Advertisement
ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ಟಿ20 ಕ್ರಿಕೆಟ್ ಕೂಟವೇ ಐಪಿಎಲ್, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದಿದ್ದರೂ ಪರವಾಗಿಲ್ಲ, ಕನಿಷ್ಟ ಐಪಿಎಲ್ ಆಡಿದರೂ ಸಾಕು ಎಂದು ಕನಸು ಹೊತ್ತಿರುವ ಅದೆಷ್ಟೊ ಕ್ರಿಕೆಟಿಗರಿದ್ದಾರೆ. ವಿಶ್ವದ ಯಾವುದೇ ಟಿ20 ಆಡಿದರೂ ಕ್ರಿಕೆಟಿಗರ ಜೀವನ ಆರ್ಥಿಕವಾಗಿ ಸುಭದ್ರವಾಗುತ್ತದೆ ಎನ್ನುವ ಖಾತ್ರಿಯಿಲ್ಲ. ಆದರೆ ಒಂದು ಬಾರಿ ಐಪಿಎಲ್ ಆಡಿದರೆ ಪೂರ್ಣ ಜೀವನವೇ ಸೆಟ್ಲ ಆಗುತ್ತದೆ ಎನ್ನುವ ಎಷ್ಟೋ ಕ್ರಿಕೆಟಿಗರಿದ್ದಾರೆ. ಹೀಗಾಗಿ ಪೂರ್ಣ ಐಪಿಎಲ್ ನಡೆಸಲು ಸಾಧ್ಯವಾಗದಿದ್ದರೆ ಏನಂತೆ ಕಿರು ಕೂಟವನ್ನಾದರೂ ನಡೆಸಿ ಎನ್ನುವ ಕೂಗು ತೆರೆಮರೆಯಲ್ಲಿ ಕೇಳಿ ಬರುತ್ತಿದೆ.
ಪ್ರೇಕ್ಷಕರಿಲ್ಲದೆ ಕೂಡ ಐಪಿಎಲ್ ಆಡಲು ಆಟಗಾರರು ಆಸಕ್ತಿ ತೋರಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಮಾತನಾಡಿ ಹೇಳಿದ್ದು ಹೀಗೆ, “ಈ ಸಲ ಐಪಿಎಲ್ ನಡೆಯುತ್ತದೆ ಎನ್ನುವುದು ನನ್ನ ಬಲವಾದ ನಂಬಿಕೆ. ವಿಶ್ವದ ಪ್ರತಿಯೊಬ್ಬ ಕ್ರಿಕೆಟಿಗನೂ ಐಪಿಎಲ್‌ನಲ್ಲಿ ಆಡುವ ಉತ್ಕಟ ಬಯಕೆ ಹೊಂದಿರುತ್ತಾನೆ, ಹೀಗಾಗಿ ಮೂರು ಅಥವಾ ನಾಲ್ಕು ವಾರಗಳ ಕಿರು ಐಪಿಎಲ್ ನಡೆಸಿ, ಮುಚ್ಚಿದ ಬಾಗಿಲಿನಲ್ಲಿ ಮೂರು ಕ್ರೀಡಾಂಗಣದಲ್ಲಿ 8 ತಂಡಗಳ ನಡುವೆ ಹಣಾಹಣಿ ನಡೆಯಲಿ, ಆರ್ಥಿಕ ಸಂಕಷ್ಟ ಎದುರಾಗಿರುವ ಸಂದರ್ಭದಲ್ಲಿ ಇದು ಅನಿವಾರ್ಯ, ಇದರಿಂದ ಫ್ರಾಂಚೈಸಿಗೆ ಸ್ವಲ್ಪ ಆದಾಯ ಬರುತ್ತದೆ’ ಎಂದು ಪೀಟರ್ಸನ್ ಸಲಹೆ ನೀಡಿದ್ದಾರೆ. ಎಪ್ರಿಲ್ 15ಕ್ಕೆ ನಿರ್ಧಾರ ?
ಸದ್ಯ ಭಾರತದಲ್ಲಿ ಲಾಕ್‌ಡೌನ್ ಅವಧಿ ಮುಕ್ತಾಯವಾಗಿಲ್ಲ, ಎ. 14ರ ವರೆಗೆ ಇರಲಿದೆ. ಪರಿಸ್ಥಿತಿ ನೋಡಿಕೊಂಡು ಸರಕಾರ ಲಾಕ್‌ಡೌನ್ ಹಿಂದೆಗೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಎಪ್ರಿಲ್ 15ರಂದು ಐಪಿಎಲ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಕೊರೊನಾ ವೈರಸ್ ಪ್ರಕರಣಗಳು ದೇಶದಲ್ಲಿ ಏರುತ್ತಲೇ ಇರುವುದರಿಂದ ಐಪಿಎಲ್‌ಗೆ ಅವಕಾಶ ಸಿಗುವುದು ಕಷ್ಟ. ಮೇ ಮೊದಲ ವಾರದೊಳಗೆ ಐಪಿಎಲ್ ನಡೆಸಲು ಸಾಧ್ಯವಾಗದಿದ್ದರೆ ಈ ಸಲ ಐಪಿಎಲ್ ಕೂಟವನ್ನು ಸಂಪೂರ್ಣ ರದ್ದುಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಐಪಿಎಲ್ 13ನೇ ಆವೃತ್ತಿಯನ್ನು 2021ಕ್ಕೆ ಆಯೋಜಿಸುವ ಚಿಂತನೆ ಇಟ್ಟುಕೊಳ್ಳಲಾಗಿದೆ ಎನ್ನಲಾಗಿದೆ.