ಅಧಿಕಾರ
ಹೋಂ ಕ್ವಾರಂಟೈನ್‌ ಸಮರ್ಪಕವಾಗಿ ನಡೆಯುವಂತೆ ನಿಗಾ ವಹಿಸುವ ಹೆಚ್ಚಿನ ಜವಾಬ್ದಾರಿಯನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀಡಲಾಗಿದೆ. ಹೋಂ ಕ್ವಾರಂಟೈನ್‌ ನಿಯಮ ಉಲ್ಲಂ ಸುವವರ ವಿರುದ್ಧ ಪ್ರಕರಣ ದಾಖಲಿಸುವ ಅಧಿಕಾರ ಇದುವರೆಗೆ ತಹಶೀಲ್ದಾರ್‌ ಅವರಿಗೆ ನೀಡಲಾಗಿತ್ತು. ಪ್ರಸ್ತುತ ಈ ಅಧಿಕಾರವನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರು, ಪಾಲಿಕೆ ಆಯುಕ್ತರು, ಪುರಸಭೆ, ಪಟ್ಟಣ ಪಂಚಾಯತ್‌ಗಳ ಮುಖ್ಯಾಧಿಕಾರಿಯವರಿಗೂ ನೀಡಲಾಗಿದೆ.
– ಗುರುಪ್ರಸಾದ್‌, ತಹಶೀಲ್ದಾರ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next