Advertisement

ಮೇ 1: ಯಶಸ್ವಿ 5 ವರ್ಷ ಪೂರೈಕೆ: ವಂ|ರಿಚರ್ಡ್‌ ಕುವೆಲ್ಲೊ

08:40 AM Apr 30, 2018 | Karthik A |

ಬಂಟ್ವಾಳ: ಫಾದರ್‌ ಮುಲ್ಲರ್‌ ಸೇವಾ ಸಂಸ್ಥೆಯ ಆಡಳಿತದಲ್ಲಿ  ಸಾರ್ಥಕ 5ನೇ ವರ್ಷ ಪೂರೈಸಲಿರುವ ತುಂಬೆ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಮೇ 1ರಂದು  ಉಚಿತ ಆರೋಗ್ಯ ತಪಾಸಣೆ, ರಕ್ತದಾನ, ನೇತ್ರ ತಪಾಸಣೆ ಶಿಬಿರ, ಉಚಿತ ಕನ್ನಡಕ ವಿತರಣೆ, ಸಂಜೆ 6ಕ್ಕೆ ಸಭಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಂಗಳೂರು ಧರ್ಮ ಪ್ರಾಂತದ ಧರ್ಮಾಧ್ಯಕ್ಷ  ವಂ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಫಾದರ್‌ ಮುಲ್ಲರ್‌ ಸೇವಾ ಸಂಸ್ಥೆಗಳ ನಿರ್ದೇಶಕ ವಂ| ರಿಚರ್ಡ್‌ ಕುವೆಲ್ಲೊ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ, ಮಂಗಳೂರು ಕಂಕನಾಡಿಯಲ್ಲಿ 138 ವರ್ಷಗಳ ಹಿಂದೆ ಫಾ| ಅಗಸ್ಟಸ್‌ ಮುಲ್ಲರ್‌ ಆರಂಭಿಸಿದ ಸಂಸ್ಥೆ ಫಾದರ್‌ ಮುಲ್ಲರ್‌ ಆಸ್ಪತ್ರೆ. ತುಂಬೆಯ ಫಾದರ್‌ ಮುಲ್ಲರ್‌ ಆಸ್ಪತ್ರೆಯನ್ನು 2013ರ ಮೇ1ರಂದು ತುಂಬೆಯ ಬಿ.ಎ. ಸಮೂಹ ಸಂಸ್ಥೆಯಿಂದ ಫಾದರ್‌ ಮುಲ್ಲರ್‌ ಸೇವಾ ಸಂಸ್ಥೆಯ ಆಡಳಿತಕ್ಕೆ ಒಳಪಡಿಸಿ 2013ರ ಜೂ. 2 ರಂದು ಉದ್ಘಾಟನೆಗೊಂಡಿತು. ಮಂಗಳೂರಿನ ಧರ್ಮಾಧ್ಯಕ್ಷ ಅಲೋಶಿಯಸ್‌ ಪೌಲ್‌ ಡಿ’ಸೋಜಾ ನೂತನ ಆಸ್ಪತ್ರೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ್ದರು.

Advertisement

ವಿವಿಧ ಸೇವೆಗಳು
ಮಲ್ಟಿ ಸ್ಪೆಷಾಲಿಟಿ 150 ಹಾಸಿಗೆಗಳ ಆಸ್ಪತ್ರೆ ಇದಾಗಿದ್ದು, ಮೆಡಿಸಿನ್‌, ಹೃದಯರೋಗ ಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಮನೊರೋಗ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ಮೂಗು, ಕಿವಿ, ಗಂಟಲು ಚಿಕಿತ್ಸೆ, ನರರೋಗ ಚಿಕಿತ್ಸೆ, ಮೂಳೆ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ಸ್ತ್ರೀರೋಗ ಚಿಕಿತ್ಸೆ, ದಂತ ಚಿಕಿತ್ಸೆ  ಮತ್ತಿತರ ಪ್ರಮುಖ ವಿಭಾಗಗಳಲ್ಲಿ ವೈದ್ಯರು ಲಭ್ಯವಿದ್ದು, ನವಜಾತ ಶಿಶುವಿನ ತೀವ್ರ ನಿಗಾ ಘಟಕ, ಕಣ್ಣಿನ ಶಸ್ತ್ರಚಿಕಿತ್ಸೆ ಕೊಠಡಿ, ಫಿಸಿಯೋಥೆರಪಿ, ಸುಸಜ್ಜಿತ ಶಸ್ತ್ರಚಿಕಿತ್ಸೆ ಕೊಠಡಿಗಳು, ಮೆಡಿಕಲ್‌ ಲ್ಯಾಬೋರೇಟರಿ, ಶಸ್ತ್ರಚಿಕಿತ್ಸೆ ಅನಂತರದ ನಿಗಾ ವಿಭಾಗ, ತೀವ್ರ ನಿಗಾ ವಿಭಾಗ, ವೆಂಟಿಲೇಟರ್‌, ಆಕ್ಸಿಜನ್‌ ವ್ಯವಸ್ಥೆ, ಲ್ಯಾಪ್ರೊಸ್ಕೋಪಿಕ್‌ ಸರ್ಜರಿ ಸೌಲಭ್ಯ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌, ಎಲೆಕ್ಟ್ರೋಟಕಾರ್ಡಿಯೋಗ್ರಫಿ, ಎಕ್ಸ್‌ರೇ, ಸಿಟಿಸ್ಕ್ಯಾನ್‌, ಮೆಡಿಕಲ್‌ ಸ್ಟೋರ್‌, ಆ್ಯಂಬುಲೆನ್ಸ್‌, ಶವಾಗಾರದ ವ್ಯವಸ್ಥೆಯೂ ಇಲ್ಲಿ ಲಭ್ಯವಿದೆ.  ಲೊರೆಟ್ಟೊ, ಬಡಗಬೆಳ್ಳೂರು, ಕೆನರಾ ಕಾಲೇಜ್‌ ಅಮ್ಮುಂಜೆ, ಜಾರಂದ ಗುಡ್ಡೆ, ಅಮೆಮ್ಮಾರ್‌, ಬೊಳ್ಳಾರಿ, ಉಳಾಯಿ ಬೆಟ್ಟುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಗಳ ಮುಖಾಂತರ ಸೇವೆ ನೀಡಲಾಗುತ್ತದೆ.

ಹೆಲ್ತ್‌ ಕಾರ್ಡ್‌ ಸದಸ್ಯತ್ವ
5 ವರ್ಷಗಳಲ್ಲಿ ಸುಮಾರು 75 ಸಾವಿರ ಹೊರರೋಗಿಗಳು,  6 ಸಾವಿರ ಒಳರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗಿದೆ. 18 ಸಾವಿರಕ್ಕಿಂತ ಅಧಿಕ ಜನರು ಫಾದರ್‌ ಮುಲ್ಲರ್‌ ಆಸ್ಪತ್ರೆ ತುಂಬೆಯ  ಹೆಲ್ತ್‌ ಕಾರ್ಡ್‌ ಸದಸ್ಯತ್ವವನ್ನು ಹೊಂದಿದ್ದಾರೆ ಎಂದು ವಿವರಿಸಿದರು. 2017-18ರಲ್ಲಿ  65 ಲಕ್ಷ ರೂ.ಉಚಿತ ಚಿಕಿತ್ಸೆಗೋಸ್ಕರ ವಿನಿಯೋಗಿಸಲಾಗಿದೆ.  ಜನರಲ್‌ ವಾರ್ಡ್‌ ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ, ಆಸ್ಪತ್ರೆ ಸಿಬಂದಿಗೆ ಸಬ್ಸಿಡಿ ದರದಲ್ಲಿ ಊಟದ ವ್ಯವಸ್ಥೆ ಆರಂಭಿಸಲಾಗಿದೆ.

ವಿಮಾ ಸೌಲಭ್ಯ
ಸಂಪೂರ್ಣ ಸುರಕ್ಷ, ಯಶಸ್ವಿನಿ ಯೋಜನೆ, ಸ್ಟಾರ್‌ ಹೆಲ್ತ್‌ ವಿಮೆ, ರೆಲಿಗೆರ್‌ ಹೆಲ್ತ್‌ ವಿಮೆ, ಕೆಸಿಸಿ ಕಾರ್ಡ್‌, ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ ಮತ್ತಿತರ ವಿಮಾ ಸೌಲಭ್ಯ ಗಳು ದೊರೆಯುತ್ತವೆ ಎಂದರು. ಸಂಸ್ಥೆಯ ಆರಂಭದಲ್ಲಿ ಫಾ| ರುಡಾಲ್ಫ್ ಡೇಸಾ ಅವರ ಸೇವೆ ಸ್ಮರಣೀಯ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ವಂ| ರೋಶನ್‌ ಕ್ರಾಸ್ತಾ, ವೈದ್ಯಕೀಯ ಅಧೀಕ್ಷಕ ಡಾ| ಕಿರಣ್‌ ಶೆಟ್ಟಿ, ನರ್ಸಿಂಗ್‌ ಸೂಪರ್‌ವೈಸರ್‌ ನಿಶಾ ಲೋಬೋ ಉಪಸ್ಥಿತರಿದ್ದರು.

ವಿಶೇಷ ಹೆಲ್ತ್‌ಕಾರ್ಡ್‌ 
ಕಾರ್ಯಕ್ರಮದಲ್ಲಿ 1 ವರ್ಷದ ಅವಧಿಗೆ ಆಸ್ಪತ್ರೆಯಿಂದ ವಿಶೇಷ ಹೆಲ್ತ್ ಕಾರ್ಡ್‌ ಯೋಜನೆಯನ್ನು ಅನಾವರಣ ಮಾಡಲಾಗುವುದು. ಇದರಲ್ಲಿ ಕಳೆದ ಅವಧಿಗಿಂತ ಹೆಚ್ಚಿನ ಪ್ರಮಾಣದ ಶೇಕಡವಾರು ರಿಬೇಟ್‌ ನೀಡಲಾಗುವುದು. ರಕ್ತನಿಧಿ ಸ್ಥಾಪನೆ, ತೀವ್ರ ನಿಗಾ ಸೆಂಟರ್‌ ನಿರ್ಮಾಣ ಗುರಿ ಹೊಂದಿದೆ. ಕಂಕನಾಡಿ ಆಸ್ಪತ್ರೆಯಲ್ಲಿ 24 ಡಯಾಲಿಸಿಸ್‌ ಯಂತ್ರಗಳಿದ್ದು, ಮುಂದಿನ ದಿನಗಳಲ್ಲಿ ತುಂಬೆಯಲ್ಲಿಯೂ ಅಳವಡಿಕೆ ಬಗ್ಗೆ ಪರಿಶೀಲಿಸುತ್ತಿದೆ. ಪರಿಶುದ್ಧ ನೀರಿನ ಲಭ್ಯತೆಯೊಂದಿಗೆ ಮುಂದಿನ ಕ್ರಮ ಮಾಡಲಾಗುವುದು.
– ವಂ| ರಿಚರ್ಡ್‌ಕುವೆಲ್ಲೊ

Advertisement
Advertisement

Udayavani is now on Telegram. Click here to join our channel and stay updated with the latest news.

Next